ನವಲಗುಂದ: ಸರಳ, ಸಾಮೂಹಿಕ ಮತ್ತು ಅಂತರ್ಜಾತಿ ವಿವಾಹಗಳು ಸಮಾಜದಲ್ಲಿ ಸಮಾನತೆ ತರಲು ಸಹಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬಸವಣ್ಣನವರು ಕೆಳ ಜಾತಿಯವರೊಂದಿಗೆ ಮೇಲ್ಜಾತಿಯವರ ಮದುವೆ ಮಾಡಿಸಿ, ಅಂದೇ ಸಮಾಜದಲ್ಲಿ ಸಮಾನತೆ ತರಲು ಮುನ್ನುಡಿ ಬರೆದರು. ಸರ್ವ ಧರ್ಮಗಳ ವಧು-ವರರು ಸಾಮೂಹಿಕ ವಿವಾಹ ಆಗುವುದರೊಂದಿಗೆ ಸಮಾಜದಲ್ಲಿ ಅಂತರ್ಜಾತಿ ಮದುವೆಗಳು ಆಗಬೇಕು. ಇದರಿಂದ ಸಮಾಜದ ಸರ್ವರಲ್ಲಿ ಸಮಾನತೆ ತರಲು ಸಹಾಯವಾಗುತ್ತದೆ ಎಂದರು.
ಇಲ್ಲಿನ ನಡೆದ 75 ಜೋಡಿಗಳ ಸಾಮೂಹಿಕ ಮದುವೆಯಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಾಜದವರೂ ಮದುವೆಯಾಗುತ್ತಿರುವುದು ಸಂತೋಷದ ಕ್ಷಣ ಎಂದ ಅವರು, ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧರ ನಡುವೆ ಎಲ್ಲರೂ ಮನುಷ್ಯರು ಮನುಷ್ಯರಾಗಿ ಬದುಕಬೇಕು. ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಬೇಕು ಎಂದರು.ಜಾತಿ ವ್ಯವಸ್ಥೆಯು ಹೋಗಬೇಕೆಂದರೆ ಅಂತರ್ಜಾತಿಯ ವಿವಾಹಗಳು ಹೆಚ್ಚು ಆಗಬೇಕು ಎಂದ ಅವರು, ಇಲ್ಲಿ ಮದುವೆಯಾದ ನೂತನ ದಂಪತಿ ಇಬ್ಬರೇ ಮಕ್ಕಳನ್ನು ಮಾಡಿಕೊಳ್ಳಬೇಕು. ಏಕೆಂದರೆ ಭಾರತದಲ್ಲಿ ಜನಸಂಖ್ಯೆ ಅತಿ ಹೆಚ್ಚಾಗುತ್ತ ಹೋಗುತ್ತಿದೆ ಎಂದು ಸಲಹೆ ಮಾಡಿದರು.
ಹೆಣ್ಣು ಒಂದು ಕಡೆ ಗಂಡು ಒಂದು ಕಡೆ ಇತ್ತು, ಅವರಿಬ್ಬರೂ ಸೇರಿ ವಧು-ವರರಾದರೆ, ಅಕ್ಕಿ ಒಂದು ಕಡೆ ಅರಿಶಿನ ಸೇರಿ ಮಂತ್ರಾಕ್ಷತೆಯಾಯಿತು. ಮದುವೆಯ ಖರ್ಚಿನ ಹಣದಿಂದ ಸ್ವಂತ ಉದ್ಯೋಗವನ್ನು ಮಾಡುವ ಮೂಲಕ ಹೊಸ ಜಗತ್ತಿನಲ್ಲಿ ಮತ್ತೊಬ್ಬರಿಗೆ ಉದ್ಯೋಗ ಕೊಡುವ ರೀತಿಯಲ್ಲಿ ಬೆಳೆಯಿರಿ ಎಂದರು.
ಕೋನರೆಡ್ಡಿ ಅವರ ಮಗ ಮತ್ತು ಅವರ ಪತ್ನಿ ಸೇರಿದಂತೆ ಇಲ್ಲಿ ಮದುವೆಯಾದ ನವದಂಪತಿಗಳಿಗೆ ಅಭಿನಂದನೆಗಳು ಎಂದರು.
ಸಚಿವರಾದ ಕೆ.ಜೆ. ಜಾರ್ಜ್, ಎಚ್.ಸಿ. ಮಹಾದೇವಪ್ಪ, ಕೃಷ್ಣ ಬೈರೇಗೌಡ, ರಾಮಲಿಂಗಾರಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಪ್ರಸಾದ ಅಬ್ಬಯ್ಯ, ಬಸವರಾಜ ಶಿವಣ್ಣವರ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಇದ್ದರು.