ರೈಲು ನಿಲ್ದಾಣದಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ಪತ್ತೆ

KannadaprabhaNewsNetwork | Published : Feb 24, 2025 12:31 AM

ಸಾರಾಂಶ

ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ಭಾನುವಾರ ಲಕ್ಷಾಂತರ ಮೌಲ್ಯದ ಗಾಂಜಾ ಪತ್ತೆಯಾಗಿದೆ. ರೈಲು ನಿಲ್ದಾಣದ 4ನೇ ಪ್ಲಾಟ್ಫಾರ್ಮ್ನಲ್ಲಿ ವಾರಸುದಾರರಿಲ್ಲದ ಬ್ಯಾಗ್ವೊಂದರಲ್ಲಿ ₹4 ಲಕ್ಷ ಮೌಲ್ಯದ 4 ಕೆಜಿ ಗಾಂಜಾ ಪತ್ತೆಯಾಗಿದೆ.

ಹುಬ್ಬಳ್ಳಿ: ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ಭಾನುವಾರ ಲಕ್ಷಾಂತರ ಮೌಲ್ಯದ ಗಾಂಜಾ ಪತ್ತೆಯಾಗಿದೆ. ರೈಲು ನಿಲ್ದಾಣದ 4ನೇ ಪ್ಲಾಟ್​ಫಾರ್ಮ್​ನಲ್ಲಿ ವಾರಸುದಾರರಿಲ್ಲದ ಬ್ಯಾಗ್​ವೊಂದರಲ್ಲಿ ₹4 ಲಕ್ಷ ಮೌಲ್ಯದ 4 ಕೆಜಿ ಗಾಂಜಾ ಪತ್ತೆಯಾಗಿದೆ. ಅಬಕಾರಿ ಉಪನಿರೀಕ್ಷಕ ಐ.ಡಿ. ಕಿತ್ತೂರು ಗಾಂಜಾ ಜಪ್ತಿ ಮಾಡಿದ್ದಾರೆ. ರೈಲಿನ ಮೂಲಕ ಹುಬ್ಬಳ್ಳಿಗೆ ಗಾಂಜಾ ತಂದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.ಅಕ್ರಮವಾಗಿ ಪೌಷ್ಟಿಕ ಆಹಾರ ಸಂಗ್ರಹ: ಮತ್ತೆ 6 ಜನರ ಬಂಧನ

ಹುಬ್ಬಳ್ಳಿ: ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ವಿತರಿಸುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಇಲ್ಲಿನ ಕಸಬಾಪೇಟ ಪೊಲೀಸರು ಮತ್ತೆ 6 ಜನರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 32ಕ್ಕೇರಿದೆ.ಕಳೆದ ಫೆ. 15ರಂದು ಹಳೇ ಹುಬ್ಬಳ್ಳಿಯ ಗಬ್ಬೂರಿನ ಹೊರವಲಯದಲ್ಲಿರುವ ಗೋದಾಮಿನಲ್ಲಿ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರು, ಬಾಣಂತಿಯರಿಗೆ ನೀಡಬೇಕಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟು ಕಾಳಸಂತೆಯಲ್ಲಿ ಮಾರಾಟದ ಪ್ರಯತ್ನದಲ್ಲಿದ್ದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ದಾಳಿ ಮಾಡಿ ಲಕ್ಷಾಂತರ ರುಪಾಯಿ ಮೌಲ್ಯದ ಪೌಷ್ಟಿಕ ಆಹಾರ ವಶಪಡಿಸಿಕೊಂಡಿದ್ದರು. ಬಳಿಕ ಕಸಬಾಪೇಟ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 26 ಜನರನ್ನು ಬಂಧಿಸಲಾಗಿತ್ತು. ಈಗ ಭಾನುವಾರ ಮತ್ತೆ 6 ಜನರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಸೋನಿಯಾ ಗಾಂಧಿ ನಗರದ ಅಲ್ತಾಫ ಕಲಾದಗಿ, ಬಂಕಾಪುರ ಚೌಕ್‌ದ ದಾದಾಪೀರ ಚೌಧರಿ, ಕೇಶ್ವಾಪುರದ ಸಲೀಂ ಬೇಪಾರಿ, ಉದಯನಗರದ ಸಲೀಂ ಶೇಖ್, ಮೆಹಬೂಬ ನಗರದ ಸಲೀಂ ಅತ್ತಾರ, ಬಂಕಾಪುರ ಚೌಕ್‌ನ ಬಸವರಾಜ ವಾಲ್ಮೀಕಿ ಬಂಧಿತರು. ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದು, ಶೀಘ್ರದಲ್ಲಿ ಇನ್ನುಳಿದ ಆರೋಪಿಗಳ ಬಂಧಿಸುವುದಾಗಿ ಪೊಲೀಸರ ಮೂಲಗಳು ತಿಳಿಸಿವೆ.

Share this article