ನಿವೇಶನ ಹಂಚಿಕೆ, ಸ್ಮಶಾನ ಒತ್ತುವರಿ ತೆರವಿಗೆ ಆಗ್ರಹಿಸಿ ಪಾದಯಾತ್ರೆ

KannadaprabhaNewsNetwork |  
Published : Aug 01, 2025, 11:45 PM IST
೧ಕೆಎಂಎನ್‌ಡಿ-೫ಬಡವರಿಗೆ ನಿವೇಶನ ಹಂಚಿಕೆ ಹಾಗೂ ಸ್ಮಶಾನ ಒತ್ತುವರಿ ತೆರವಿಗೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಕಾರ‌್ಯಕರ್ತರು ಹಾಗೂ ಹುಲಿವಾನ ಗ್ರಾಮಸ್ಥರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು. | Kannada Prabha

ಸಾರಾಂಶ

ಹುಲಿವಾನ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ಹಂಚಿಕೆ ಮಾಡಲು ಗ್ರಾಮ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿರುತ್ತಾರೆ. ಫಲಾನುಭವಿಗಳಿಗೆ ಹಕ್ಕು ಪತ್ರ ಕೊಡಿಸಬೇಕು. ಹುಲಿವಾನ ಗ್ರಾಮದ ಸರ್ವೇ ನಂ. ೯೩ರ ಸ್ಮಶಾನ ಜಾಗದ ಒತ್ತುವರಿ ತೆರವುಗೊಳಿಸಬೇಕು. ಎಸ್.ಐ. ಕೋಡಿಹಳ್ಳಿ ಗ್ರಾಮದ ಸರ್ವೇ ನಂ. ೫೪ರ ಸ್ಮಶಾನ ಒತ್ತುವರಿ ತೆರವು ಮಾಡಿ ರಸ್ತೆ ಕಲ್ಪಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಬಡವರಿಗೆ ನಿವೇಶನ ಹಂಚಿಕೆ ಹಾಗೂ ಸ್ಮಶಾನ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ, ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಹಾಗೂ ಹುಲಿವಾನ ಗ್ರಾಮಸ್ಥರು ಶುಕ್ರವಾರ ಪಾದಯಾತ್ರೆ ನಡೆಸಿದರು.

ತಾಲೂಕಿನ ಹುಲಿವಾನ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ಆಗಮಿಸಿದ ಕಾರ್ಯಕರ್ತರು ಮತ್ತು ಗ್ರಾಮಸ್ಥರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಜನತಾ ಕಾಲೋನಿ, ಚಾಮಲಾಪುರ, ಎಸ್‌ಐ. ಕೋಡಿಹಳ್ಳಿ, ಬೊಕ್ಕೇಗೌಡನದೊಡ್ಡಿ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನತೆ ಕಡು ಬಡವರಾಗಿದ್ದು, ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರು ಮೈಕ್ರೋ ಪೈನಾನ್ಸ್‌ಗಳಲ್ಲಿ ಹಣ ಪಡೆದು ಜೀವನ ಸಾಗಿಸುತ್ತಿದ್ದಾರೆ. ಸಾಲ ಮಾಡಿಕೊಂಡು ತುಂಬಾ ಕಷ್ಟಪಡುತ್ತಿದ್ದು, ನಿವೇಶನ ಇಲ್ಲದೆ ಇರುವವರು ಹಾಗೂ ಒಂದೇ ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸ ಮಾಡುತ್ತಿವೆ. ಸುಮಾರು ಐನೂರಕ್ಕೂ ಹೆಚ್ಚು ಕುಟುಂಬಗಳು ಈ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ದೂರಿದರು.

ಗ್ರಾಮದ ಸರ್ವೇ ನಂ. ೪೪/ಪಿ೧೪ರಲ್ಲಿ ಸರ್ಕಾರ ಸುಮಾರು ೮.೦೯ ಎಕರೆ ನಿವೇಶನಕ್ಕಾಗಿ ಮಂಜೂರು ಮಾಡಿ ಹುಲಿವಾನ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದೆ. ಆದರೆ, ಗ್ರಾಮ ಪಂಚಾಯಿತಿಯವರು ನಿವೇಶನ ಹಂಚಿಕೆ ಮಾಡಿಲ್ಲ. ಅಲ್ಲದೆ, ಗ್ರಾಮದಲ್ಲಿ ಸ್ಮಶಾನ ಜಾಗವಿಲ್ಲ. ಸ್ಮಶಾನ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ತೆರವುಗೊಳಿಸಲು ನ್ಯಾಯಾಲಯ ಆದೇಶ ನೀಡಿದ್ದರೂ, ಅಧಿಕಾರಿಗಳು, ಪಟ್ಟಭದ್ರ ಹಿತಾಸಕ್ತಿಗಳು ತೆರವು ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಮಶಾನವಿಲ್ಲದ ಕಾರಣ ಹೆಣ ಹೂಳಲು ಕಷ್ಟವಾಗುತ್ತಿದ್ದು, ವಿಶ್ವೇಶ್ವರಯ್ಯ ನಾಲೆಯ ಏರಿ ಮೇಲೆ ಶವ ಸಂಸ್ಕಾರ ಮಾಡಲಾಗುತ್ತಿದೆ. ಎಸ್.ಐ. ಕೋಡಿಹಳ್ಳಿ ಗ್ರಾಮದ ಸ್ಮಶಾನಕ್ಕೆ ಚಿಕ್ಕಬಾಣಸವಾಡಿ ಎಲ್ಲೆ ಸರ್ವೇ ನಂ. ೫೪ರಲ್ಲಿ ಜಾಗ ಮಂಜೂರಾಗಿದ್ದು, ಈ ಜಾಗವನ್ನು ಅತಿಕ್ರಮ ಮಾಡಿಕೊಂಡು ಕಬ್ಬು ಬೆಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಲಿವಾನ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ಹಂಚಿಕೆ ಮಾಡಲು ಗ್ರಾಮ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿರುತ್ತಾರೆ. ಫಲಾನುಭವಿಗಳಿಗೆ ಹಕ್ಕು ಪತ್ರ ಕೊಡಿಸಬೇಕು. ಹುಲಿವಾನ ಗ್ರಾಮದ ಸರ್ವೇ ನಂ. ೯೩ರ ಸ್ಮಶಾನ ಜಾಗದ ಒತ್ತುವರಿ ತೆರವುಗೊಳಿಸಬೇಕು. ಎಸ್.ಐ. ಕೋಡಿಹಳ್ಳಿ ಗ್ರಾಮದ ಸರ್ವೇ ನಂ. ೫೪ರ ಸ್ಮಶಾನ ಒತ್ತುವರಿ ತೆರವು ಮಾಡಿ ರಸ್ತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಕೆ.ಎಸ್. ಶಿವಲಿಂಗಯ್ಯ, ಸಿ.ಅಂಬುಜಾ, ಕೃಷ್ಣ, ಯೋಗೇಶ್, ಶಿವಮಾದು, ಗಿರೀಶ, ವಿನೋದ್‌ಕುಮಾರ್, ಕೆಂಪಾಜಮ್ಮ, ಸವಿತಾ, ವಿನೋದ, ಸುರೇಶ, ವಿನೋದ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

೧ಕೆಎಂಎನ್‌ಡಿ-೫

ಬಡವರಿಗೆ ನಿವೇಶನ ಹಂಚಿಕೆ ಹಾಗೂ ಸ್ಮಶಾನ ಒತ್ತುವರಿ ತೆರವಿಗೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಹಾಗೂ ಹುಲಿವಾನ ಗ್ರಾಮಸ್ಥರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''