ಬೆಳಗಾವಿ ನಗರದಲ್ಲಿ ಮತ್ತೆ ಮರಾಠಿಗರ ಪುಂಡಾಟಿಕೆ : ಹಿರಿಯ ಬಸ್‌ ನಿರ್ವಾಹಕರೊಬ್ಬರ ಮೇಲೆ ಹಲ್ಲೆ

KannadaprabhaNewsNetwork |  
Published : Feb 21, 2025, 11:49 PM ISTUpdated : Feb 22, 2025, 07:59 AM IST
ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಬಸ್‌ ನಿರ್ವಾಹಕರನ್ನು ಭೇಟಿಯಾಗಿ ಡಿಸಿಪಿ ರೋಹನ ಜಗದೀಶ ಘಟನೆಕುರಿತು ಮಾಹಿತಿ ಸಂಗ್ರಹಿಸಿದರು | Kannada Prabha

ಸಾರಾಂಶ

‘ನನಗೆ ನಿಮ್ಮ ಭಾಷೆ ಬರೋದಿಲ್ಲ ಕನ್ನಡದಲ್ಲಿ ಮಾತನಾಡಿ’ ಎಂದಿದ್ದಕ್ಕೆ ಹಿರಿಯ ಬಸ್‌ ನಿರ್ವಾಹಕರೊಬ್ಬರ ಮೇಲೆ ಮರಾಠಿ ಪುಂಡರ ಗುಂಪು ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದ್ದು, ಕನ್ನಡಿಗರನ್ನು ಕೆರಳಿಸಿದೆ.  

 ಬೆಳಗಾವಿ : ‘ನನಗೆ ನಿಮ್ಮ ಭಾಷೆ ಬರೋದಿಲ್ಲ ಕನ್ನಡದಲ್ಲಿ ಮಾತನಾಡಿ’ ಎಂದಿದ್ದಕ್ಕೆ ಹಿರಿಯ ಬಸ್‌ ನಿರ್ವಾಹಕರೊಬ್ಬರ ಮೇಲೆ ಮರಾಠಿ ಪುಂಡರ ಗುಂಪು ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದ್ದು, ಕನ್ನಡಿಗರನ್ನು ಕೆರಳಿಸಿದೆ. ಗೂಂಡಾ ವರ್ತನೆ ತೋರಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.

ಬೆಳಗಾವಿ ನಗರ ಸಾರಿಗೆ ಬಸ್ಸಿನ ನಿರ್ವಾಹಕ ಮಹಾದೇವ ಹುಕ್ಕೇರಿ ಹಲ್ಲೆಗೊಳಗಾದವರು. ಶುಕ್ರವಾರ ಸುಳೇಭಾವಿ-ಬಾಳೇಕುಂದ್ರಿ ಗ್ರಾಮಗಳ ನಡುವೆ ಒತ್ತಾಯಪೂರ್ವಕವಾಗಿ ಬಸ್‌ ನಿಲ್ಲಿಸಿ ಹಲ್ಲೆ ಮಾಡಲಾಗಿದ್ದು, ಹಿರಿಯ ವಯಸ್ಸಿನ ಮಹಾದೇವ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಾರಿಹಾಳ ಪೊಲೀಸ್‌ ಠಾಣೆಗೆ ಕಂಡಕ್ಟರ್ ದೂರು ನೀಡಿದ್ದಾರೆ.

ಘಟನೆ ವಿವರ:ಮಹಾದೇವ ಅವರು ಕಾರ್ಯನಿರ್ವಹಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ಆಧಾರ್‌ ಕಾರ್ಡ್‌ ತೋರಿಸಿ ತನಗೆ ಹಾಗೂ ತನ್ನೊಂದಿಗಿದ್ದ ಯುವಕನಿಗೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ನೀಡುವಂತೆ ಮರಾಠಿ ಭಾಷೆಯಲ್ಲಿ ಕೇಳಿದ್ದಾರೆ. ಆಗ ಮಹಾದೇವ ಅವರು, ‘ನಿಮಗೆ ಮಾತ್ರ ಉಚಿತ ಟಿಕೆಟ್ ನೀಡಲಾಗುವುದು. ಯುವಕನಿಗೆ ದುಡ್ಡು ಕೊಡಬೇಕು. ನನಗೆ ಮರಾಠಿ ಭಾಷೆ ಬರುವುದಿಲ್ಲ, ಕನ್ನಡದಲ್ಲಿ ಹೇಳಿ’ ಎಂದಿದ್ದಾರೆ. ಇದರಿಂದ ಕೋಪಗೊಂಡ ಯುವಕ ಹಾಗೂ ಯುವತಿ ಇಬ್ಬರೂ ‘ಕನ್ನಡ ಏಕೆ ಬೊಗಳುತ್ತೀ, ಮರಾಠಿ ಕಲಿತುಕೋ’ ಎಂದು ಮರಾಠಿಯಲ್ಲಿ ಅವಾಚ್ಯ ಪದಗಳಿಂದ ಬೈದಿದ್ದಾರೆ. ಅಲ್ಲದೆ, ‘ನಮ್ಮೂರು ತಲುಪಿದಾಗ ನಿನ್ನನ್ನು ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ.

