ಕನ್ನಡಪ್ರಭ ವಾರ್ತೆ ನಾಗಮಂಗಲ
ಡೀಸಿ ಡಾ.ಕುಮಾರ ಮಾತನಾಡಿ, ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಒಟ್ಟಾಗಿ ಸೇರಿ 11 ಗಣೇಶ ಮೂರ್ತಿಗಳನ್ನು ಏಕ ಕಾಲದಲ್ಲಿ ಸಾಮೂಹಿಕವಾಗಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡುತ್ತಿರುವುದು ಜಿಲ್ಲೆಯಲ್ಲಿಯೇ ಮೊದಲ ವಿಶೇಷ ಮತ್ತು ವಿನೂತನವಾಗಿದೆ.
ಕಳೆದ ವರ್ಷ ಪಟ್ಟಣದಲ್ಲಿ ಗಣೇಶಮೂರ್ತಿ ಮೆರವಣಿಗೆ ವೇಳೆ ಉಂಟಾದ ಘಟನೆಯಿಂದಾಗಿ ನಾಗಮಂಗಲ ಸೂಕ್ಷ್ಮ ಪ್ರದೇಶವೆಂದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದರು.ಸಂಘಟಕರ ಬೇಡಿಕೆಗಳಿಗನುಸಾರವಾಗಿ ಅಗತ್ಯ ಸಲಹೆ ನೀಡುವ ಜೊತೆಗೆ ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ತಹಸೀಲ್ದಾರ್ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ನೀಡಲಾಗುತ್ತಿದೆ. ಸಂಘಟಕರು ತಿಳಿಸಿರುವಂತೆ ಮೆರವಣಿಗೆಯಲ್ಲಿ ಹಲವು ಜಾನಪದ ಕಲಾತಂಡಗಳು, 200ಕ್ಕೂ ಹೆಚ್ಚು ಮಂದಿ ಪುರೋಹಿತರು ಸೇರಿದಂತೆ ಹೆಚ್ಚು ಜನರು ಪಾಲ್ಗೊಳ್ಳುವರೆಂದು ತಿಳಿದುಬಂದಿದೆ ಎಂದರು.
ಆದರೆ, ಪಟ್ಟಣ ವ್ಯಾಪ್ತಿ ಯಾವುದೇ ಶಾಲೆ ಕಾಲೇಜುಗಳಿಗೆ ರಜೆ ಇಲ್ಲ. ಎಂದಿನಂತೆ ಎಲ್ಲಾ ಶಾಲಾ ಕಾಲೇಜುಗಳು ನಡೆಯುತ್ತವೆ ಎಂದರು.
ಬಂದೋಬಸ್ತ್‌ಗಾಗಿ ಒಬ್ಬರು ಎಸ್ಪಿ, ಇಬ್ಬರು ಎಎಸ್‌ಪಿ, 6 ಮಂದಿ ಡಿವೈಎಸ್ಪಿ, 25 ಮಂದಿ ಸಿಪಿಐ, 50 ಮಂದಿ ಪಿಎಸ್‌ಐ, 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 100 ಮಂದಿ ಗೃಹ ರಕ್ಷಕದಳದ ಸಿಬ್ಬಂದಿ, 3 ಕೆಎಸ್‌ಆರ್‌ಪಿ ತುಕಡಿ, 8 ಡಿಆರ್ ವಾಹನ, 3 ಕ್ಯೂಆರ್‌ಟಿ ತಂಡ ಮತ್ತು 2 ಡ್ರೋನ್ ಕ್ಯಾಮೆರಾ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಸಾಮೂಹಿಕ ಗಣೇಶ ಮೆರವಣಿಗೆ ಮತ್ತು ವಿಸರ್ಜನೆ ಹಿನ್ನೆಲೆಯಲ್ಲಿ ಪಟ್ಟಣವು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೆ.4ರ ಬೆಳಗ್ಗೆ 6 ರಿಂದ ಸೆ.5ರ ಬೆಳಗ್ಗೆ 6ಗಂಟೆ ವರೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲ 10ಕಿ.ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾದರಿಯ ಮದ್ಯದ ಅಂಗಡಿಗಳು, ಬಾರ್‌ಗಳನ್ನು ಮುಚ್ಚಲು ಮತ್ತು ಎಲ್ಲಾ ಬಗೆಯ ಮದ್ಯ ಮಾರಾಟ, ಸಾಗಾಟ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.