ತ್ರಾಸಿ-ಮರವಂತೆ ಕಡಲತೀರದಲ್ಲಿ ಕಡಲಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಎಚ್ಚರಿಕೆಗಳನ್ನು ಲೆಕ್ಕಿಸದೇ ಪ್ರವಾಸಿಗರು ಅಪಾಯ ವಲಯಕ್ಕೆ ಪ್ರವೇಶಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಶ್ರೀಕಾಂತ ಹೆಮ್ಮಾಡಿ
ಕುಂದಾಪುರ: ತ್ರಾಸಿ-ಮರವಂತೆ ಕಡಲತೀರದಲ್ಲಿ ಕಡಲಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಎಚ್ಚರಿಕೆಗಳನ್ನು ಲೆಕ್ಕಿಸದೇ ಪ್ರವಾಸಿಗರು ಅಪಾಯ ವಲಯಕ್ಕೆ ಪ್ರವೇಶಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಮರವಂತೆಯಲ್ಲಿ ರಾಷ್ಟ್ರೀಯ ಹೆದ್ದಾರಿ-66ಕ್ಕೆ ಹೊಂದಿಕೊಂಡಿರುವ ಸುಮಾರು ಮೂರು ಕಿಲೋಮೀಟರ್ ಉದ್ದದ ಈ ಕಡಲತೀರ ದೇಶ-ವಿದೇಶದ ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿದೆ. ಮುಂಗಾರು ಆರಂಭವಾದ ದಿನದಿಂದಲೇ ಪ್ರವಾಸಿಗರ ಸುರಕ್ಷತೆಗಾಗಿ ಜಿಲ್ಲಾಡಳಿತ ಪೊಲೀಸ್ ಇಲಾಖೆ, ಕರಾವಳಿ ನಿಯಂತ್ರಣ ದಳ, ಹೋಮ್‌ಗಾರ್ಡ್ ಹಾಗೂ ಲೈಫ್‌ಗಾರ್ಡ್ ಸಿಬ್ಬಂದಿ ನಿಯೋಜಿಸಿ ಕಡಲಿಗೆ ಇಳಿಯದಂತೆ ಕ್ರಮ ಕೈಗೊಳ್ಳಲಾಗಿತ್ತು. ಆದಾಗ್ಯೂ, ಸಿಬ್ಬಂದಿ ಕಣ್ತಪ್ಪಿಸಿ ಪ್ರವಾಸಿಗರು ಸಮುದ್ರದತ್ತ ಧಾವಿಸುವುದು ಸಾಮಾನ್ಯ ದೃಶ್ಯವಾಗಿದೆ.ಸೈರನ್ ಮೊಳಗಿಸಿದರೂ ಲೆಕ್ಕಕ್ಕಿಲ್ಲ: ಅಪಾಯದ ಮುನ್ಸೂಚನೆಯಾಗಿ ಸಿಬ್ಬಂದಿ ಸೈರನ್ ಮೊಳಗಿಸಿ, ಮೈಕ್ ಮೂಲಕ ಎಚ್ಚರಿಕೆ ನೀಡಿದರೂ ಅನೇಕ ಪ್ರವಾಸಿಗರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ. ಬಂಡೆಕಲ್ಲುಗಳ ಮೇಲೆ ನಿಂತು ಸೆಲ್ಫಿ ತೆಗೆಯುವುದು, ಅಲೆಗಳ ನಡುವೆ ವಿಡಿಯೋ ಚಿತ್ರೀಕರಣ ಮಾಡುವುದು ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿ ಕಾಲ ಕಳೆಯುವುದು ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.ಪೊಲೀಸ್ ಇಲಾಖೆಯ ನಾಲ್ವರು, ಕರಾವಳಿ ನಿಯಂತ್ರಣ ದಳದ (ಕೆ.ಎನ್.