ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

KannadaprabhaNewsNetwork | Published : Mar 12, 2025 12:45 AM

ಸಾರಾಂಶ

೯ ದಿನಗಳ ಕಾಲ ಸಡಗರ ಸಂಭ್ರಮದಿಂದ ನಡೆಯುವ ದೇವಿಯ ಜಾತ್ರೆ ಕೊನೆಯ ದಿನದಂದು ದೇವಿಯ ವಿಸರ್ಜನಾ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಸಂಚರಿಸುತ್ತದೆ.

ಸಂತೋಷ ದೈವಜ್ಞ ಮುಂಡಗೋಡ

ಐತಿಹಾಸಿಕ ಹಿನ್ನೆಲೆಯುಳ್ಳ ತಾಲೂಕಿನ ಮಳಗಿ ಗ್ರಾಮ ದೇವತೆ ಶ್ರೀಮಾರಿಕಾಂಬಾ ದೇವಿಯ ೨೮ನೇ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ದೊರೆತಿದ್ದು, ಮಾ. ೧೯ರವರೆಗೆ ೯ದಿನಗಳ ಕಾಲ ಜರುಗಲಿದೆ.

ದೇವಿಯ ಪ್ರತಿಷ್ಠಾಪನೆಗೆ ಜಾತ್ರಾ ಗದ್ದುಗೆಯ ಸುತ್ತ ಸುಂದರವಾದ ಚೌತ ಮನೆ ನಿರ್ಮಿಸಲಾಗಿದ್ದು, ಭಕ್ತಾಧಿಗಳಿಗೆ ಶಿಸ್ತುಬದ್ದವಾಗಿ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮದಿಂದ ಕಾರ್ಯ ನಿಮಿತ್ತ ದೂರದ ಊರಿಗೆ ವಲಸೆ ಹೋದವರೆಲ್ಲ ಮರಳಿ ಗ್ರಾಮ ಸೇರಿದ್ದು, ಗ್ರಾಮದ ಮನೆ ಮನೆಗಳಲ್ಲಿ ಕೂಡ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಶಿಸ್ತಿಗೆ ಹೆಸರಾದ ಮಳಗಿ ಗ್ರಾಮ: ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯದಿಂದ ಹಿಡಿದು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಪಕ್ಷ ಜಾತಿ ಭೇದ ಮರೆತು ಪ್ರತಿಯೊಬ್ಬರು ಕೂಡ ಒಗ್ಗಟ್ಟಾಗಿ ಆಚರಿಸುವುದು ಇಲ್ಲಿಯ ವಿಶೇಷತೆ. ಅದೇ ರೀತಿ ಈಗ ಮಾರಿಕಾಂಬಾ ದೇವಿ ಜಾತ್ರೆ ಕೂಡ ಸಕಲ ಸಿದ್ದತೆಯೊಂದಿಗೆ ಒಗ್ಗೂಡಿಕೊಂಡು ಆಚರಿಸಲಾಗುತ್ತಿದ್ದು, ಮಳಗಿ ವ್ಯಾಪ್ತಿಯ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನ ಕೂಡ ಜಾತ್ರೆ ಕಾರ್ಯದಲ್ಲಿ ನಿರತರಾಗಿದ್ದು, ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಲ್ಲದೇ ಜಾತ್ರೆಗೆ ಯಾವುದೇ ರೀತಿ ದೇಣಿಗೆ ಸಂಗ್ರಹಿಸಲಾಗುವುದಿಲ್ಲ.

