ಸಿ.ಕೆ. ನಾಗರಾಜ
ಮರಿಯಮ್ಮನಹಳ್ಳಿ: ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಲೆಂದು ಸರ್ಕಾರದಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕವಿಲ್ಲದೇ ನಿರುಪಯುಕ್ತವಾಗಿ ನಿಂತಿವೆ. ಹೈಮಾಸ್ಟ್ ದೀಪಗಳು ಬೆಳಕು ಬೀರದೇ ಬೆದರು ಗೊಂಬೆಗಳಾಗಿ ನಿಂತಿವೆ.ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಹೆಚ್ಚು ಬೆಳಕು ನೀಡುವಂತಹ ಹೈಮಾಸ್ಟ್ ದೀಪ ಅಳವಡಿಸಬೇಕೆಂದು ಸ್ಥಳೀಯ ಜನರ ಒತ್ತಾಯಕ್ಕೆ ಮಣಿದು, ಶಾಲಾ ಆವರಣದಲ್ಲಿ ಮತ್ತು ಆಸ್ಪತ್ರೆಯ ಆವರಣದಲ್ಲಿ ಹಾಗೂ ಕೆಲ ವಾರ್ಡುಗಳ ಪ್ರಮುಖ ಸ್ಥಳಗಳಲ್ಲಿ ಮತ್ತು ಸ್ಮಶಾನ ಪ್ರದೇಶ ಸೇರಿದಂತೆ ಜನಸಂದಣಿ ಇರುವಂತಹ ಪ್ರದೇಶದಲ್ಲಿ ಹೈಮಾಸ್ಟ್ ವಿದ್ಯುತ್ ಕಂಬ ನಿಲ್ಲಿಸಿದ್ದಾರೆ. ಇವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇನ್ನು ಕೆಲವು ಕಂಬಕ್ಕೆ ದೀಪಗಳನ್ನು ಅಳವಡಿಸಿದ್ದಾರೆ. ಆದರೆ ದೀಪಗಳು ಉರಿಯುತ್ತಿಲ್ಲ.
ಸರ್ಕಾರಿ ಶಾಲಾವರಣದಲ್ಲಿ ಹೈಮಾಸ್ಕ್ ದೀಪಗಳು ಬೆಳಗದ ಕಾರಣ ಕುಡುಕರ ಅಡ್ಡೆಯಾಗಿದೆ. ಶಾಲಾ ರಜಾ ದಿನಗಳಲ್ಲಿ ಪ್ರತಿದಿನ ಕುಡುಕರು ನಿರ್ಭಯವಾಗಿ ಕುಡಿದು ಬಾಟಲಿಗಳನ್ನು ಬಿಸಾಡುತ್ತಿದ್ದಾರೆ. ಮರುದಿನ ವಿದ್ಯಾರ್ಥಿಗಳು ಸ್ವಚ್ಛಗೊಳಿಸುತ್ತಿದ್ದಾರೆ. ಇನ್ನೊಂದೆಡೆ ಆಸ್ಪತ್ರೆಯ ಆವರಣದಲ್ಲಿರುವ ಹೈಮಾಸ್ಟ್ ದೀಪ ಬೆಳಕು ನೀಡದೇ ಇರುವುದರಿಂದ ಆಸ್ಪತ್ರೆಗೆ ರಾತ್ರಿ ವೇಳೆ ಬರುವ ರೋಗಿಗಳು ಕತ್ತಲೆಯಲ್ಲಿ ಸಾಗಬೇಕಾಗಿದೆ. ತಮ್ಮ ಮೊಬೈಲ್ ಬೆಳಕಿನಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳುವಂತಾಗಿದೆ. ಆಸ್ಪತ್ರೆಯ ಆವರಣದಲ್ಲಿ ನಾಯಿಗಳು ವಿಪರೀತ ಇವೆ. ಇಲ್ಲಿಯೂ ರೋಗಿಗಳು ಜೀವವನ್ನು ಕೈಯಲ್ಲಿ ಹಿಡಿದು ಓಡಾಡಬೇಕಿದೆ.ಮರಿಯಮ್ಮನಹಳ್ಳಿ ತಾಂಡಾ ರಸ್ತೆಯಲ್ಲಿರುವ ಬೀದಿದೀಪಗಳಿಗೆ ವಿದ್ಯುತ್ ದೀಪ ಇಲ್ಲದೇ ರಸ್ತೆ ಉದ್ದಕ್ಕೂ ವಿದ್ಯುತ್ ಕಂಬಗಳು ಬೆಳಕು ನೀಡದೇ ಕತ್ತಲಾವರಿಸಿವೆ. ಇನ್ನೆರಡು ದಿನಗಳಲ್ಲಿ ದೀಪಾವಳಿ ಹಬ್ಬ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಜನರು ಮುಂದಾದರೆ ಹೈಮಾಸ್ಟ್ ದೀಪಗಳು ಮತ್ತು ತಾಂಡದ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳು ಬೆಳಕು ನೀಡದೇ ಕತ್ತಲಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವಂತಾಗಿದೆ.
ಕತ್ತಲಿನ ಕೂಪದಲ್ಲಿರುವ ಆಸ್ಪತ್ರೆ, ಶಾಲಾ ಆವರಣ, ರಸ್ತೆಗಳು ಮತ್ತು ಸ್ಮಶಾನ ಪ್ರದೇಶದಲ್ಲಿ ರಾತ್ರಿ ವೇಳೆ ಅಂತ್ಯಕ್ರಿಯೆ ನಡೆಸುವುದು ಕಷ್ಟಕರವಾಗಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ವಿದ್ಯುತ್ ಕಂಬಗಳಿಗೆ ಬೆಳಕು ಕಲ್ಪಿಸಿಕೊಡಬೇಕು ಎನ್ನುತ್ತಾರೆ ಮರಿಯಮ್ಮನಹಳ್ಳಿ ನಿವಾಸಿ ರವಿ.ಪ್ರತಿ ವಾರ್ಡ್‌ಗಳಲ್ಲಿ ಕೆಟ್ಟು ಹೋಗಿರುವ ಬೀದಿದೀಪಗಳನ್ನು ತಕ್ಷಣವೇ ಸರಿಪಡಿಸಲಾಗುತ್ತಿದೆ. ಸಿಸಿಎಂಎಸ್ ಪ್ರಾಜೆಕ್ಟ್‌ನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪ್ರಾಜೆಕ್ಟ್ ಆರಂಭವಾಗುವವರೆಗೂ ನಮಗೆ ಹೊಸದಾಗಿ ಖರೀದಿಸಲು ಅವಕಾಶವಿಲ್ಲ. ಈಗಾಗಲೇ ನಿರ್ವಹಣೆಗೆ ನೀಡಿರುವ ಗುತ್ತಿಗೆದಾರರಿಂದಲೇ ಬೀದಿದೀಪ ಸರಿಪಡಿಸಲಾಗುವುದು ಎನ್ನುತ್ತಾರೆ ಮರಿಯಮ್ಮನಹಳ್ಳಿ ಪಪಂ ಮುಖ್ಯಾಧಿಕಾರಿ ಜಿ.ಕೆ. ಮಲ್ಲೇಶ್.