ಮರಿಯಮ್ಮನಹಳ್ಳಿ ಪಪಂ ಅಧ್ಯಕ್ಷರ ಅಧಿಕಾರ ಸ್ವೀಕಾರ

KannadaprabhaNewsNetwork | Published : Sep 9, 2024 1:35 AM

ಸಾರಾಂಶ

ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ.

ಮರಿಯಮ್ಮನಹಳ್ಳಿ: ಸ್ಥಳೀಯ ಪಪಂ ಅಧ್ಯಕ್ಷರಾಗಿ ಆದಿಮನಿ ಹುಸೇನ್‌ ಬಾಷಾ, ಉಪಾಧ್ಯಕ್ಷರಾಗಿ ಲಕ್ಷ್ಮೀ ರೋಗಾಣಿ ಮಂಜುನಾಥ ಪಪಂ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಅಧಿಕಾರ ವಹಿಸಿಕೊಂಡ ನಂತರ ಅಧ್ಯಕ್ಷ ಆದಿಮನಿ ಹುಸೇನ್‌ ಬಾಷಾ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ. ಪ್ರತಿ ವಾರ್ಡಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಆಯಾ ವಾರ್ಡಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

ಕೂಗಳತೆಯಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಮರಿಯಮ್ಮನಹಳ್ಳಿಯಲ್ಲಿ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಈಗ ಜಲಾಶಯದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಯಾದ ಅಮೃತ್‌ 2 ಯೋಜನೆಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಸುಮಾರು ₹77 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ನಾಳೆಯೇ ನಮ್ಮ ಪಪಂ ಸದಸ್ಯರೊಂದಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸೇರಿಕೊಂಡು ತುಂಗಭದ್ರಾ ಜಲಾಶಯದ ಜಾಕ್‌ವಾಲ್‌ ಬಳಿ ತೆರಳಿ ಕಾಮಗಾರಿಯನ್ನು ವೀಕ್ಷಿಸಿ, ಆದಷ್ಟು ಬೇಗನೆ ಮರಿಯಮ್ಮನಹಳ್ಳಿಗೆ ತುಂಗಭದ್ರಾ ಜಲಾಶಯದಿಂದ ರಾವಾಟರ್‌ನ್ನು ಇನ್ನು ಒಂದೂವರೆ ತಿಂಗಳಲ್ಲಿ ಒದಗಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಇದೇ ರೀತಿಯಲ್ಲಿ ಮರಿಯಮ್ಮನಹಳ್ಳಿಯ 18 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಹೊಸ ಪೈಪ್‌ಲೈನ್‌ನ್ನು ಅಳವಡಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಆದಷ್ಟು ಬೇಗನೆ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎಲ್ಲ ಸದಸ್ಯರು ಸೇರಿಕೊಂಡು ಬಗೆಹರಿಸಲಾಗುವುದು ಎಂದು ಅವರು ಹೇಳಿದರು.

ಮಾಜಿ ಶಾಸಕ ಎಸ್‌.ಭೀಮಾನಾಯ್ಕ್‌ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಅವರನ್ನು ಭೇಟಿ ಮಾಡಿ ಮರಿಯಮ್ಮನಹಳ್ಳಿ ಪಪಂ ಸಮಸ್ಯೆಗಳನ್ನು ಬಗೆಹರಿಸುವಂತೆ ಮತ್ತು ಮರಿಯಮ್ಮನಹಳ್ಳಿ ಅಭಿವೃದ್ಧಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಹಾಗೂ ಹೆಚ್ಚುವರಿ ಮನೆಗಳನ್ನು ಒದಗಿಸಿಕೊಡುವಂತೆ ಅವರಲ್ಲಿ ಮನವಿ ಮಾಡಿಕೊಂಡು ಮರಿಯಮ್ಮನಹಳ್ಳಿಯನ್ನು ಮಾದರಿ ಪಪಂ ರೂಪಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ಪಪಂ ನೂತನ ಕಟ್ಟಡವನ್ನು ಶೀಘ್ರ ನಿರ್ಮಿಸಲಾಗುವುದು. ಪಟ್ಟಣದ ಕಸ ವಿಲೇವಾರಿಗಾಗಿ ದೇವಲಾಪುರ ಬಳಿ ನಿವೇಶನವನ್ನು ಜಿಲ್ಲಾಧಿಕಾರಿ ಗುರುತಿಸಿದ್ದಾರೆ. ಕಸ ವಿಲೇವಾರಿಗಾಗಿ ವ್ಯವಸ್ಥೆ ಕಲ್ಪಿಸಲಾಗುವುದು. ಕುಡಿಯುವ ನೀರು, ಶೌಚಾಲಯ, ಚರಂಡಿ ಸ್ವಚ್ಛತೆ, ಬೀದಿದೀಪ ವ್ಯವಸ್ಥೆ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮರಿಯಮ್ಮನಹಳ್ಳಿಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸುವೆ ಎಂದು ಅವರು ಹೇಳಿದರು.

ಪಪಂ ಉಪಾಧ್ಯಕ್ಷೆ ಲಕ್ಷ್ಮೀ ರೋಗಾಣಿ ಮಂಜುನಾಥ ಮಾತನಾಡಿ, ಪಟ್ಟಣದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಅವರು ಹೇಳಿದರು.

ಪಪಂ ಮುಖ್ಯಾಧಿಕಾರಿ ಎಂ.ಖಾಜಾ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಸ್ಥಳೀಯ ಮುಖಂಡರಾದ ಎನ್‌. ಸತ್ಯನಾರಾಯಣ, ಗೋವಿಂದರ ಪರುಶುರಾಮ, ಎನ್‌.ಎಸ್‌. ಬುಡೇನಸಾಹೇಬ್‌, ಬಿ. ವಿಜಯಕುಮಾರ್‌, ಲಾಲಾನಾಯ್ಕ್‌, ಬೋಸಪ್ಪ, ಸಿ. ಮಂಜುನಾಥ, ರಮೇಶ್‌, ರುದ್ರಾನಾಯ್ಕ್, ರೋಗಾಣಿ ಮಂಜುನಾಥ, ಬಸವರಾಜ, ವೆಂಕಟೇಶ್‌, ಮಂಜುನಾಥ ಸೇರಿದಂತೆ ಪ.ಪಂ. ಸದಸ್ಯರು, ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

Share this article