ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮುರುಘರಾಜೇಂದ್ರ ಬೃಹನ್ಮಠದಲ್ಲಿ ಗುರುವಾರ ನಡೆದ 34 ನೇ ವರ್ಷದ ಒಂಬತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಶ್ರೀಗಳು, ಶ್ರೀಮಠದಲ್ಲಿ ಇಲ್ಲಿವರೆಗೆ 18 ಸಾವಿರ ಜೋಡಿಗಳು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿರುವುದು ಇತಿಹಾಸವಾಗಿದೆ. ನದಿಯೊಳಗೆ ನದಿ ಬೆರೆತಂತೆ, ಹಾಲಿನೊಳಗೆ ಹಾಲು ಬೆರೆತಂತೆ ಸತಿ ಪತಿಗಳು ಒಂದಾಗಿ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುತ್ತ ಸಂಸಾರವನ್ನು ಸಾಗಿಸಬೇಕೆಂದರು.
ಉಳವಿ ಶ್ರೀ ಬಸವಲಿಂಗಮೂರ್ತಿ ಸ್ವಾಮಿಗಳು ಮಾತನಾಡಿ, ಯಾವುದಕ್ಕೆ ಸಾವು ಇಲ್ಲವೋ, ಯಾವುದು ನಿರಂತರವಾಗಿರುತ್ತದೆಯೋ ಅದನ್ನು ಕಲಿಸುವಂತಹುದೇ ಶಿಕ್ಷಣ. ಇಂತಹ ಶಿಕ್ಷಣವನ್ನು ನೀಡುವ ಗುರುವನ್ನು ನಾವೆಲ್ಲ ಗೌರವಿಸಬೇಕು. ಈ ದಿನ ಹೊಸ ಜೀವನಕ್ಕೆ ಕಾಲಿಡುತ್ತಿರುವ ನವ ವಧುವರರು ದೇವರ ದಾಸಿಮಯ್ಯ ಹಾಗೂ ದುಗ್ಗಳೆಯರಂತೆ ಪರಸ್ಪರ ಹೊಂದಿಕೊಂಡು ಬದುಕುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.ಶ್ರೀ ತಿಪ್ಪೇರುದ್ರ ಸ್ವಾಮಿಗಳು ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣುಮಕ್ಕಳು ಆ ಮನೆಯನ್ನು ಒಡೆಯದೆ, ಅತ್ತೆ ಮಾವರನ್ನು ತಂದೆತಾಯಿಯಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ 2 ಜೋಡಿಗಳ ವಿವಾಹ ನೆರವೇರಿತು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ವಚನಕಮ್ಮಟದ ನಿರ್ದೇಶಕ ವೀರಭದ್ರಪ್ಪ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.