ಕನ್ನಡಪ್ರಭ ವಾರ್ತೆ, ಪೀಣ್ಯ ದಾಸರಹಳ್ಳಿ
ಪ್ರತಿ ವರ್ಷದಂತೆ ಈ ವರ್ಷವೂ ಹತ್ತನೇ ವರ್ಷದ ಅದ್ಧೂರಿ ಸಾಮೂಹಿಕ ಗಣೇಶೋತ್ಸವ ಕಾರ್ಯಕ್ರಮವನ್ನು ಸೆ.12ರಿಂದ ಸೆ.14 ರವರೆಗೆ ಬಾಗಲಗುಂಟೆಯ ಎಂ.ಇ.ಐ ಬಡಾವಣೆಯ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿಯಲ್ಲಿರುವ ಶಾಸಕರ ಕಚೇರಿಯಲ್ಲಿ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಶಾಸಕ ಎಸ್ ಮುನಿರಾಜು ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.ಬಳಿಕ ಮಾತನಾಡಿದ ಶಾಸಕ ಮುನಿರಾಜು ಈ ವರ್ಷವೂ ಕೂಡ ಹತ್ತನೆ ವರ್ಷದ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಕಾರ್ಯಕ್ರಮವು ಮೂರು ದಿನ ನಡೆಯುತ್ತದೆ. ನೂರಕ್ಕೂ ಹೆಚ್ಚು ಗಣೇಶಗಳನ್ನು ಮೆರವಣಿಗೆ ಮಾಡಲಾಗುತ್ತದೆ. ಈ ಬಾರಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ತಂಡದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೆ.12 ಶುಕ್ರವಾರ ಬೆಳಿಗ್ಗೆ 9ಕ್ಕೆ ಗಣೇಶನ ಪ್ರತಿಷ್ಠಾಪನೆ ಹಾಗೂ ಪ್ರಸಾದ ವಿನಿಯೋಗ, ಸೂರಜ್ ಫೌಂಡೇಶನ್ ವತಿಯಿಂದ ಬೆ.11ಕ್ಕೆ ಕ್ಷೇತ್ರದ ಮಹಿಳೆಯರಿಂದ ರಂಗೋಲಿ ಸ್ಪರ್ಧೆ, ಸಂಜೆ 6 ಕ್ಕೆ ಕ್ಷೇತ್ರದ ಮಹಿಳೆಯರು ಮತ್ತು ಪುರುಷರಿಂದ ರಸಮಂಜರಿ ಕಾರ್ಯಕ್ರಮ, ಸೆ.13 ರಂದು ಸಂಜೆ 5ಕ್ಕೆ ಖ್ಯಾತಗಾಯಕ ವಿಜಯ್ ಪ್ರಕಾಶ್ ಮತ್ತು ಅನುರಾದ ಭಟ್ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ. 14ರ ಭಾನುವಾರ ಮಧ್ಯಾಹ್ನ 3ಕ್ಕೆ ಬೃಹತ್ ವಿನಾಯಕನ ಮೂರ್ತಿ ಹಾಗೂ ನೂರಕ್ಕೂ ಹೆಚ್ಚು ಗಣೇಶನ ಮೂರ್ತಿಗಳ ಸಾಮೂಹಿಕ ಮೆರವಣಿಗೆ ಕಾರ್ಯಕ್ರಮ, ವೀರಗಾಸೆ, ಡೊಳ್ಳುಕುಣಿತ, ನಾಸಿಕ್ ಡೋಲ್, ಹುಲಿ ಕುಣಿತ, ಕೇರಳ ತಂಡದಿಂದ ಚಂಡೆ, ಸ್ತಬ್ದ ಚಿತ್ರ (ಟ್ಯಾಬ್ಲೋ) ಹಾಗೂ ಅನೇಕ ಕಲಾತಂಡಗಳೊಂದಿಗೆ ಎಂ.ಎ.ಐ ಆಟದ ಮೈದಾನದಿಂದ ಬಾಗಲಗುಂಟೆ ಮಾರಮ್ಮ ದೇವಸ್ಥಾನ, ಬಾಗಲಗುಂಟೆ ಮುಖ್ಯ ರಸ್ತೆ, ಮಲ್ಲಸಂದ್ರ ಪೈಪ್‌ಲೈನ್ ರಸ್ತೆಯಿಂದ ದಾಸರಹಳ್ಳಿಯ ಬೈಲಪ್ಪ ಸರ್ಕಲ್ ಮುಖಾಂತರ ದಾಸರಹಳ್ಳಿ ಮಟ್ರೋ ನಿಲ್ದಾಣದಿಂದ ಚೊಕ್ಕಸಂದ್ರ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಟಿ.ಎಸ್. ಗಂಗರಾಜು, ಮಂಡಲ ಅಧ್ಯಕ್ಷ ಮೇದರಹಳ್ಳಿ ಸೋಮಶೇಖರ್, ಟಿ. ಶಿವಕುಮಾರ್, ನಾಗಣ್ಣ , ಲಕ್ಷ್ಮಿ ವೆಂಕಟೇಶ್ , ಬಿ.ಎಂ. ನಾರಾಯಣ್ , ಭರತ್ ಸೌಂದರ್ಯ, ಗುರುಪ್ರಸಾದ್, ಅನಂದ್ ರೆಡ್ಡಿ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.