ದೇವಿಯ ಇತಿಹಾಸ: ೧೭-೧೮ನೇ ಶತಮಾನದಲ್ಲಿ ಮಳಗಿ ಪಕ್ಕದ ಗ್ರಾಮ ಗೊಟಗೊಡಿಕೊಪ್ಪ ಗ್ರಾಮದ ಗದ್ದೆಯೊಂದರಲ್ಲಿ ರೈತರೊಬ್ಬರು ಉಳುಮೆ ಮಾಡುತ್ತಿದ್ದಾಗ ಮಣ್ಣಿನಡಿಗೆ ಕಟ್ಟಿಗೆಯ ಪೆಟ್ಟಿಗೆಯೊಂದು ಕಾಣಿಸಿಕೊಂಡಿದೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ ದೇವಿಯ ಮೂರ್ತಿ ಪತ್ತೆಯಾಗಿದ್ದು, ಈ ವಿಷಯ ಗೊಟಗೊಡಿಕೊಪ್ಪ, ಕೊಳಗಿ, ಮಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮುಟ್ಟಿಸಲಾಗಿದೆ. ಸುದ್ದಿ ಹಬ್ಬುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸುತ್ತಮುತ್ತಲಿನ ೩೦ ಹಳ್ಳಿಯ ಮುಖ್ಯಸ್ಥರು ಸೇರಿ ಮಳಗಿ ಗ್ರಾಮದಲ್ಲಿ ದೇವಿ ಪ್ರತಿಷ್ಠಾಪಿಸಲು ತೀರ್ಮಾನಿಸಿ ಮಳಗಿ ಗ್ರಾಮದ ದೊಡ್ಡ ಮನೆತನವಾದ ನಾಡಿಗ್ ಹಾಗೂ ಗೊಟಗೊಡಿಕೊಪ್ಪ ಗ್ರಾಮದ ಸತೀಶ ಪಾಟೀಲ (ದೈವಜ್ಞ) ಅವರನ್ನು ಇದರ ಮೋಕ್ತೇಸರರನ್ನಾಗಿ ನೇಮಕ ಮಾಡಿ ಅಂದಿನಿಂದಲೂ ನಾಡಿಗ್ ಹಾಗೂ ಪಾಟೀಲ (ದೈವಜ್ಞ) ಮನೆತನದವರೇ ದೇವಿ ಪೂಜೆ ನೆರವೇರಿಸುತ್ತಾ ಬರುತ್ತಿದ್ದಾರೆ.

೧೯೭೨ರಿಂದ ಜಾತ್ರೆ: ದೇವಿಯ ಅನುಗ್ರಹ ಪ್ರಾಪ್ತಿಸಿಕೊಳ್ಳುವ ಉದ್ದೇಶದಿಂದ ೨ ವರ್ಷಕ್ಕೊಂದು ಬಾರಿ ೯ ದಿನಗಳ ಕಾಲ ಗ್ರಾಮ ದೇವಿ ಮಾರಿಕಾಂಬೆ ಜಾತ್ರೆಯನ್ನು ನಡೆಸುವ ತೀರ್ಮಾನ ಕೈಗೊಂಡು ಅದರಂತೆ ೧೯೭೨ ರಿಂದಲೂ ಕೂಡ ಗ್ರಾಮದಲ್ಲಿ ಮಾರಿಕಾಂಬಾ ದೇವಿ ಜಾತ್ರಾಮಹೋತ್ಸವ ಪ್ರಾರಂಭಿಸಲಾಗಿದೆ. ಈಗಾಗಲೇ ೨೭ ಜಾತ್ರೆಗಳು ನಡೆದಿದ್ದು, ೨೮ ನೇ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನಡೆಯುತ್ತಿದೆ.

ಜಾತ್ರಾ ಸಂಪ್ರದಾಯ: ಮೂರ್ತಿ ಲಭಿಸಿದ ಗೊಟಗೊಡಿಕೊಪ್ಪಕ್ಕೆ ದೇವಿಸರ ಎಂದು ಹೆಸರಿಸಲಾಗಿದ್ದು, ದೇವಿಯ ತವರು ಮನೆ ಗೊಟಗೊಡಿಕೊಪ್ಪದಲ್ಲಿ ದೇವಿಗೆ ಉಡಿ ತುಂಬುವ ಶಾಸ್ತ್ರ ನೆರವೇರಿಸುವ ಮೂಲಕ ಜಾತ್ರಾ ಕಾರ್ಯ ಪ್ರಾರಂಭಿಸಲಾಗುತ್ತದೆ. ಜಾತ್ರೆ ಮುಗಿಯುವವರೆಗೂ ಪ್ರತಿ ದಿನ ನಾಡಿಗ್ ಮತ್ತು ಪಾಟೀಲ (ದೈವಜ್ಞ) ಮನೆತನದವರಿಂದ ದೇವಿಗೆ ಪ್ರಥಮ ಪೂಜೆ ನೆರವೇರಿಸಲಾಗುತ್ತದೆ.ಇಷ್ಟಾರ್ಥ ಈಡೇರಿಸುವ ದೇವಿ ಎಂದೇ ಹೆಸರಾಗಿರುವ ದೇವಿಗೆ ಬಹುತೇಕ ಭಕ್ತಾಧಿಗಳು ಕುಂಬಳಕಾಯಿ ಬಲಿ ನೀಡುವ ಪದ್ಧತಿ ಇದೆ.

