ಬೆಂಗಳೂರು : ಲಾಡ್ಜ್‌ನಲ್ಲಿ ಪರಸಂಗದಲ್ಲಿದ್ದಾಗ ತನ್ನ ಪ್ರಿಯತಮನ ಜತೆ ಜಗಳವಾಡಿ ವಿವಾಹಿತೆಯೊಬ್ಬಳು ನೇಣು ಬಿಗಿದು ಆತ್ಮ*ತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯದ ನಿವಾಸಿ ಯಶೋಧ (38) ಮೃತ ದುರ್ದೈವಿ. ಮೂರು ದಿನಗಳ ಹಿಂದೆ ಮಾಗಡಿ ರಸ್ತೆ ಸಮೀಪದ ಓಯೋ ಚಾಂಪಿಯನ್ ಕಂಫರ್ಟ್ ಲಾಡ್ಜ್‌ನಲ್ಲಿ ಈ ಅನೈತಿಕ ಸಂಬಂಧ ಗಲಾಟೆಗೆ ದುರಂತ ಅಂತ್ಯ ಕಂಡಿದೆ.
ನೆರೆಹೊರೆಯ ಅನೈತಿಕ ಸಂಬಂಧ:
ತನ್ನ ಪತಿ ಹಾಗೂ ಇಬ್ಬರು ಮಕ್ಕಳ ಜತೆ ಯಶೋಧ ನೆಲೆಸಿದ್ದಳು. ಮೃತಳ ಪತಿ ಚಾಲಕ ಹಾಗೂ ಸಣ್ಣ ಪ್ರಮಾಣದಲ್ಲಿ ಫೈನಾನ್ಸ್ ವ್ಯವಹಾರ ಸಹ ನಡೆಸುತ್ತ ಜೀವನ ಸಾಗಿಸುತ್ತಿದ್ದ. ಪುತ್ರಿ ಸಿಎ ಓದುತ್ತಿದ್ದಾಳೆ. ಮೃತ ಯಶೋಧಳ ಮನೆ ಪಕ್ಕದಲ್ಲೇ ನೆಲೆಸಿರುವ ಖಾಸಗಿ ಲೆಕ್ಕ ಪರಿಶೋಧಕ ವಿಶ್ವನಾಥ್ ಜತೆ ಆಕೆಗೆ ಸ್ನೇಹ ಬೆಳೆದೂ ಅದೂ ಅಕ್ರಮ ಸಂಬಂಧಕ್ಕೆ ಬೆಸುಗೆ ಹಾಕಿತ್ತು. ಇನ್ನು ವಿಶ್ವನಾಥ್ ಸಹ ವಿವಾಹಿತನಾಗಿದ್ದು, ಆತನಿಗೂ ಇಬ್ಬರು ಮಕ್ಕಳಿದ್ದಾರೆ.
ಕೆಲ ತಿಂಗಳ ಹಿಂದೆ ತನ್ನ ಆಪ್ತ ಗೆಳತಿಯನ್ನು ಪ್ರಿಯಕರನಿಗೆ ಯಶೋಧ ಪರಿಚಯಿಸಿದ್ದಳು. ತರುವಾಯ ಯಶೋಧ ಸ್ನೇಹಿತೆ ಜತೆ ಸಹ ಆತನಿಗೆ ಸಲುಗೆ ಬೆಳೆದು ಕೊನೆಗೆ ಲಾಡ್ಜ್‌ನಲ್ಲಿ ಏಕಾಂತ ಕಳೆಯುವ ಮಟ್ಟಿಗೆ ಬೆಳೆಯಿತು. ತನ್ನ ಗೆಳತಿಗೆ ಜತೆ ಒಡನಾಟ ತಿಳಿದು ಪ್ರಿಯಕರನ ಮೇಲೆ ಯಶೋಧ ಆಕ್ರೋಶ ವ್ಯಕ್ತಪಡಿಸಿದ್ದಳು. ಆದರೆ ಈ ಸ್ನೇಹವನ್ನು ಆತ ನಿರಾಕರಿಸಿದ್ದ. ಆಗ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕು ಎಂದು ಆಕೆ ನಿರ್ಧರಿಸಿದ್ದಳು. ಕೊನೆಗೆ ಮಾಗಡಿ ರಸ್ತೆ ಸಮೀಪದ ಓಯೋ ಲಾಡ್ಜ್‌ಗೆ ಗೆಳತಿ ಜತೆ ಪ್ರಿಯಕರ ತೆರಳುವ ಮಾಹಿತಿ ಪಡೆದು ಯಶೋಧ ಹಿಂಬಾಲಿಸಿದ್ದಳು ಎಂದು ತಿಳಿದು ಬಂದಿದೆ.
