ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿ ಹಲವು ಕಾಮಗಾರಿ

KannadaprabhaNewsNetwork | Published : Mar 8, 2024 1:49 AM

ಸಾರಾಂಶ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರವೇ ಪೂರ್ಣಗೊಳಿಸಲಾಗುವುದು. ಈಗಾಗಲೇ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಪ್ರಧಾನಮಂತ್ರಿ ಆವಾಜ್ ಯೋಜನೆ ಅಡಿ 2048 ಗುಂಪು ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಬೀದಿಬದಿ ವ್ಯಾಪಾರಿಗಳಿಗೆ ಸುಸಜ್ಜಿತವಾದ ಫುಡ್ ಕೋರ್ಟ್ ನಗರದ ವಿವಿಧಡೆ ನಿರ್ಮಿಸಲಾಗುತ್ತಿದೆ ಎಂದು ಅಧ್ಯಕ್ಷೆ ಲತಾ ಚಂದ್ರಶೇಖರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಭದ್ರಾವತಿ

ನಗರಸಭೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಹೇಳಿದರು.

ಗುರುವಾರ ನಗರಸಭೆ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಪ್ರಧಾನಮಂತ್ರಿ ಆವಾಜ್ ಯೋಜನೆ ಅಡಿ 2048 ಗುಂಪು ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಬೀದಿಬದಿ ವ್ಯಾಪಾರಿಗಳಿಗೆ ಸುಸಜ್ಜಿತವಾದ ಫುಡ್ ಕೋರ್ಟ್ ನಗರದ ವಿವಿಧಡೆ ನಿರ್ಮಿಸಲಾಗುತ್ತಿದೆ. ₹215 ಲಕ್ಷ ವೆಚ್ಚದಲ್ಲಿ ಗಾಂಧಿ ವೃತ್ತ ಸಮೀಪ ಕನ್ಸರ್ವೆನ್ಸಿ ರಸ್ತೆಯಲ್ಲಿ, ₹44 ಲಕ್ಷ ವೆಚ್ಚದಲ್ಲಿ ಬಸವೇಶ್ವರ ವೃತ್ತ ಬಳಿ, ₹40 ಲಕ್ಷ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ಹಾಗೂ ₹40 ಲಕ್ಷ ವೆಚ್ಚದಲ್ಲಿ ಜನಪುರ ಜನ್ನಾಪುರ ಕಮರ್ಷಿಯಲ್ ಸ್ಟ್ರೀಟ್ ಬಳಿ ಕನ್ಸರ್ವೆನ್ಸಿಯಲ್ಲಿ ಫುಡ್ ಕೋರ್ಟ್‌ಗಳನ್ನು ನಿರ್ಮಿಸಲಾಗುವುದು. ಈ ಸಂಬಂಧ ಮಂಜೂರಾತಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ ಎಂದರು.

ಸರ್ಕಾರದ ಆದೇಶದಂತೆ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳು ಮುಂತಾದವುಗಳು ತಮ್ಮ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಪ್ರದರ್ಶಿಸಬೇಕಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ನಗರದ ಬಿ.ಎಚ್. ರಸ್ತೆ ಅಂಡರ್ ಬ್ರಿಡ್ಜ್ ಬಳಿ 12 ಅಡಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ರಾಜ್ಯ ಸರ್ಕಾರ ಈ ಬಾರಿ ಆಯವ್ಯಯದಲ್ಲಿ ಅತ್ಯಾಧುನಿಕ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಮಾಡಲು ₹10 ಕೋಟಿ ಅನುದಾನ ಮಂಜೂರಾತಿ ಮಾಡಿದ್ದು, ಕಾಮಗಾರಿ ಕೈಗೊಳ್ಳಲು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು, ಶಿವಮೊಗ್ಗ ಅವರಿಗೆ ನಿವೇಶನ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ವಿವಿಧೆಡೆ ಒಟ್ಟು ₹230 ಲಕ್ಷ ಅನುದಾನದಲ್ಲಿ ಸಮುದಾಯ ಶೌಚಾಲಯ, ಸಾರ್ವಜನಿಕ ಶೌಚಾಲಯ, ಆಸ್ಪಿರಿಯೇಶನಲ್ ಪಬ್ಲಿಕ್ ಟಾಯ್ಲೆಟ್ ಹಾಗೂ ಮೂತ್ರಾಲಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪರಿಸರ ಅಭಿಯಂತರ ಪ್ರಭಾಕರ್, ಕಂದಾಯ ಅಧಿಕಾರಿ ರಾಜ್‌ಕುಮಾರ್, ವ್ಯವಸ್ಥಾಪಕಿ ಸುನಿತಾಕುಮಾರಿ ಇನ್ನಿತರ ಅಧಿಕಾರಿಗಳು, ಸಿಬ್ಬಂದಿ, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

- - - ಕೋಟ್‌ ಪೇ ಜಲ್ ಸರ್ವೇಕ್ಷಣಿಗೆ ರಾಜ್ಯದಿಂದ ನಗರಸಭೆ ನೀರು ಸರಬರಾಜು ವಿಭಾಗ ಆಯ್ಕೆಯಾಗಿದೆ. ರಾಷ್ಟ್ರಪತಿಯವರು ಪ್ರಶಸ್ತಿ ನೀಡಲಿದ್ದು, ಇದು ಸಂತೋಷದ ಸಂಗತಿಯಾಗಿದೆ. ನಗರದ ಸಿ.ಎನ್ ರಸ್ತೆ ಮಾಧವಚಾರ್ ವೃತ್ತದಿಂದ ರಂಗಪ್ಪ ವೃತ್ತದ ವರೆಗೆ ಡಾ. ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ

- ಲತಾ ಚಂದ್ರಶೇಖರ್‌, ಅಧ್ಯಕ್ಷೆ, ನಗರಸಭೆ, ಭದ್ರಾವತಿ

- - - -ಡಿ7-ಬಿಡಿವಿಟಿ1:

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷೆ ಲತಾ ಚಂದ್ರಶೇಖರ್ ಮಾಹಿತಿ ನೀಡಿದರು.

Share this article