ಶಿಲೆಯಲ್ಲಿಯೇ ದೇವಿಯ ದೇವಾಲಯ ನಿರ್ಮಾಣ: ಸುತ್ತಮುತ್ತ ಎಲ್ಲಿಯೂ ಇಲ್ಲದಂತಹ ಸುಮಾರು ₹೨.೫ ಕೋಟಿ ವೆಚ್ಚದಲ್ಲಿ ಮಳಗಿ ಗ್ರಾಮದೇವಿ ಶ್ರೀಮಾರಿಕಾಂಬಾ ದೇವಿ ದೇವಾಲಯವನ್ನು ಶಿಲೆಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ದೇವಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಜಾತ್ರಾ ಸಮಾರಂಭ: ಮಾ. ೧೧ ರಂದು ರಾತ್ರಿ ೮.೩೦ಕ್ಕೆ ಗರ್ಭಗುಡಿಯ ಹೊರಾಂಗಣದ ಗದ್ದುಗೆ ಮೇಲೆ ದೇವಿಯ ಪ್ರತಿಷ್ಠಾಪನಾ ಪೂಜಾ ವಿನಿಯೋಗಗಳು ಲಗ್ನ(ಮಾಂಗಲ್ಯಧಾರಣೆ) ಕಾರ್ಯಕ್ರಮ ಜರುಗಿದ್ದು, ಮಾ.೧೨ ರಂದು ಬೆಳಗ್ಗೆ ೯.೧೬ ಕ್ಕೆ ದೇವಿಯ ರಥಾರೋಹಣ ಮೆರವಣಿಗೆ ಪ್ರಾರಂಭವಾಗಿ ಪ್ರಮುಖ ಬೀದಿಗಳ ಮೂಲಕ ಸಂಚರಿಸಲಿದ್ದು, ಮಧ್ಯಾಹ್ನ ೧.೩೫ ಕ್ಕೆ ಚೌತ್ ಮನೆಯ ಜಾತ್ರಾ ಗದ್ದುಗೆ ಮೇಲೆ ಪ್ರತಿಷ್ಠಾಪನೆಗೊಳ್ಳಲಿದೆ. ಮಾ.೧೩ ರಿಂದ ಮಾ.೧೮ ರವರೆಗೆ ನಿತ್ಯ ಬೆಳಗ್ಗೆ ೮ ಗಂಟೆಯಿಂದ ರಾತ್ರಿ ೯ರವರೆಗೆ ಹಣ್ಣು ಕಾಯಿ, ಕಾಣಿಕೆ, ಹರಕೆ, ಬೇವಿನ ಉಡಿಗೆ, ತುಲಾಭಾರ ಮುಂತಾದ ಸೇವೆಗಳು ನಡೆಯುತ್ತವೆ. ರಾತ್ರಿ ೯.೩೦ ರಿಂದ ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಮಾ.೧೯ ರಂದು ಬೆಳಗ್ಗೆ ೮ ರಿಂದ ಮಧ್ಯಾಹ್ನ ೧೨.೩೦ ಗಂಟೆವರೆಗೆ ಮಾತ್ರ ಹಣ್ಣು ಕಾಯಿ ಸೇವೆ ಜರುಗಲಿದ್ದು, ಮಧ್ಯಾಹ್ನದ ನಂತರ ಜಾತ್ರಾ ವಿಸರ್ಜನಾ ಕಾರ್ಯಕ್ರಮ ನಡೆಯುತ್ತದೆ ಎಂದು ಶ್ರೀ ಮಾರಿಕಾಂಬಾ ದೇವಾಲಯ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾಗರಾಜ ಅಂಡಗಿ ತಿಳಿಸಿದ್ದಾರೆ.

ವಿಸರ್ಜನಾ ಮೆರವಣಿಗೆ: ೯ ದಿನಗಳ ಕಾಲ ಸಡಗರ ಸಂಭ್ರಮದಿಂದ ನಡೆಯುವ ದೇವಿಯ ಜಾತ್ರೆ ಕೊನೆಯ ದಿನದಂದು ದೇವಿಯ ವಿಸರ್ಜನಾ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಸಂಚರಿಸುತ್ತದೆ. ಬಳಿಕ ದೇವಿಯ ಮೂರ್ತಿ ಸಿಕ್ಕ ಸ್ಥಳವಾದ ಗೊಟಗೊಡಿಕೊಪ್ಪ ದೇವಿಸರಕ್ಕೆ ತೆರಳಿ ಬಳಿಕ ಧಾರ್ಮಿಕ ವಿಧಿ ವಿಧಾನದೊಂದಿಗೆ ಮೂರ್ತಿ ಬಿಚ್ಚಿ ವಿಸರ್ಜನಾ ಕಾರ್ಯ ಪೂರ್ಣಗೊಳಿಸಲಾಗುತ್ತದೆ.

Share this article