ಅದೇ ಲಾಡ್ಜ್‌ನಲ್ಲೇ ಅಕ್ಕಪಕ್ಕದ ರೂಮ್:
ಮಾಗಡಿ ರಸ್ತೆಯ ಅದೇ ಲಾಡ್ಜ್‌ನಲ್ಲೇ ಯಶೋಧ ಒಟ್ಟಿಗೆ ಪ್ರಿಯಕರ ಏಕಾಂತ ಕಳೆದಿದ್ದ. ಹೀಗಾಗಿ ತನ್ನ ಪ್ರಿಯಕರ ಚಲನವಲನ ಬಗ್ಗೆ ಆಕೆಗೆ ಸ್ಪಷ್ಟ ಮಾಹಿತಿ ತಿಳಿದಿತ್ತು. ತನ್ನಿಂದ ದೂರವಾಗಿ ಸ್ನೇಹಿತೆ ಸಾಂಗತ್ಯಕ್ಕೆ ಬಿದ್ದ ವಿಶ್ವನಾಥ್ ಮೇಲೆ ಯಶೋಧ ಸಿಟ್ಟುಗೊಂಡಿದ್ದಳು. ಸ್ನೇಹಿತೆ ಸಂಗ ತೊರೆಯುವಂತೆ ಆತನಿಗೆ ಹೇಳಿದರೂ ಕೇಳದೆ ಹೋದಾಗ ಮತ್ತಷ್ಟು ಆಕ್ರೋಶಗೊಂಡಿದ್ದಳು. ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಿಯಕರನ ಹಿಂಬಾಲಿಸಿ ಜಗಳ ತೆಗೆದ ಪ್ರೇಯಸಿ
ಅ.2 ರಂದು ಗುರುವಾರ ಮಧ್ಯಾಹ್ನ ಲಾಡ್ಜ್‌ಗೆ ಗೆಳತಿ ಜತೆ ವಿಶ್ವನಾಥ್ ಹೋದಾಗ ಅವರನ್ನು ಹಿಂಬಾಲಿಸಿ ಯಶೋಧ ಸಹ ತೆರಳಿದ್ದಳು. ಕೊನೆಗೆ ರೂಮ್ ನಂ.305ರಲ್ಲಿ ಆಕೆ ಬಾಡಿಗೆ ಪಡೆದು ತಂಗಿದ್ದಳು. ಕೆಲ ಹೊತ್ತಿನ ಬಳಿಕ ವಿಶ್ವನಾಥ್ ಉಳಿದಿದ್ದ ರೂಮ್‌ಗೆ ತೆರಳಿ ಯಶೋಧ ಬಾಗಿಲು ಬಡೆದು ಏಕಾಂತಕ್ಕೆ ಭಂಗ ತಂದಿದ್ದಾಳೆ. ಇದರಿಂದ ಕೆರಳಿದ ಆತ, ಯಶೋಧಳಿಗೆ ಬೈದು ಕಳುಹಿಸಿದ್ದಾನೆ. ಇದರಿಂದ ಸಿಟ್ಟಾದ ಆಕೆ, ನೀನು ಹೊರಗೆ ಬಾರದೆ ಹೋದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾಳೆ. ಆಗ ಕೊಠಡಿಯಿಂದ ಹೊರಬಂದು ಯಶೋಧ ಮೇಲೆ ಆತ ಗಲಾಟೆ ಮಾಡಿದ್ದಾನೆ. ಈ ಜಗಳದ ಬಳಿಕ ಕೋಪಗೊಂಡ ಆಕೆ, ತನ್ನ ಕೋಣೆಗೆ ತೆರಳಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಲಾಡ್ಜ್ ಸಿಬ್ಬಂದಿಗೆ ತಿಳಿಸಿ ಮಾಜಿ ಪ್ರಿಯತಮೆ ರಕ್ಷಣೆಗೆ ವಿಶ್ವನಾಥ್ ಮುಂದಾಗಿದ್ದಾನೆ. ಆದರೆ ಮೃತಳ ಕೋಣೆಗೆ ಲಾಡ್ಜ್ ಸಿಬ್ಬಂದಿ ತೆರಳುವ ಮುನ್ನವೇ ಆಕೆ ಮೃತಪಟ್ಟಿದ್ದಳು ಎಂದು ತಿಳಿದು ಬಂದಿದೆ.