ಪಾನ್ ಶಾಪ್‌ನಲ್ಲಿ ಗಾಂಜಾ, ಬಾಂಗ್‌ ಚಾಕ್ಲೇಟ್: 2 ಬಂಧನ

KannadaprabhaNewsNetwork |  
Published : Jul 18, 2025, 12:45 AM IST

ಸಾರಾಂಶ

ಪಾನ್ ಬೀಡಾ ಅಂಗಡಿಯಲ್ಲಿ ಗಾಂಜಾ ಹಾಗೂ ಗಾಂಜಾ ಮಿಶ್ರಿತ ಚಾಕೋಲೇಟ್ ಮಾರುತ್ತಿದ್ದ ಬಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿ, 1115 ಗ್ರಾಂ ಗಾಂಜಾ ಹಾಗೂ ಮೋಲ್‌ ಎಂಬುದಾಗಿ ಹಿಂದಿಯಲ್ಲಿರುವ ಗಾಂಜಾಮಿಶ್ರಿತ 160 ಚಾಕೋಲೇಟ್‌ಗಳನ್ನು ನಗರದಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.

- ವಾರದಲ್ಲಿ 2 ಗಾಂಜಾ ಕೇಸ್, 2 ಕೆಜಿ 300 ಗ್ರಾಂ ಗಾಂಜಾ ಜಪ್ತಿ ।

- ಗಾಂಜಾ ಸೇವನೆಯ 11 ಪ್ರಕರಣ ವಿವಿಧ ಠಾಣೆಯಲ್ಲಿ ದಾಖಲು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪಾನ್ ಬೀಡಾ ಅಂಗಡಿಯಲ್ಲಿ ಗಾಂಜಾ ಹಾಗೂ ಗಾಂಜಾ ಮಿಶ್ರಿತ ಚಾಕೋಲೇಟ್ ಮಾರುತ್ತಿದ್ದ ಬಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿ, 1115 ಗ್ರಾಂ ಗಾಂಜಾ ಹಾಗೂ ಮೋಲ್‌ ಎಂಬುದಾಗಿ ಹಿಂದಿಯಲ್ಲಿರುವ ಗಾಂಜಾಮಿಶ್ರಿತ 160 ಚಾಕೋಲೇಟ್‌ಗಳನ್ನು ನಗರದಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.

ನಗರದ ಪಿ.ಜೆ. ಬಡಾವಣೆಯ ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತದಲ್ಲಿ ರಾಜು ಪಾನ್ ಶಾಪ್‌ನ ಪ್ಯಾರೇಲಾಲ್‌ ಅಲಿಯಾಸ್ ರಾಜು ರಾಮ್‌ ಖೇಲವನ್‌ (38) ಹಾಗೂ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಂಜಾ, ಗಾಂಜಾ ಮಿಶ್ರಿತ ಜಾಕೋಲೇಟ್‌ಗಳನ್ನು ರಾಜು ಪಾನ್ ಶಾಪ್ ಹಾಗೂ ಪ್ಯಾರೇಲಾಲ್‌ನ ಮನೆಯಲ್ಲಿ ಜಪ್ತಿ ಮಾಡಿದ್ದಾರೆ.

ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ನಗರ ಡಿವೈಎಸ್ಪಿ ಶರಣ ಬಸವೇಶ್ವರ ಭೀಮರಾವ್‌ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ನಿಗ್ರಹಿಸುವ ಉದ್ದೇಶದಿಂದ ಪಿಎಸ್ಐ ಸಾಗರ್ ಅತ್ತರವಾಲ್‌ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಿದ್ದು, ಅದೇ ತಂಡವು ಜು.14ರ ಸಂಜೆ ಬಡಾವಣೆ ಠಾಣೆ ವ್ಯಾಪ್ತಿಯ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ರಾಜು ಪಾನ್ ಶಾಪ್‌ ಮೇಲೆ ದಾಳಿ ನಡೆಸಿದ್ದರು. ರಾಜುಪಾನ್ ಶಾಪ್‌ನವರು ಮನೆಯಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು. ಬಂಧಿತರ ವಿರುದ್ಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

