ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತವರು ಮನೆ ಎಂದೇ ಪ್ರಖ್ಯಾತಿ ಪಡೆದ ಗಾಂಧಿಬಜಾರಿನ ನಾಡಿಗರ ಮನೆಯವರು ದೇವಿಯನ್ನು ವಿಶೇಷವಾಗಿ ಪೂಜೆ ಮಾಡುವುದರೊಂದಿಗೆ ಚಾಲನೆ ನೀಡಲಾಯಿತು. ಮಂಗಳವಾರ ಬೆಳಗ್ಗೆ 7 ಗಂಟೆಯಿಂದಲೇ ತವರು ಮನೆ ಗಾಂಧಿಬಜಾರಿನಲ್ಲಿ ಶ್ರೀ ಅಮ್ಮನವರಿಗೆ ಮಡಿಲಕ್ಕಿ ಅರ್ಪಣೆ ಮತ್ತು ಪೂಜೆ ಆರಂಭಗೊಂಡಿತು.
ಮಂಗಳವಾರ ಬೆಳಗ್ಗೆ 5 ಗಂಟೆಗೆ ಸಮಿತಿ ವತಿಯಿಂದ ಮಂಗಳವಾದ್ಯದೊಂದಿಗೆ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಯಿತು. ಆ ಸಮಾಜದ ಮುತ್ತೈದೆಯರು ಮಂಗಳ ದ್ರವ್ಯಾದಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಂದಿಗೆ ಗಾಂಧಿ ಬಜಾರ್ ನ ತವರುಮನೆಯಲ್ಲಿರುವ ಶ್ರೀ ಮಾರಿಕಾಂಬೆಗೆ ಉಡಿ ತುಂಬಿ ಪೂಜೆ ಸಲ್ಲಿಸುತ್ತಾರೆ. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದವರು ವಿಸರ್ಜನಾ ಮೂರ್ತಿಗೆ ಮಾಂಗಲ್ಯ ಧಾರಣೆ ಮಾಡಿ ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸಿದರು.ದೇವಿಯ ದರ್ಶನ ಪಡೆಯಲು ಭಕ್ತರು ಬೆಳಗ್ಗಿನಿಂದಲೇ ಕಿ.ಮೀ.ದೂರದಷ್ಟು ಸರತಿಯ ಸಾಲಿನಲ್ಲಿ ನಿಂತ್ತಿದ್ದು ಕಂಡು ಬಂತು. ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರೂ ಕೂಡ ಅಲ್ಲಿಯೂ ಸರದಿ ಸಾಲು ಉದ್ದವಾಗಿತ್ತು. ಭಕ್ತರ ಸರದಿ ಸಾಲು ಹೆಚ್ಚು ಕಡಿಮೆ ಗಾಂಧಿ ಬಜಾರ್ ನಿಂದ ಹೊಳೆ ಬಸ್ ನಿಲ್ದಾಣದವರೆಗೆ ಮತ್ತು ಬಸ್ ನಿಲ್ದಾಣ ಅಶೋಕ ವೃತ್ತದವರೆಗೆ, ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಮಾರಿ ಗದ್ದುಗೆಯವರೆಗೂ ಹೀಗೆ ಮೂರು ಕಡೆಯಿಂದಲೂ ಕೂಡ ಸರದಿ ಸಾಲು ಉದ್ದವಾಗಿತ್ತು.
ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಸರತಿ ಸಾಲಲ್ಲಿ ನಿಂತಿದ್ದ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು.
ಬುಧವಾರ ಬೆಳಗ್ಗೆ ಸುಮಾರು 4 ಗಂಟೆಯ ವೇಳೆಗೆ ಹರಿಜನ ಸಮಾಜದವರು ಬೇವಿನುಡುಗೆಯೊಂದಿಗೆ ಆಗಮಿಸಿ ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಗೆ ಕೂರಿಸುವರು. ಅಲ್ಲಿ ಫೆ. 28ರವರೆಗೆ ಪ್ರತಿದಿನ ಹರಕೆ, ಪೂಜೆ ಪ್ರಸಾದ ಇರುತ್ತದೆ. 28 ರಂದು ರಾತ್ರಿ 7 ಗಂಟೆಗೆ ರಾಜಬೀದಿ ಉತ್ಸವದೊಂದಿಗೆ ಶ್ರೀ ಅಮ್ಮನವರ ವನಪ್ರವೇಶ ಮಾಡುವುದರೊಂದಿಗೆ ಜಾತ್ರೆ ಸಮಾಪ್ತಿಗೊಳ್ಳಲಿದೆ.
ಹಬ್ಬದ ಹಿನ್ನೆಲೆಯಲ್ಲಿ ಇಡೀ ನಗರ ಅಲಂಕಾರದಿಂದ ಕಂಗೊಳಿಸುತ್ತಿದೆ. ಮಾರಿಕಾಂಬ ದೇವಸ್ಥಾನದಲ್ಲೂ ಕೂಡ ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಅವರ ಕೊಡುಗೆಯಿಂದಾಗಿ ಲಕ್ಷಾಂತರ ರು. ವೆಚ್ಚದಲ್ಲಿ ಹೂವು ಹಣ್ಣಿನ ಅಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ಈ ಬಾರಿ ಜಾತ್ರೆಯ ಸುತ್ತಮುತ್ತಲ ಪ್ರದೇಶದಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿಲ್ಲ. ದೇವಾಲಯದ ಅನತಿ ದೂರದಲ್ಲಿ ಅಂಗಡಿ ಮುಂಗಟ್ಟುಗಳು ತಲೆ ಎತ್ತಿವೆ. ಮತ್ತೊಂದು ಕಡೆ ಬುಧವಾರದ ಹಬ್ಬಕ್ಕಾಗಿ ಕುರಿಗಳನ್ನು ಈಗಾಗಲೇ ತಮ್ಮ ಮನೆಗಳ ಮುಂದೆ ಕಟ್ಟಲಾಗಿದೆ. ಬುಧವಾರ ದೇವಿಯ ಪೂಜೆಯ ನಂತರ ಕುರಿ ಹರಕೆ ಕಾರ್ಯ ನಡೆಯಲಿದೆ. ಬಸ್ ಗಳು, ರೈಲುಗಳು ತುಂಬಿ ತುಳುಕುತ್ತಿವೆ. ವಿಶೇಷ ಬಸ್ ಹಾಗೂ ರೈಲಿನ ವ್ಯವಸ್ಥೆ ಕೂಡ ಮಾಡಲಾಗಿದೆ.
ಮಾಂಸದ ಅಂಗಡಿಗಳು ಮಾಂಸ ಮಾರಾಟಕ್ಕೆ ಸಿದ್ಧಗೊಂಡಿವೆ. ತಮ್ಮ ಅಂಗಡಿಗಳನ್ನು ಶಾಮಿಯಾನ ಲೈಟಿಂಗ್ಸ್ ಹಾಕಿ ಸಿಂಗಾರಗೊಳಿಸಿದ್ದಾರೆ. ಮನೆ ಮನೆಗಳಲ್ಲೂ ಕೂಡ ಹಬ್ಬಕ್ಕೆ ತಯಾರಿ ಜೋರಾಗಿದೆ.