ಅಷ್ಟರಲ್ಲಿ ತನ್ನ ಗುಂಪಿನವರಿಗೆ ಯುವಕ ಫೋನ್‌ ಕರೆ ಮಾಡಿ ವಿಷಯ ತಿಳಿಸಿದ್ದು, ಬಸ್‌ ಸಣ್ಣ ಬಾಳೇಕುಂದ್ರಿ ಗ್ರಾಮಕ್ಕೆ ತಲುಪಿದ ಕೂಡಲೇ ಒತ್ತಾಯ ಪೂರ್ವಕವಾಗಿ ಬಸ್ಸನ್ನು ನಿಲ್ಲಿಸಿದ 20ಕ್ಕೂ ಅಧಿಕ ಮರಾಠಿ ಯುವಕರು ಏಕಾಏಕಿ ಬಸ್ಸಿನೊಳಗೆ ನುಗ್ಗಿ ಕಂಡಕ್ಟರ್ ಮಹಾದೇವ ಅವರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.

ಕಣ್ಣೀರು ಹಾಕಿದ ಕಂಡಕ್ಟರ್‌:

ಮರಾಠಿಗರ ಹಲ್ಲೆಯಿಂದ ನೊಂದಿರುವ ಮಹಾದೇವ ಅವರು ಆಸ್ಪತ್ರೆಗೆ ತೆರಳುವಾಗ ಗಳಗಳನೇ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಹತ್ತಿದ ಯುವಕ, ಯುವತಿರಿಗೆ ಟಿಕೆಟ್ ಪಡೆಯುವಂತೆ ಕೇಳಿದೆ. ಮರಾಠಿಯಲ್ಲಿ ಮಾತನಾಡಿದ ಅವರಿಗೆ ಕನ್ನಡದಲ್ಲಿ ಕೇಳಿ ಎಂದು ಹೇಳಿದೆ. ಅಷ್ಟಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದು, ಕಾಲಿನಿಂದ ಒದ್ದಿದ್ದಾರೆ. ಅಲ್ಲದೇ ಬಸ್‌ ಚಾಲಕನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.ರಾಜೀಗೆ ಪೊಲೀಸರ ಯತ್ನ:

ತಮ್ಮ ಮೇಲೆ ಮರಾಠಿಗರು ಹಲ್ಲೆ ಮಾಡಿರುವ ಕುರಿತು ದೂರು ನೀಡಲು ಹೋದ ವೇಳೆ ಮಾರಿಹಾಳ ಠಾಣೆ ಪೊಲೀಸರು ದೂರು ದಾಖಲಿಸಿಕೊಳ್ಳದೇ ರಾಜೀ ಸಂಧಾನಕ್ಕೆ ಯತ್ನಿಸಿದರು ಎಂದು ಕಂಡಕ್ಟರ್‌ ಮಹಾದೇವ ಆರೋಪಿಸಿದ್ದಾರೆ.

ಡಿಸಿಪಿ ರೋಹನ ಜಗದೀಶ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಚಾಲಕ ಮತ್ತು ನಿರ್ವಾಹಕರಿಂದ ಘಟನೆ ಕುರಿತು ಮಾಹಿತಿ ಪಡೆದಿದ್ದು, ಹಲ್ಲೆ ಮಾಡಿದವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೇ ಪೊಲೀಸರು ರಾಜೀಸಂಧಾನಕ್ಕೆ ಯತ್ನಿಸಿದ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಓಲೈಕೆ ರಾಜಕಾರಣ ಕೈಬಿಟ್ಟು ಕ್ರಮ ಕೈಗೊಳ್ಳಿ: ಕನ್ನಡ ಸಂಘಟನೆಗಳು

ಬಸ್‌ ನಿರ್ವಾಹಕರ ಮೇಲೆ ಮರಾಠಿಗರ ಗುಂಪು ಹಲ್ಲೆ ನಡೆಸಿರುವುದನ್ನು ಕನ್ನಡ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಪುಂಡರ ವಿರುದ್ಧ ಬೆಳಗಾವಿ ಪೊಲೀಸರು ಕಠಿಣ ಕ್ರಮ ಕೈಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಮರಾಠಿ ಮತದಾರರ ಓಲೈಕೆ ರಾಜಕಾರಣ ಬೆಳಗಾವಿ ಗಡಿಭಾಗದಲ್ಲಿ ಹೆಚ್ಚಾಗುತ್ತಿದ್ದು, ಮರಾಠಿಗರ ದುಂಡಾವರ್ತನೆ ಮುಂದುವರಿದರೆ ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುವುದು ಸಹಜವಾಗಿದೆ. ಬೆಳಗಾವಿ ಜಿಲ್ಲಾಡಳಿತ ಹಾಗೂ ಪೊಲೀಸರು ಗಡಿ ಭಾಗದಲ್ಲಿ ಕನ್ನಡ ಗಟ್ಟಿಗೊಳಿಸುವ ಕೆಲಸಕ್ಕೆ ಮುಂದಾಗಬೇಕೇ ಹೊರತು ಮಹಾರಾಷ್ಟ್ರ ಬೆಂಬಲಿತ ಸಂಘಟನೆಗಳ ಚಟುವಟಿಕೆಗಳಿಗೆ ಇಂಬು ಕೊಡಬಾರದು ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರೂ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