ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನವಜಾತ ಶಿಶುಗಳ ಜನನದ ನಂತರ ಆರಂಭದ ಸಾವಿರ ದಿನಗಳು ಮಗುವಿನ ಭೌತಿಕ ಹಾಗೂ ಬೌದ್ಧಿಕ ಬೆಳವಣಿಗೆ ವೃದ್ಧಿಗೆ ಉತ್ತಮ ಸಮಯವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಪರ್ಶ್-ದಿ ಫಸ್ಟ್-1000 ಡೇಸ್ ಆಫ್ ಲೈಫ್’ ಎನ್ನುವ ಸಂಶೋಧನಾ ಯೋಜನೆಗೆ 5 ತಿಂಗಳ ಹಿಂದೆಯೇ ಚಾಲನೆ ನೀಡಲಾಗಿದ್ದು ಜಿಲ್ಲೆಯಲ್ಲಿ ಮಾದರಿ ಅಧ್ಯಯನ ನಡೆಸಲಾಗುತ್ತಿದೆ ಎಂದು ನವದೆಹಲಿಯ ಐಸಿಎಂಆರ್ ಹೆರಿಗೆ ವಿಭಾಗದ ಮುಖ್ಯಸ್ಥೆ ಡಾ.ಅಶೂ ಗ್ರೋವರ್ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕರ್ನಾಟಕ ಆರೋಗ್ಯ ಸಂವರ್ಧನ ಟ್ರಸ್ಟ್ ಹಾಗೂ ಸೆಂಟ್ ಜಾನ್ಸ್ ಸಂಶೋಧನಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಐಸಿಎಂಆರ್ ಸಂಶೋಧನಾ ಕೇಂದ್ರದಿಂದ ಸ್ಪರ್ಶ್-ದಿ ಫಸ್ಟ್-1000 ಡೇಸ್ ಆಫ್ ಲೈಫ್ ಯೋಜನೆ ಅನುಷ್ಠಾನದ ಬಗ್ಗೆ ಕೂಲಂಕೂಷವಾಗಿ ಅಧ್ಯಯನ ನಡೆಸಲಾಗುತ್ತಿದೆ. ಮಗುವಿನ ಜನನದಿಂದ ಸಾವಿರ ದಿನಗಳವರೆಗೆ ಉತ್ತಮ ಆರೋಗ್ಯ ವೃದ್ಧಿಪಡಿಸಲು ಹಲವು ರೀತಿಯ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ದೇಶಾದ್ಯಂತ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಯೋಜನೆ ಅನುಷ್ಠಾನಕ್ಕೆ ತರಲು ರಾಜ್ಯ ಮಟ್ಟದ ಹಾಗೂ ಸ್ಥಳೀಯ ಆರೋಗ್ಯ ಸಂಸ್ಥೆಗಳ ಜತೆ ಕೈ ಜೋಡಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಜಿಲ್ಲಾ ಆಸ್ಪತ್ರೆಗಳು ಉತ್ತಮ ಸೌಲಭ್ಯಗಳನ್ನು ಜನರಿಗೆ ನೀಡುತ್ತಿವೆ. ನವದೆಹಲಿ ಅಥವಾ ಬೆಂಗಳೂರಿನಲ್ಲಿ ಕುಳಿತು ಯೋಜನೆಯನ್ನು ರೂಪಿಸಿ ಸುಮ್ಮನೆ ಕುಳಿತರೆ ಯಶಸ್ವಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಜಿಲ್ಲಾ ಆಸ್ಪತ್ರೆಗಳು ವಾಸ್ತವಿಕವಾಗಿ ಎದುರಿಸುತ್ತಿರುವ ತೊಂದರೆ ಹಾಗೂ ಸವಾಲುಗಳ ಕುರಿತು ಮಾಹಿತಿ ನೀಡಬೇಕು. ಇದರಿಂದ ಅಗತ್ಯ ಯಂತ್ರೋಪಕರಣ, ಔಷಧೋಪಚಾರ ಹಾಗೂ ಸವಲತ್ತುಗಳನ್ನು ಉನ್ನತೀಕರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಸಹಜ ಹೆರಿಗೆ, ಅವಧಿಗೆ ಮುನ್ನ ಹೆರಿಗೆ, ಕಡಿಮೆ ತೂಕ, ಮಕ್ಕಳ ಜನನವಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯವಿಧಾನಗಳ ಬಗ್ಗೆ ಮಾರ್ಗ ಸೂಚಿಗಳನ್ನು ರಚಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮಾದರಿ ಅಧ್ಯಯನದಲ್ಲಿ ಕಂಡುಬರುವ ಅಂಶಗಳನ್ನು ಪರಿಗಣಿಸಿ ಹೆಚ್ಚು ಪರಿಣಾಮ ಬೀರುವ ಕಾರ್ಯತಂತ್ರಗಳನ್ನು ಐಸಿಎಂಆರ್ ರೂಪಿಸಲಿದೆ. ಇದು ದೇಶದ ಬೇರೆ ಜಿಲ್ಲೆ ಹಾಗೂ ಭಾಗಗಳ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಬಹುದು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್ ಮಾತನಾಡಿ, ಸ್ಪರ್ಶ್-ದಿ ಫಸ್ಟ್-1000 ಡೇಸ್ ಆಫ್ ಲೈಫ್ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿ ಮಾಡಿ ಐದು ತಿಂಗಳಾಗಿದೆ. ಈ ಅವಧಿಯಲ್ಲಾದ ಉತ್ತಮ ಕಾರ್ಯಗಳು ಹಾಗೂ ಎದುರಿಸಿದ ಅಡಚಣೆಗಳ ಬಗ್ಗೆ ಅವಲೋಕನ ನಡೆಸಲು ಕಾರ್ಯಾಗಾರ ನೆರವಾಗಲಿದೆ. ಇದರಿಂದ ಮುಂದಿನ ದಿನಗಳಿಗೆ ಹೇಗೆ ಕಾರ್ಯತಂತ್ರಗಳನ್ನು ರೂಪಿಸಬಹುದು ಎಂಬುದು ತಿಳಿದು ಬರಲಿದೆ ಎಂದರು. ಈ ಯೋಜನೆಯಡಿ ಕಡಿಮೆ ತೂಕದೊಂದಿಗೆ ಜನಿಸಿದ ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಿ ಆರೋಗ್ಯ ಸುಧಾರಿಸುವಂತೆ ಮಾಡಲಾಗಿದ್ದು ಈ ಕುರಿತು ಮಗುವಿನ ತಾಯಿ ಪ್ರಶಾಂತ ನಗರದ ಚಂದನ ತನ್ನ ಅನಿಸಿಕೆಗಳನ್ನು ತಿಳಿಸಿದರು.
ಕಾರ್ಯಾಗಾರದಲ್ಲಿ ನವಜಾತ ಹಾಗೂ 2 ವರ್ಷದ ಒಳಗಿನ ಮಕ್ಕಳ ಚಿಕಿತ್ಸಾ ವಿಧಾನ ಕುರಿತು ವೈದ್ಯರಿಗೆ ತರಬೇತಿ ನೀಡಲಾಯಿತು.ಈ ಸಂದರ್ಭದಲ್ಲಿ ಐಸಿಎಂಆರ್ ನ ಡಾ.ಆಮ್ಲಿನ್ ಶುಕ್ಲಾ, ಕೆ.ಎಚ್‌ಟಿಪಿ ಯೋಜನಾ ಮುಖ್ಯಸ್ಥೆ ಡಾ.ಪ್ರಾರ್ಥನಾ, ಹಿರಿಯ ವ್ಯವಸ್ಥಾಪಕಿ ಡಾ.ಆಯಿಷಾ, ಜಿಲ್ಲಾ ಆರ್ ಸಿ ಎಚ್‍ಒ ಡಾ.ಅಭಿನವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್‍ಕುಮಾರ್, ಸೆಂಟ್ ಜಾನ್ಸ್ ಸಂಶೋಧನಾ ಸಂಸ್ಥೆಯ ಡಾ.ಪ್ರೇಮ್ ಮೌನಿ, ಡಾ.ಸುಮನ್ ರಾವ್, ಜಿಲ್ಲಾ ಸಂಯೋಜಕಿ ಬಿ.ವೀಣಾ, ತಾಲೂಕು ಸಂಯೋಜಕಿ ಮೇಘಾ ಮುಂತಾದವರು ಉಪಸ್ಥಿತರಿದ್ದರು.