ದಾಂಪತ್ಯ ಎನ್ನುವುದು ಪವಿತ್ರ ಬಂಧನ: ಮಣಕವಾಡ ಶ್ರೀಗಳು

KannadaprabhaNewsNetwork |  
Published : Oct 19, 2026, 02:30 AM IST
ಕಾರ್ಯಕ್ರಮದಲ್ಲಿ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

ಕೇವಲ ದೇಹಗಳನ್ನ ಒಂದು ಮಾಡುವುದು ಮದುವೆಯಲ್ಲ, ಎರಡು ಮನಸ್ಸುಗಳನ್ನ, ಆತ್ಮಗಳನ್ನ ಬೆಸುವ ಮೂಲಕ ವಿವಾಹವಾಗುವ ಶ್ರೇಷ್ಠ ಸಂಸ್ಕೃತಿ ಭಾರತ ದೇಶದಲ್ಲಿ ಮಾತ್ರ ನಡೆಯುತ್ತದೆ. ದಾಂಪತ್ಯ ಅನ್ನುವುದು ಪವಿತ್ರ ಬಂಧನವಾಗಿದೆ.

ಕನ್ನಡಪ್ರಭ ವಾರ್ತೆ ಮುಳಗುಂದ

ಕೇವಲ ದೇಹಗಳನ್ನ ಒಂದು ಮಾಡುವುದು ಮದುವೆಯಲ್ಲ, ಎರಡು ಮನಸ್ಸುಗಳನ್ನ, ಆತ್ಮಗಳನ್ನ ಬೆಸುವ ಮೂಲಕ ವಿವಾಹವಾಗುವ ಶ್ರೇಷ್ಠ ಸಂಸ್ಕೃತಿ ಭಾರತ ದೇಶದಲ್ಲಿ ಮಾತ್ರ ನಡೆಯುತ್ತದೆ. ದಾಂಪತ್ಯ ಅನ್ನುವುದು ಪವಿತ್ರ ಬಂಧನವಾಗಿದೆ. ದಾಂಪತ್ಯಕ್ಕೆ ಜೀವನಕ್ಕೆ ಹೆಜ್ಜೆ ಇಡುವ ನವ ಜೋಡಿಗಳು ಪರಸ್ಪರ, ಪ್ರೀತಿ, ಹೊಂದಾಣಿಕೆಯಿಂದ ಬದುಕು ನಡೆಸಿ ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು ಹೇಳಿದರು.

ಸಮೀಪದ ಸೊರಟೂರ ಗ್ರಾಮದಲ್ಲಿ ಭಾನುವಾರ ಶ್ರೀ ಆದಿಶಕ್ತಿ ವಿವಿಧೋದ್ದೇಶಗಳ ಟ್ರಸ್ಟ್ ಹಾಗೂ ದುರ್ಗಾದೇವಿ ಸಮಸ್ತ ಸದ್ಭಕ್ತ ಮಂಡಳಿ ವತಿಯಿಂದ ದಸರಾ ಮಹೋತ್ಸವ ಅಂಗವಾಗಿ ಜರುಗಿದ 2ನೇ ವರ್ಷದ ಸರ್ವ ಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಇದು ಬಡವರ ಮದುವೆಯಲ್ಲ, ಭಾಗ್ಯವಂತರ ಮದುವೆ ಮಹೋತ್ಸವ. ಸಾಮೂಹಿಕ ವಿವಾಹಗಳು ಕೇವಲ ದುಂದುವೆಚ್ಚವನ್ನ ಕಡಿವಾಣ ಹಾಕಲು ಮಾತ್ರವಲ್ಲ, ಜತೆಗೆ ಸಮಾಜದಲ್ಲಿ ಸಮಾನತೆ, ಸಹಕಾರ ಹಾಗೂ ಸರಳ ಜೀವನ ಮೌಲ್ಯಗಳನ್ನ ಬೆಳೆಸುವ ಮಹತ್ವದ ವೇದಿಕೆಗಳಾಗಿವೆ. ಇಂದಿನ ಆಧುನಿಕತೆಯಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಅಗತ್ಯ, ಅವರೀವರ ಮಾತುಗಳಿಗೆ ಕಿವಿಗೊಡದೇ ನಮ್ಮ ಆತ್ಮಸಾಕ್ಷಿ ಮೆಚ್ಚುವಂತೆ ಬದುಕು ನಡೆಸಿ, ಸಾರ್ಥಕತೆಯ ಜೀವನ ನಡೆಸಬೇಕು ಎಂದರು.

ವರವಿಯ ಮೌನೇಶ್ವರ ಸ್ವಾಮಿಗಳು ಮಾತನಾಡಿ, ದುಬಾರಿ ಮದುವೆಗಳಿಂದ ಬಡ, ಮದ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ಇಂದಿನ ದಿನಗಳಲ್ಲಿ ಸೊರಟೂರ ಗ್ರಾಮದಲ್ಲಿ ಮುಖಂಡ ಶಿವಾನಂದ ಎಸ್.ಮಾದಣ್ಣವರ ನೇತೃತ್ವದಲ್ಲಿ ಹಮ್ಮಿಕೊಂಡ 15 ಜೋಡಿ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಸೊರಟೂರ ಓಂಕಾರೇಶ್ವರಗಿರಿ ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಸೊರಟೂರ- ಗುಡ್ಡದಾನ್ವೇರಿ ಅನ್ನದಾನೇಶ್ವರ ಶಾಖಾಮಠದ ಶಿವಯೋಗಿಶ್ವರ ಸ್ವಾಮಿಗಳು ಆಶೀರ್ವಚನ ನೀಡಿದರು. ಈ ವೇಳೆ 15 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಗದಗ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ವಾಸಣ್ಣ ಕುರಡಗಿ, ಷಣ್ಮುಖಪ್ಪ ಬಡ್ನಿ, ರಾಮಣ್ಣ ಕಮ್ಮಾರ, ಹುಮಾಯಿನ್ ಮಾಗಡಿ, ಶಿವಾನಂದ ಎಸ್.ಮಾದಣ್ಣವರ, ಬಸವರಾಜ ಸುಂಕಾಪುರ, ವಿಜಯ ನೀಲಗುಂದ ಸೇರಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಸಮಸ್ಯೆಗಳ ಬಗ್ಗೆ ಬಿಜೆಪಿಗೆ ಕಾಳಜಿಯಿಲ್ಲ: ಸಚಿವ ಶಿವರಾಜ ತಂಗಡಗಿ
ಇಂದು ಐತಿಹಾಸಿಕ ಕುಕನೂರು ಮಹಾಮಾಯೆ ದೇವಿ ರಥೋತ್ಸವ