ಸಾಮೂಹಿಕ ವಿವಾಹ ಪ್ರಗತಿಗೆ ಪೂರಕ

KannadaprabhaNewsNetwork | Published : Apr 19, 2025 12:40 AM

ಸಾರಾಂಶ

ಸಾಮೂಹಿಕ ವಿವಾಹಗಳು ಬಡವರ ಮದುವೆಗಳು ಅಲ್ಲ, ಭಾಗ್ಯವಂತರ ಮದುವೆಗಳು. ಇಂತಹ ವಿವಾಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಾಗಿದ್ದು ದುಂದುವೆಚ್ಚ, ಆಡಂಬರಕ್ಕೆ ಕಡಿವಾಣ ಹಾಕಲು ಸಾಧ್ಯ.

ಕುಷ್ಟಗಿ:

ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗುವ ಜತೆಗೆ ಪ್ರಗತಿಗೆ ಪೂರಕವಾಗುತ್ತದೆ ಎಂದು ಕುಷ್ಟಗಿ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹಿರೇಮನ್ನಾಪುರ ಗ್ರಾಮದ ಶ್ರೀಕಾಶಿ ವಿಶ್ವನಾಥ ಜಾತ್ರಾ ಮಹೋತ್ಸವ ಕಳಸಾರೋಹಣ ಹಾಗೂ ಮಹಾರಥೋತ್ಸವ ಮತ್ತು 70ನೇ ವರ್ಷದ ಶ್ರೀ ಶರಣಬಸವೇಶ್ವರ ಪುರಾಣ ಮಹೋತ್ಸವದ ಅಂಗವಾಗಿ ಜರುಗಿದ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಮೂಹಿಕ ವಿವಾಹಗಳು ಬಡವರ ಮದುವೆಗಳು ಅಲ್ಲ, ಭಾಗ್ಯವಂತರ ಮದುವೆಗಳು. ಇಂತಹ ವಿವಾಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಾಗಿದ್ದು ದುಂದುವೆಚ್ಚ, ಆಡಂಬರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.

ಸಾಮೂಹಿಕ ವಿವಾಹ ಬಡವರ ಮದುವೆ ಎಂದು ಭಾವಿಸುವುದು ತಪ್ಪು. ಸಹಸ್ರಾರು ಭಕ್ತರ, ಮಠಾಧೀಶರ ಆಶೀರ್ವಾದದೊಂದಿಗೆ ಬಂಧನಕ್ಕೊಳಗಾಗುವ ಭಾಗ್ಯ. ಜೀವನದ ಸಾರ್ಥಕತೆಯ ಕ್ಷಣವಾಗಿದೆ ಎಂದು ಹೇಳಿದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಸಾಮೂಹಿಕ ವಿವಾಹ ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ. ವಧು–ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಇಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ-ಶ್ರೀಮಂತ, ಮೇಲು-ಕೀಳೇನ್ನದೆ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯ ಮಾಡಬೇಕು. ಸಾಮಾಜಿಕ ಕಳಕಳಿಯೊಂದಿಗೆ ನಡೆಸುವ ಸಾಮೂಹಿಕ ವಿವಾಹ ಮಹೋತ್ಸವ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಈ ವೇಳೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಶಿವಾಚಾರ್ಯ ಸ್ವಾಮೀಜಿ, ನೀಲಕಂಠಯ್ಯ ತಾತನವರು, ಕಲ್ಲಿನಾಥ ಶಾಸ್ತ್ರಿ, ಬಸವಲಿಂಗೇಶ್ವರ ಶಿವಾಚಾರ್ಯರು, ಬಾಷುಸಾಬ್‌ ಜಿನ್ನದ, ದೊಡ್ಡಬಸವನಗೌಡ ಪಾಟೀಲ ಬಯ್ಯಾಪುರ ಸೇರಿದಂತೆ ಸಹಸ್ರಾರು ಜನರು ಭಾಗವಹಿಸಿದ್ದರು. ಶಿವಾನಂದ ಹಿರೇಮಠ ನಿರ್ವಹಿಸಿ ವಂದಿಸಿದರು. ಹೂವಿನಹಡಗಲಿ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಒಟ್ಟು 19 ನೂತನ ಜೋಡಿಗಳು ನವಜೀವನಕ್ಕೆ ಕಾಲಿಟ್ಟರು.

Share this article