ಮಾರುತಿ ಜನಸೇವಾ ಸಂಘದಿಂದ ‘ಮಾರುತಿ ಮಾಣಿಕ್ಯ ಮಹೋತ್ಸವ’

KannadaprabhaNewsNetwork | Published : Jan 14, 2025 1:04 AM

ಸಾರಾಂಶ

ಕಳೆದ ನಾಲ್ಕು ದಶಕಗಳ ಕಾಲ ಸಾಮಾಜಿಕ, ಕ್ರೀಡೆ ಸೇರಿದಂತೆ ಶೈಕ್ಷಣಿಕ ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ಣದ ಮಾರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲ 39 ವರ್ಷಗಳನ್ನು ಪೂರೈಸಿದ್ದು, ೨೦೨೫ರಲ್ಲಿ 40 ವರ್ಷವನ್ನು ಆಚರಿಸಲಿದೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಕಳೆದ ನಾಲ್ಕು ದಶಕಗಳ ಕಾಲ ಸಾಮಾಜಿಕ, ಕ್ರೀಡೆ ಸೇರಿದಂತೆ ಶೈಕ್ಷಣಿಕ ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ಣದ ಮಾರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲ 39 ವರ್ಷಗಳನ್ನು ಪೂರೈಸಿದ್ದು, ೨೦೨೫ರಲ್ಲಿ 40 ವರ್ಷವನ್ನು ಆಚರಿಸಲಿದೆ. ಆದ್ದರಿಂದ ಸುಮಾರು ಮೂರು ಕೋಟಿ ರು.ಗೂ ಹೆಚ್ಚಿನ ಮೊತ್ತದ ಸಮಾಜ ಕಾರ್ಯಗಳನ್ನು ಜನವರಿಯಿಂದ ಡಿಸೆಂಬರ್ ವರೆಗೆ ‘ಮಾರುತಿ ಮಾಣಿಕ್ಯ ಮಹೋತ್ಸವ’ ಎಂಬ ಹೆಸರಿನಲ್ಲಿ ಆಚರಿಸಲು ನಿರ್ಧರಿಸಿದೆ.

ಈ ಬಗ್ಗೆ ತೊಕ್ಕೊಟ್ಟು ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾರುತಿ ಜನಸೇವಾ ಸಂಘದ ಪ್ರ. ಕಾರ್ಯದರ್ಶಿ ಕಪಿಲ್ ಎಸ್. ಬಂಗೇರ ಮಾಹಿತಿ ನೀಡಿ, ಉಡುಪಿ ಅಂಬಲಪಾಡಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ನಾಡೋಜ ಡಾ.ಜಿ. ಶಂಕರ್, ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಗೀತಾನಂದ ಫೌಂಡೇಷನ್‌ನ ಆನಂದ ಸಿ. ಕುಂದರ್ ಗೌರವ ಮಾರ್ಗದರ್ಶನದಲ್ಲಿ ವಿವಿಧ ಕ್ಷೇತ್ರದ ಗಣ್ಯರ ಗೌರವ ಸಲಹೆಯೊಂದಿಗೆ ನಾಲ್ಕು ದಶಕಗಳ ಸೇವಾಕಾರ್ಯದ ಆಚರಣೆ ‘ಮಾರುತಿ ಮಾಣಿಕ್ಯ ಮಹೋತ್ಸವ’ ಸೇವೆಯಲ್ಲಿ ಧನ್ಯತೆ ಎಂಬ ಟ್ಯಾಗ್ ಲೈನ್‌ನೊಂದಿಗೆ ಆಚರಿಸಲಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿವಿಧ ಸಮಾಜ ಕಾರ್ಯಗಳನ್ನು ಆಯೋಜಿಸಿದೆ ಎಂದು ಹೇಳಿದರು.2025ರ ಜನವರಿಯಲ್ಲಿ ಮಾರುತಿ ಮಾಣಿಕ್ಯ ವಿದ್ಯುಕ್ತವಾಗಿ ಉದ್ಘಾಟನೆಗೊಂಡು ಬಡಕುಟುಂಬಗಳಿಗೆ ಮನೆ ನಿರ್ಮಾಣ, ಉಳ್ಳಾಲ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಶೀತಲೀಕರಣ ನಾಲ್ಕು ಪೆಟ್ಟಿಗೆಗಳ ಕೊಡುಗೆ ಸೇರಿದಂತೆ ವೈದ್ಯಕೀಯ ಸೇವೆ, ಪರಿಸರ ಸಂಬಧಿ ಕಾರ್ಯಕ್ರಮಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪರಿಸರ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ, ಆಸ್ಪತ್ರೆಗಳ ಸಹಯೋಗದೊಂದಿಗೆ ರಕ್ತದಾನ, ವೈದ್ಯಕೀಯ ಶಿಬಿರವನ್ನು ದಕ್ಷಿಣ ಕನ್ನಡದಲ್ಲಿ ಆಯೋಜಿಸಿದೆ. ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಮತ್ತು ಉಡುಪಿ ಅಂಬಲಪಾಡಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾದ್ಯಂತ ಮಾರುತಿ ಮಾಣಿಕ್ಯ ಮಹೋತ್ಸವ ಅಭಿಯಾನವನ್ನು ಆಯೋಜಿಸಲಾಗಿದೆ.

ಮಾರುತಿ ಮಾಣಿಕ್ಯ ಮಹೋತ್ಸದ ಸಮಾರೋಪ ಸಮಾರಂಭದ ಅಂಗವಾಗಿ ಡಿಸೆಂಬರ್‌ನಲ್ಲಿ ಉಳ್ಳಾಲ ಬೀಚ್ ಫೆಸ್ಟ್ ಆಯೋಜಿಸಲು ತೀರ್ಮಾನಿಸಿದ್ದು, ಡ್ಯಾನ್ಸ್ ಫೆಸ್ಟಿವಲ್, ತಾರಾ ರಸ ಸಂಜೆ, ಬೀಚ್ ಪಂದ್ಯಾಟಗಳು, ಆಹಾರೋತ್ಸವ, ಗಾಳಿಪಟ ಸ್ಪರ್ಧೆ, ಮರಳಿನ ಚಿತ್ರ ರಚನೆ, ದೋಣಿ ಓಟ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾರುತಿ ಜನಸೇವಾ ಸಂಘ ಮತ್ತು ಮಾರುತಿ ಯುವಕ ಮಂಡಲದ ಗೌರವಾಧ್ಯಕ್ಷ ವರದರಾಜ್ ಬಂಗೇರ, ಅಧ್ಯಕ್ಷ ಸಂದೀಪ್ ಪುತ್ರನ್, ಪ್ರಧಾನ ಸಂಚಾಲಕ ಸುಧೀರ್ ವಿ. ಅಮೀನ್ ಮಾಹಿತಿ ನೀಡಿದರು.ಕೋಶಾಧಿಕಾರಿ ಅನಿಲ್ ಚರಣ್ ಉಪಸ್ಥಿತರಿದ್ದರು.

Share this article