ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬೃಹನ್ಮಠದ ಆವರಣದಲ್ಲಿನ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಲಾಗಿದ್ದ 34ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀ ಮಠದೊಂದಿಗೆ ಸಾರ್ವಜನಿಕರು ಇಂತಹ ಜನಪರ ಕಾರ್ಯಗಳಲ್ಲಿ ಪಾಲ್ಗೊಂಡು ಸರಳ ಪದ್ಧತಿಯಡಿ ದಾಂಪತ್ಯಕ್ಕೆ ಅಡಿ ಇಡುವುದರ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಐತಿಹಾಸಿಕ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಹಿಂದಿನ ಪೀಠಾಧಿಪತಿಗಳೆಲ್ಲರೂ ಸಹ ನಿರ್ಮೋಹ, ನಿರಹಂಕಾರ, ನಿಸ್ವಾರ್ಥತೆಯ ಮಹಾಸದ್ಗುಣ ಹೊಂದಿದವರು. ಸರಳತೆ, ಸಮಾನತೆ ಎಂಬ ಮಹಾತತ್ವದ ಹೊತ್ತು ನಡೆದು ಸಮಾಜಕ್ಕೆ ತಮ್ಮದೇ ಆದರ್ಶ ಪಥ ಬಿಟ್ಟು ಹೋಗಿದ್ದಾರೆ. ಅಂತಹ ದಾರಿ ಈಗಲೂ ಸಮಾಜಕ್ಕೆ ತೆರೆದುಕೊಂಡಿರುವುದಕ್ಕೆ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವವೇ ಸಾಕ್ಷಿ ಎಂದರು.ಸರಳ ಮತ್ತು ಸರ್ವ ಸಮಾನತೆಯ ತತ್ವದಡಿಯಲ್ಲಿ ಸಾಗುತ್ತಿರುವ ಈ ಕಾರ್ಯಕ್ರಮ ಜಾತಿ, ಮತ ಭೇದವಿಲ್ಲದ ಎಲ್ಲರೂ ಒಂದು ವೇದಿಕೆ ಅಡಿಯಲ್ಲಿ ತಮ್ಮ ಬಾಳ ಬದುಕಿಗೆ ಮುಂದಡಿ ಇಡುತ್ತಿರುವುದು ಸಂತಸದ ಸಂಗತಿ. ದಂಪತಿಗಳ ಬದುಕಿನಲ್ಲಿ ಸಾಮರಸ್ಯವೇ ಪ್ರಧಾನವಾಗಬೇಕು ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ, ಜೀವನ ಸುಖವಾಗಿ ನಡೆಯಲು ಎಲ್ಲರಲ್ಲೂ ನಂಬಿಕೆ ಅಗತ್ಯ. ಅದು ಇರದೇ ಹೋದರೆ ಸಂಸಾರ ವಿಘಟನೆಯ ಹಾದಿ ಹಿಡಿಯುತ್ತದೆ. ಕುಟುಂಬ ಅಂದರೆ ತೊಂದರೆ, ತಾಪತ್ರಯ, ಸಮಸ್ಯೆ ಇರುವುದು ಸಹಜ. ಅವುಗಳನ್ನು ತಾಳ್ಮೆ, ಸಹನೆಯಿಂದ ಪರಿಹರಿಸಿಕೊಂಡು ಸಾಗಬೇಕು. ಈ ವೇದಿಕೆಯಲ್ಲಿ ಬಡವರು ಮಾತ್ರ ಮದುವೆ ಮಾಡಿಕೊಂಡಿಲ್ಲ. ಸಿರಿವಂತರೂ ಇಲ್ಲಿ ತಮ್ಮ ಕಲ್ಯಾಣ ಮಹೋತ್ಸವ ನೆರವೇರಿಸಿಕೊಂಡು ಹೋಗಿರುವ ಉದಾಹರಣೆ ಇದೆ. ಅಂತಹ ಸಾಮಾಜಿಕ ಹೊಣೆಗಾರಿಕೆ ಶ್ರೀಮಠ ಒದಗಿಸಿದೆ ಎಂದರು.