ಡಿ.) ಆರು ಮಂದಿ, ಗೃಹರಕ್ಷಕ ದಳದ ಮೂವರು, ಇಬ್ಬರು ಗೃಹರಕ್ಷಕ ದಳದ ಪ್ರವಾಸಿ ಮಿತ್ರರು ಹಾಗೂ ಐವರು ಲೈಫ್‌ಗಾರ್ಡ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆದರೆ, ಇಷ್ಟೊಂದು ಸಿಬ್ಬಂದಿ ಇದ್ದರೂ ಸಮರ್ಪಕ ನಿಗಾವಹಿಸುವ ವ್ಯವಸ್ಥೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.ಅರೆಬರೆ ತಡೆಬೇಲಿ ನಿರ್ಮಾಣ: ಪ್ರವಾಸಿಗರ ಪ್ರವೇಶ ನಿರ್ಬಂಧಿಸಲು ಪ್ರವಾಸೋದ್ಯಮ ಇಲಾಖೆ ಅಳವಡಿಸಿರುವ ತಡೆಬೇಲಿ ಕಾರ್ಯ ಅರೆಬರೆಯಾಗಿ ದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ತ್ರಾಸಿ ಬೀಚ್ ಪಾರ್ಕ್‌ನ ಒಂದು ಬದಿಯಿಂದ ಆರಂಭಗೊಂಡ ತಡೆಬೇಲಿ ನಿರ್ಮಾಣ ಕಾರ್ಯ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಸ್ಕೈ ಡೈನ್ ಸ್ಥಳದವರೆಗೆ ಮಾತ್ರ ಸೀಮಿತಗೊಂಡಿದೆ. ಮರವಂತೆ ವರಾಹ ದೇವಸ್ಥಾನದ ಎದುರು ಅಲ್ಪ ಪ್ರಮಾಣದಲ್ಲಿ ನೆಟ್ ತಡೆಬೇಲಿ ಅಳವಡಿಸಲಾಗಿದ್ದು, ಅದು ಕೂಡ ಸಮರ್ಪಕವಾಗಿಲ್ಲ.ಅರ್ಧಂಬರ್ಧವಾಗಿ ಅಳವಡಿಸಿರುವ ನೆಟ್ ಅನ್ನು ಮೇಲಕ್ಕೆ ಎತ್ತಿ ಪ್ರವಾಸಿಗರು ಕಡಲಿಗೆ ಇಳಿಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಅನೇಕ ಅಪಾಯಕಾರಿ ಪ್ರದೇಶಗಳು ಇನ್ನೂ ತೆರೆದೆಯೇ ಉಳಿದಿರುವುದರಿಂದ ಪ್ರವಾಸಿಗರು ಯಾವುದೇ ಎಚ್ಚರಿಕೆ ಫಲಕಗಳಿಲ್ಲದೆ ಅಪಾಯದ ವಲಯಕ್ಕೆ ಪ್ರವೇಶಿಸುತ್ತಿದ್ದಾರೆ.ಎರಡೂ ವಾಚ್ ಟವರ್‌ಗಳು ಅವ್ಯವಸ್ಥೆ: ಸಿಬ್ಬಂದಿಗಳಿಗಾಗಿ ವೀಕ್ಷಣೆಗೆ ನಿರ್ಮಿಸಲಾದ ಎರಡು ವಾಚ್ ಟವರ್‌ಗಳ ಸ್ಥಿತಿ ಶಿಥಿಲಗೊಂಡಿದೆ. ತ್ರಾಸಿ ಬೀಚ್‌ನ ವಾಚ್ ಟವರ್‌ಗೆ ಏರಲು ಅಳವಡಿಸಿರುವ ಕಬ್ಬಿಣದ ಏಣಿಯ ಮೆಟ್ಟಿಲುಗಳು ಸಂಪೂರ್ಣ ತುಕ್ಕು ಹಿಡಿದು ಹಲವು ಕಡೆ ತುಂಡಾಗಿವೆ. ಪರಿಣಾಮವಾಗಿ ಪೊಲೀಸ್ ಹಾಗೂ ಲೈಫ್‌ಗಾರ್ಡ್ ಸಿಬ್ಬಂದಿಗಳು ಜೀವಭಯದಲ್ಲೇ ಕರ್ತವ್ಯ ನಿರ್ವಹಿಸುವಂತಾಗಿದೆ.ಇಲ್ಲಿನ ವಾಚ್ ಟವರ್‌ನ ಮೇಲ್ಛಾವಣಿಯೂ ರಭಸವಾದ ಗಾಳಿಗೆ ಹಾನಿಗೊಳಗಾಗಿ ಅಸ್ತವ್ಯಸ್ತಗೊಂಡಿದ್ದು, ಯಾವುದೇ ಕ್ಷಣದಲ್ಲಿ ಅವಶೇಷಗಳು ಕೆಳಗೆ ಬೀಳುವ ಆತಂಕ ಎದುರಾಗಿದೆ. ಮರವಂತೆ ಬೀಚ್‌ನಲ್ಲಿರುವ ಮತ್ತೊಂದು ವಾಚ್ ಟವರ್‌ನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.