ಮರಗಮ್ಮದೇವಿ ನೂತನ ದೇಗುಲ ಲೋಕಾರ್ಪಣೆ ಸಂಭ್ರಮ

KannadaprabhaNewsNetwork | Published : Jul 10, 2024 12:38 AM

ಸಾರಾಂಶ

ರಂಗಂಪೇಟೆ-ತಿಮ್ಮಾಪುರದ ಮರಗಮ್ಮದೇವಿಯ ನೂತನ ದೇವಸ್ಥಾನದ ಉದ್ಘಾಟನೆ, ದೇವಿಯ ರಜತಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭವು ಮಂಗಳವಾರ ಭಕ್ತಸಾಗರದ ಶ್ರದ್ಧಾ-ಭಕ್ತಿ, ಹರ್ಷೋಲ್ಲಾಸದ ನಡುವೆ ಬಹು ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಸುರಪುರ

ಸಮೀಪದ ರಂಗಂಪೇಟೆ-ತಿಮ್ಮಾಪುರದ ಮರಗಮ್ಮದೇವಿಯ ನೂತನ ದೇವಸ್ಥಾನದ ಉದ್ಘಾಟನೆ, ದೇವಿಯ ರಜತಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭವು ಮಂಗಳವಾರ ಭಕ್ತಸಾಗರದ ಶ್ರದ್ಧಾ-ಭಕ್ತಿ, ಹರ್ಷೋಲ್ಲಾಸದ ನಡುವೆ ಬಹು ವಿಜೃಂಭಣೆಯಿಂದ ನೆರವೇರಿತು.

ಸಮಾರಂಭ ನಿಮಿತ್ತ ಬೆಳಗ್ಗೆ ಸುಪ್ರಭಾತ, ದೇವತಾ ಉತ್ಥಾಪನಾ, ಸಕಲ ದೇವತೆಗಳ ಪೂಜೆ, ಬೆಂಗಳೂರಿನ ಕೇಶವಾಚಾರ್ಯ, ಯತೀಶ ಆಚಾರ್ಯ, ಜಗದೀಶಚಾರ್ಯ ನೇತೃತ್ವದಲ್ಲಿ ಗೋ ಪೂಜೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಹೋಮ, ಕಳಸಾರೋಹಣ, ದೇವಿಯ ನೇತ್ರೊನ್ಮಿಲನ, ಬಿಂಬ ದರ್ಶನ, ಪೂರ್ಣಾಹುತಿ, ಮಹಾ ಮಂಗಳಾರತಿ ಜರುಗಿತು.

ಶಶಿಧರ ಆಚಾರ್ಯ ಸಗರ, ಜಗದೀಶ ಆಚಾರ್ಯ ಜೇವರ್ಗಿ, ಮೌನೇಶ ಆಚಾರ್ಯ ಶಹಾಪುರ, ನಾಗರಾಜ ಆಚಾರ್ಯ ಶಹಾಪುರ, ದೇವಸ್ಥಾನದ ಪ್ರಧಾನ ಅರ್ಚಕ ಮನೋಹರ ಕಂಚಗಾರ, ಮೌನೇಶ ನಾಲವಾರ, ಲಕ್ಷ್ಮೀಕಾಂತ ಶಿರವಾಳ, ಜಗದೀಶ ಪತ್ತಾರ, ಪೂಜೆಯಲ್ಲಿ ಭಾಗವಹಿಸಿದ್ದರು.

ಶಹಾಪುರ ಏಕದಂಡಿಗಿ ಮಠದ ಕಾಳಹಸ್ತೇಂದ್ರ ಮಹಾ ಸ್ವಾಮೀಜಿ ಮೂರು ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ನಂತರ ಭಕ್ತರು ಸರದಿ ಸಾಲಿನಲ್ಲಿ ಬಂದು ಕಾಯಿ, ಕರ್ಪೂರ, ನೈವೇದ್ಯ ಸಲ್ಲಿಸಿ ದೇವಿಯ ದರ್ಶನ ಪಡೆದರು. ಈ ಅದ್ಧೂರಿ ಸಮಾರಂಭಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಸುರೇಶ ಸಜ್ಜನ್, ಉಪಾಧ್ಯಕ್ಷ ಮಲ್ಲಿಕಾರ್ಜುನ ಕಡೇಚೂರು, ಶ್ರೀನಿವಾಸ ಡೊಳ್ಳೆ, ಬಸವರಾಜ ಕೊಡೇಕಲ್, ವಾಸುದೇವ ಮಂಗಳೂರು ಸೇರಿ ಹಲವಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರು.

ರಂಗಂಪೇಟೆ-ತಿಮ್ಮಾಪುರ, ಹಸನಾಪುರ, ರತ್ತಾಳ, ದೇವಿಕೇರಿ, ಸತ್ಯಂಪೇಟ, ಬಿಜಾಸ್ಪೂರ ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಅದ್ಧೂರಿ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದರು. ಅವಳಿ ನಗರಗಳ ಸರ್ವ ಜನಾಂಗದ ಆರಾಧ್ಯ ದೇವಿ ಶ್ರೀ ಮರಗಮ್ಮದೇವಿ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ಜರುಗಿತು.

ಪ್ರತಿ ದಿನ ಶ್ರೀದೇವಿಯ ವಿವಿಧ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಸಡಗರ ಸಂಭ್ರಮದೊಂದಿಗೆ ಭಾಗವಹಿಸಿ ಭಕ್ತಿ ಸಲ್ಲಿಸಿದರು. ಮೂರು ದಿನಗಳ ಉತ್ಸವದಲ್ಲಿ ದೇವಸ್ಥಾನ ಸಮಿತಿಯವರು ಭಕ್ತರಿಗೆ ಊಟ, ಉಪಹಾರ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಿದರು.

Share this article