ಸಾಮೂಹಿಕ ವಿವಾಹ ಎಂಬುದು ಸುಯೋಗದಂತೆ: ರೇಣು

KannadaprabhaNewsNetwork | Published : Dec 17, 2024 12:47 AM

ಸಾರಾಂಶ

ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಎಂದರೆ ಕೇವಲ ಬಡವರು ಮಾತ್ರ ಮದುವೆಯಾಗುವುದು ಎಂದು ಭಾವಿಸದೇ, ಇದೊಂದು ಸರಳ ಜೀವನ ಮತ್ತು ಹಣ ಉಳಿತಾಯಕ್ಕೆ ಉತ್ತಮ ಅ‍ವಕಾಶ ಮತ್ತು ಸುಯೋಗ ಎಂದು ಭಾವಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಕೂಲಂಬಿ ಗ್ರಾಮದಲ್ಲಿ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ಕಾರ್ತಿಕೋತ್ಸವ । ದಾಂಪತ್ಯಕ್ಕೆ ಕಾಲಿಟ್ಟ 22 ನವ ಜೋಡಿಗಳು- - - ಕನ್ನಡಪಭ್ರ ವಾರ್ತೆ ಹೊನ್ನಾಳಿ

ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಎಂದರೆ ಕೇವಲ ಬಡವರು ಮಾತ್ರ ಮದುವೆಯಾಗುವುದು ಎಂದು ಭಾವಿಸದೇ, ಇದೊಂದು ಸರಳ ಜೀವನ ಮತ್ತು ಹಣ ಉಳಿತಾಯಕ್ಕೆ ಉತ್ತಮ ಅ‍ವಕಾಶ ಮತ್ತು ಸುಯೋಗ ಎಂದು ಭಾವಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಕೂಲಂಬಿ ಗ್ರಾಮದಲ್ಲಿ ಸೋಮವಾರ ಗ್ರಾಮದ ಪವಾಡ ಪುರುಷ ಗುರು ಗದ್ದಿಗೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಂಸಾರಿಕ, ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡಬಾರದು. ಸತಿ- ಪತಿ ಇಬ್ಬರೂ ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ವಧು-ವರರಿಗೆ ಸಲಹೆ ನೀಡಿದರು.

ಕುಟುಂಬದಲ್ಲಿ ನ್ಯೂನತೆಗಳು ಬರುತ್ತವೆ. ಅವೆಲ್ಲವನ್ನೂ ಶಾಂತಚಿತ್ತದಿಂದ ಕುಳಿತು ಮಾತನಾಡಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ವೈಮನಸ್ಸಿಗೆ ಅವಕಾಶ ನೀಡಬಾರದು. ನೀವು ಇವತ್ತು ಸೊಸೆಯಾಗಿರಬಹುದು, ಮುಂದೊಂದು ದಿನ ಅತ್ತೆಯಾಗುತ್ತೀರಿ. ಆದ್ದರಿಂದ ಅತ್ತೆಯನ್ನು ತಾಯಿ ರೀತಿಯಲ್ಲಿ ನೋಡಿಕೊಳ್ಳಬೇಕು. ಆಗ ನಿಮ್ಮ ಅತ್ತೆಯೂ ನಿಮ್ಮನ್ನು ಸೊಸೆ ಎಂದು ನೋಡದೇ ಮಗಳೆಂದು ನೋಡುತ್ತಾರೆ. ಆಗ ಕುಟುಂಬದಲ್ಲಿ ಸಂತೃಪ್ತಿ ನೆಲೆಸಬಲ್ಲದು ಎಂದರು.