ಗಾಂಜಾ ಹಾಗೂ ಗಾಂಜಾ ಮಿಶ್ರಿತ ಜಾಕೋಲೇಟ್‌ಗಳನ್ನು ಬೇರೆ ಎಲ್ಲಿಯೋ ತಾವು ಖರೀದಿಸಿಕೊಂಡು ಬಂದು, ದಾವಣಗೆರೆ ನಗರದ ಕಾಲೇಜು ವಿದ್ಯಾರ್ಥಿಗಳಿಗೆ, ಇತರೆಯವರಿಗೆ ಮಾರಾಟ ಮಾಡಿ, ಹಣ ಸಂಪಾದಿಸುತ್ತಿರುತ್ತೇವೆ ಎಂದು ಬಂಧಿತರು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಬಂಧಿತ ಪ್ಯಾರೇಲಾಲ್‌ ಅಲಿಯಾಸ್ ರಾಜುವನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬಾಲಕನನ್ನು ಬಾಲ ನ್ಯಾಯ ಮಂಡಳಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

- - -

ಗಾಂಜಾ: ಓರ್ವನ ಬಂಧನ ದಾವಣಗೆರೆ: ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ 1165 ಗ್ರಾಂ ಗಾಂಜಾ ವಶಪಡಿಸಿಕೊಂಡ ಘಟನೆ ನಗರದ ಎಸ್‌.ಎಸ್‌. ಹೈಟೆಕ್ ಬಡಾವಣೆ ಪಕ್ಕದ ಎಸ್‌ಒಜಿ ಕಾಲನಿ ಕಡೆಗೆ ಹೋಗುವ ಗಾಂಧಿ ಭವನದ ಬಳಿ ವರದಿಯಾಗಿದೆ.

ನಗರದ ನಿಟುವಳ್ಳಿಯ ಚಿಕ್ಕನಹಳ್ಳಿ ಬಡಾವಣೆ ವಾಸಿ ಎಸ್.ವಿಕಾಸ್ ಅಲಿಯಾಸ್ ವಿಕ್ಕಿ ಬಂಧಿತ ಆರೋಪಿ. ಎಸ್‌.ಎಸ್‌. ಹೈಟೆಕ್ ಬಡಾವಣೆ ಪಕ್ಕದ ಎಸ್‌ಒಜಿ ಕಾಲನಿ ಕಡೆಗೆ ಹೋಗುವ ಗಾಂಧಿ ಭವನದ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಜು.11ರಂದು ಆರೋಪಿ ವಿಕ್ಕಿಯನ್ನು ಗಾಂಜಾ ಸಮೇತ ಬಂಧಿಸಲಾಗಿದೆ. ಬಂಧಿತ ವಿಕಾಸ್ ಅಲಿಯಾಸ್ ವಿಕ್ಕಿ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

- - -

(ಬಾಕ್ಸ್‌) * ಪ್ರಕರಣಗಳ ಪತ್ತೆಗೆ ಎಸ್‌ಪಿ ಶ್ಲಾಘನೆ ಕಳೆದೊಂದು ವಾರದಲ್ಲಿ 2 ಅಕ್ರಮ ಗಾಂಜಾ ಮಾರಾಟ ಪ್ರಕರಣ ದಾಖಲಾಗಿದ್ದು, ಪ್ರಕರಣಗಳಿಗೆ ಸಂಬಂಧಿಸಿದಂತೆ ₹2.30 ಲಕ್ಷ ಮೌಲ್ಯದ ಒಟ್ಟು 2 ಕೆಜಿ 300 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಸೇವನೆ ಮಾಡುವವವರ ಮೇಲೆ ದಾಳಿ ಮಾಡಿ 11 ಪ್ರಕರಣಗಳನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿದೆ. ವಿಶೇಷ ತಂಡದ ಸದಸ್ಯರಾದ ಪಿಎಸ್ಐ ಸಾಗರ ಅತ್ತರವಾಲ್ ನೇತೃತ್ವದಲ್ಲಿ ಸಿಬ್ಬಂದಿ ಎಚ್.ಪ್ರಕಾಶ, ಎಂ.ಮಂಜಪ್ಪ, ಕೆ.ಷಣ್ಮುಖ, ಎಂ.ಎಸ್.ಶಿವರಾಜ, ಗೋವಿಂದರಾಜ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ
ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