ತ್ರಾಸಿ ಮತ್ತು ಮರವಂತೆ ಬೀಚ್‌ಗಳ ಮಧ್ಯಭಾಗದಲ್ಲಿ ಸಿಬ್ಬಂದಿ ವಿಶ್ರಾಂತಿ ಪಡೆಯಲು ಹಾಗೂ ಮಳೆ-ಬಿಸಿಲಿನಿಂದ ರಕ್ಷಣೆ ಪಡೆಯಲು ವಾಚ್ ಟವರ್ ಮಾದರಿಯ ಶಾಶ್ವತ ಶೆಲ್ಟರ್ ನಿರ್ಮಿಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.ಐವರ ಪೈಕಿ ಕರ್ತವ್ಯಕ್ಕೆ ಒಬ್ಬರೇ ಹಾಜರು!: ಪ್ರವಾಸಿಗರ ಸುರಕ್ಷತೆಗಾಗಿ ನಿಯೋಜಿಸಲಾದ ಐವರು ಲೈಫ್‌ಗಾರ್ಡ್ ಸಿಬ್ಬಂದಿಗಳ ಪೈಕಿ ಕರ್ತವ್ಯಕ್ಕೆ ಕೇವಲ ಒಬ್ಬರೇ ಹಾಜರಾಗುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆ, ಕೆಎನ್‌ಡಿ, ಹೋಮ್‌ಗಾರ್ಡ್ ಹಾಗೂ ಲೈಫ್‌ಗಾರ್ಡ್ ಸಿಬ್ಬಂದಿಗಳ ನಡುವೆ ಸಮನ್ವಯದ ಕೊರತೆ ಮತ್ತು ನಿರಂತರ ನಿಗಾ ವ್ಯವಸ್ಥೆಯ ಅಭಾವವೂ ಕಂಡುಬರುತ್ತಿದೆ. ಈ ನಡುವೆ ಮಂಗಳವಾರ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ಭೇಟಿ ನೀಡಿ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.ಪ್ರವಾಸೋದ್ಯಮದ ಅಭಿವೃದ್ಧಿಯಷ್ಟೇ ಪ್ರವಾಸಿಗರ ಜೀವ ರಕ್ಷಣೆಯೂ ಮುಖ್ಯ. ಮತ್ತಷ್ಟು ಅಮಾಯಕ ಜೀವಗಳು ಬಲಿಯಾಗುವ ಮುನ್ನ ಸಂಬಂಧಿತ ಇಲಾಖೆಗಳು ಎಚ್ಚೆತ್ತುಕೊಂಡು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಪ್ರವಾಸಿಮಿತ್ರರು ಮತ್ತು ಜೀವರಕ್ಷಕರ ಸಂಖ್ಯೆ ಕಡಿಮೆಯಿದ್ದು, ಇನ್ನೂ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿದರೆ ಪ್ರವಾಸಿಗರು ಕಡಲಿಗಿಳಿಯದಂತೆ ತಡೆಯಬಹುದು.ಗೋಪಾಲ ನಾಡ, ಸ್ಥಳೀಯರು
ಎಲ್ಲಿಂದಲೋ ಬರುವ ಪ್ರವಾಸಿಗರಿಗೆ ಈ ಭಾಗದ ಸಮುದ್ರದ ಆಳ, ಅಲೆಗಳ ತೀವ್ರತೆ ಹಾಗೂ ಅಪಾಯದ ಸ್ವರೂಪದ ಬಗ್ಗೆ ಸಮರ್ಪಕ ಅರಿವು ಇರುವುದಿಲ್ಲ. ಕರ್ತವ್ಯದಲ್ಲಿರುವ ಸಿಬ್ಬಂದಿಗಳು ನೀಡುವ ಮುನ್ನೆಚ್ಚರಿಕೆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ, ಅಪಾಯದ ಪ್ರದೇಶಗಳಲ್ಲಿ ಕಡಲಿಗಿಳಿಯುವುದನ್ನು ತಪ್ಪಿಸಬೇಕು.-ಇಬ್ರಾಹಿಂ ಗಂಗೊಳ್ಳಿ, ಆಂಬುಲೆನ್ಸ್ ನಿರ್ವಾಹಕ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.