ಹಾವೇರಿ: ಜಿಲ್ಲೆಯು ಐತಿಹಾಸಿಕ ಕ್ಷೇತ್ರವಾಗಿದ್ದು, ಧಾರ್ಮಿಕ ಸಂಪ್ರದಾಯಗಳು, ಜನಜೀವನ, ಭಾಷೆ, ಸಾಹಿತ್ಯ, ಶಿಕ್ಷಣ, ಕಲೆಗಳ ಆಗರವಾಗಿದೆ. ಸಮುದಾಯದ ಐಕ್ಯತೆಯನ್ನು ಅದರ ಸಮೃದ್ಧಿಯನ್ನು ಇಂತಹ ಶಿಬಿರಗಳಿಂದ ಅಧ್ಯಯನ ಮಾಡಲು ಸಾಧ್ಯ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಟಿ. ಬಾಗಲಕೋಟೆ ಅಭಿಪ್ರಾಯಪಟ್ಟರು.ಸ್ಥಳೀಯ ಕೆ.ಎಲ್.ಇ. ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ ಕನ್ನಡ ವಿಭಾಗ ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ 532ನೇ ವ್ಯಾಸಂಗ ವಿಸ್ತರಣಾ ಉಪನ್ಯಾಸ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಮಾತನಾಡಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡಾಗ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ಸುದೀರ್ಘವಾಗಿ ಹರಿದು ಜಿಲ್ಲಾಧ್ಯಯನದ ಅರಿವನ್ನು ಮೂಡಿಸಲು ಸಾಧ್ಯವಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಕವಿವಿ ಧಾರವಾಡದ ಸಂಪನ್ಮೂಲ ವ್ಯಕ್ತಿ ಲಿಂಗರಾಜ ಕಮ್ಮಾರ ಮಾತನಾಡಿ, ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮ ಭಾರತ ಸ್ವಾತಂತ್ರ್ಯ ಸಂದರ್ಭದಲ್ಲಿ ಅವರ ಕೂಡುಗೆ ಅಪಾರವಾಗಿದೆ. ಅವರನ್ನು ಯುವಪೀಳಿಗೆಗೆ ನೆನಪಿಸಿ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಾವೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಸ್ವಾತಂತ್ರ್ಯ ಭವನವನ್ನು ನಿರ್ಮಿಸುವುದು ನಮ್ಮೆಲ್ಲರ ಬಯಕೆಯಾಗಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥರು, ಡಾ. ಸಂಜೀವ ನಾಯಕ ಅತಿಥಿಗಳನ್ನು ಪರಿಚಯಿಸಿದರು. ಡಾ. ಸಿದ್ಧಪ್ಪ ಎನ್., ಐಕ್ಯೂಎಸಿ, ಸಂಯೋಜಕಿ ಪ್ರೊ. ರೂಪ ಕೋರೆ ಉಪಸ್ಥಿತರಿದ್ದರು. ಪ್ರೊ.ಶ್ರೀದೇವಿ ದೊಡ್ಡಮನಿ ನಿರೂಪಿಸಿದರು. ಪ್ರೊ. ಶಂಭನಗೌಡ ನೀರಲಗಿ ವಂದಿಸಿದರು.