ಗುರು ಗದ್ದಿಗೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಪ್ರತಿವರ್ಷ ಗದ್ದಿಗೇಶ್ವರ ಕಾರ್ತಿಕೋತ್ಸವ ಜೊತೆಗೆ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಧಾರ್ಮಿಕ ಸಮಾರಂಭ ಜೊತೆಯಲ್ಲಿಯೇ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಜಾತ್ಯತೀತ, ವರ್ಗಬೇಧವಿಲ್ಲದೇ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾದರೆ ಜನರ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ಸುರೇಂದ್ರಗೌಡ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಮಧ್ಯಮ ವರ್ಗದವರು ಮಕ್ಕಳ ಮದುವೆ ಮಾಡುವುದೇ ಕಷ್ಟವಾಗಿದೆ. ಬಡವ ಮದುವೆ ಮಾಡಬೇಕಾದರೆ ಕನಿಷ್ಠ ₹10 ರಿಂದ ₹15 ಲಕ್ಷ ಬೇಕು. ಆದ್ದರಿಂದ ಸರಳ ಸಾಮೂಹಿಕ ವಿವಾಹ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಲ್ಲದು ಎಂದರು.

ಸಮಾರಂಭದಲ್ಲಿ 22 ಜೋಡಿಗಳು ಸಪ್ತಪದಿ ತುಳಿದರು. ಕಾರ್ತಿಕೋತ್ಸವ ಹಾಗೂ ಸರಳ ವಿವಾಹಕ್ಕೆ ಆಗಮಿಸಿದವರಿಗೆ ಅನ್ನ ಸಂತರ್ಪಣೆ ನಡೆಯಿತು. ದೇವಸ್ಥಾನ ಸಮಿತಿಯ ಬಸವಲಿಂಗಪ್ಪ, ಹೇಮಂತರಾಜ್, ಬಸವರಾಜಪ್ಪ, ರೇವಣಸಿದ್ದಪ್ಪ, ಟಿ.ಎಸ್. ಬಸವರಾಜು, ಗ್ರಾಪಂ ಅಧ್ಯಕ್ಷ ಕೆ.ಬಿ.ಸಿದ್ದನಗೌಡ, ಉಪಾಧ್ಯಕ್ಷ ಟಿ.ಎಸ್. ಬಸವರಾಜಪ್ಪ, ಪುನೀತ್‌ಕುಮಾರ್, ಆಂಜನೆಯ ಎಚ್.ಎನ್. ಲೋಕೇಶ್‌ ಪಾಟೀಲ್ ಎಂ.ಜಿ. ನಾಗರಾಜು, ಲಿಂಗರಾಜು ಇತರರು ಇದ್ದರು.

- - -

ಕೋಟ್‌

ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆ ಆದವರೇ ನಿಜವಾದ ಪುಣ್ಯವಂತರು. ಆರ್ಥಿಕವಾಗಿ ಹಿಂದುಳಿದವರು ಇಂತಹ ಸರಳ ಕಾರ್ಯಕ್ರಮದಲ್ಲಿ ಮಕ್ಕಳ ಮದುವೆ ನೆರವೇರಿಸಿದಲ್ಲಿ ಆರ್ಥಿಕ ಹೊರೆ ಬಾಧಿಸುವುದಿಲ್ಲ. ಸಾಮೂಹಿಕ ವಿವಾಹವಾದರೂ ಆದರೂ ಮದುವೆಯೇ, ಕೋಟಿ ಕೋಟಿ ಖರ್ಚು ಮಾಡಿ ನೆರವೇರಿಸಿದರೂ ಅದು ಮದುವೆಯೇ. ಆದ್ದರಿಂದ ಸಾಲ ಮಾಡಿ, ಅದ್ಧೂರಿ ಮದುವೆ ಮಾಡುವ ಬದಲು ಸರಳ ಕಾರ್ಯಕ್ರಮದಲ್ಲಿ ಮದುವೆಯಾಗುವುದು ಉತ್ತಮ

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

- - - -16ಎಚ್.ಎಲ್.ಐ1.ಜೆಪಿಜಿ:

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಗುರು ಗದ್ದಿಗೇಶ್ವರ ಕಮಿಟಿಯಿಂದ ಸನ್ಮಾನಿಸಲಾಯಿತು. -16ಎಚ್.ಎಲ್.ಐ1ಎ:

ಕೂಲಂಬಿ ಗ್ರಾಮದಲ್ಲಿ ಸೋಮವಾರ ಗುರು ಗದ್ದಿಗೇಶ್ವರ ಕಾರ್ತಿಕೋತ್ಸವ ಅಂಗವಾಗಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ 22 ಜೋಡಿಗಳು ಸಪ್ತಪದಿ ತುಳಿದರು.

Share this article