- ಥಳಿಸಿದವರ ಮೇಲೆ ಕೊಲೆ ಯತ್ನ ಕೇಸ್ ದಾಖಲಿಸಲು ಒತ್ತಾಯ । ಯಳಂದೂರು ಇನ್ಸ್‌ಪೆಕ್ಟರ್ ಅಮಾನತಿಗೆ ಕರೆ । 19ರಂದು ಪ್ರತಿಭಟನೆಗೆ ಸಜ್ಜು
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣ ಸಂಬಂಧ ಚಂದ್ರು ಎಂಬ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜೂ.೧೯ರಂದು ಬೃಹತ್ ಪ್ರತಿಭಟನೆ ನಡೆಸಿ, ಚಾಮರಾಜನಗರ ಬಂದ್ ಮಾಡಲಾಗುವುದು ಎಂದು ಇರ್ನಾಟಕ ರಾಜ್ಯ ಉಪ್ಪಾರ ಎಸ್ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಾಗಳಿ ರೇವಣ್ಣ ಮತ್ತು ಮುಖಂಡ ಮಾದೇಶ್ ಉಪ್ಪಾರ್ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಭಾವಚಿತ್ರಕ್ಕೆ ಚಂದ್ರು ಎಂಬಾತ ಅಪಮಾನ ಮಾಡಿದ್ದರೆ ತನಿಖೆ ಮಾಡಿ ಕಾನೂನಿನಡಿ ಶಿಕ್ಷೆ ಕೊಡಿಸಲಿ. ಅಲ್ಲದೇ ಆತನನ್ನು ಹಿಡಿದು ಪೊಲೀಸ್ ವಶಕ್ಕೆ ಕೊಡಬಹುದಿತ್ತು. ಆದರೆ, ಏಕಾಏಕಿ ಕಂಬಕ್ಕೆ ಕಟ್ಟಿ, ಚಪ್ಪಲಿ ಹಾರ ಹಾಕಿ ಮನಸೋ ಇಚ್ಛೆ ಹಲ್ಲೆ ನಡೆಸಿರುವುದು ಖಂಡನೀಯ ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಖಂಡನೀಯ. ಅವರು ಕೊಟ್ಟ ಸಂವಿಧಾನದಿಂದಲೇ ನಾವು ಸಹ ಮೀಸಲಾತಿ ಪಡೆಯುತ್ತಿರುವುದು. ಇಂಥ ಘಟನೆಗಳು ಮರುಕಳಿಸಬಾರದು. ಚಂದ್ರು ಎಂಬಾತ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಒಬ್ಬ ಮಾಡಿದ ತಪ್ಪಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಜನಾಂಗವನ್ನು ನಿಂದಿಸುತ್ತಿರುವುದು ಸರಿಯಲ್ಲ. ಈ ಸಂಬಂಧ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
೨೪ ಗಂಟೆಗಳ ಕಾಲ ಗಡುವು ನೀಡುತ್ತಿದ್ದೇವೆ, ಅಷ್ಟರೊಳಗೆ ಸುಮೋಟೊ ಪ್ರಕರಣ ದಾಖಲಿಸಿಕೊಂಡು ಹಲ್ಲೆ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಲ್ಲೆ ನಡೆಸುತ್ತಿದ್ದಾಗ ಸ್ಥಳದಲ್ಲೇ ಇದ್ದ ಇನ್ಸ್‌ಪೆಕ್ಟರ್ ಆಕಾಶ್‌ರನ್ನು ಅಮಾನತುಪಡಿಸಬೇಕು. ಇಲ್ಲದಿದ್ದರೆ ಜೂ.೧೯ರಂದು ನಡೆಯುವ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾ ಕೇಂದ್ರ ಬಂದ್ ಮಾಡುತ್ತೇವೆ. ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
---
ಪತ್ರಿಕಾಗೋಷ್ಠಿಯಲ್ಲಿ ಉಪ್ಪಾರ ಎಸ್ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಕಮರವಾಡಿ ರೇವಣ್ಣ ಮಾತನಾಡಿದರು.