ಡಂಬಳ: ಬಡವರಿಗೆ, ನಿರ್ಗತಿಕರಿಗೆ, ಅಸಹಾಯಕರಿಗೆ ಸಾಮೂಹಿಕ ವಿವಾಹ ವರದಾನ ಎಂದು ಸುಕ್ಷೇತ್ರ ಜಂತ್ಲಿ-ಶಿರೂರ, ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು ಹೇಳಿದರು.
ಹೋಬಳಿಯ ಸುಕ್ಷೇತ್ರ ಜಂತಲಿ -ಶಿರೂರ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ, ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ, ಕುಂಭೋತ್ಸವ, 1008 ದೀಪೋತ್ಸವ, 16 ಜೋಡಿ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಂಸಾರದಲ್ಲಿ ಸುಖ-ದುಃಖ ಇದ್ದೇ ಇರುತ್ತದೆ. ಎರಡನ್ನೂ ಸರಿ ಸಮಾನವಾಗಿ ಅಳವಡಿಸಿಕೊಂಡು ಕಾಯಕನಿಷ್ಠರಾಗಿ ಶರಣರ ಮಾರ್ಗದಲ್ಲಿ ನಡೆದು ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಚಿಕೇನಕೊಪ್ಪದ ಚನ್ನವೀರ ಶರಣರು ತಮ್ಮ ದಿವ್ಯ ನಡೆ-ನುಡಿಗಳ ಮೂಲಕ ತ್ರಿಕಾಲಜ್ಞಾನ, ಕಠೋರ ತಪಸ್ಸುಗಳಿಂದ ಜನಸಾಮಾನ್ಯರಿಗೆ ಬಾಳಿನ ಸುಲಭ ದಾರಿ ತೋರಿದವರು. ಅವರ ಕಲ್ಪನೆಗಳು, ಅನುಷ್ಠಾನಗಳು, ಜಪ-ತಪಗಳು ವಿಶಿಷ್ಟವಾಗಿ ಕಂಡರೂ ಜನಸಾಮಾನ್ಯರ ಕೈಗೆ ಎಟುಕುವಂತೆ ಮೂಡಿ ಬಂದಿ ಎಂದು ಹೇಳಿದರು.
ಹೊಸಹಳ್ಳಿಯ ಬೂದೀಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಾನವ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿರುವ ಚಿಕ್ಕೇನಕೊಪ್ಪದ ಚನ್ನವೀರಶರಣರು ಶರಣ ಪರಂಪರೆಯ ಶ್ರೇಷ್ಠ, ಅವಿಸ್ಮರಣೀಯ ಶರಣರು. ನಂದಾದೀಪ ಸ್ವರೂಪರಾಗಿದ್ದಾರೆ ಎಂದು ಹೇಳಿದರು.ಅನ್ನಪೂರ್ಣಮ್ಮ ಹನಮಂತಪ್ಪ ಹಾಸಗಲ್ಲ, ನಿರ್ಮಲಾ ಬಸವರಾಜ ಚಿಗರಿ ಅವರಿಂದ ಶಿವಶಾಂತವೀರ ಮಹಾಸ್ವಾಮಿಗಳ ತುಲಾಭಾರ ಜರುಗಿತು. ಒಂದು ತಿಂಗಳ ಜರುಗಿದ ಪುರಾಣ ಮಹಾಮಂಗಲ ನುಡಿಯನ್ನು ಶಿವಲಿಂಗಯ್ಯ ಹಿರೇಮಠ ಶಾಸ್ತ್ರೀಗಳು ನಡೆಸಿಕೊಟ್ಟರು. 16 ಜೋಡಿಗಳ ಸಾಮೂಹಿಕ ವಿವಾಹ, 20ಸಾವಿರ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಹಿರಿಯರು, ಯುವಕರು, ಅಪಾರ ಪ್ರಮಾಣದಲ್ಲಿ ನೆರೆದಿದ್ದ ಮಹಿಳೆಯರು, ಸುತ್ಯಮುತ್ತಲಿನ, ವಿವಿಧ ಜಿಲ್ಲೆಗಳಿಂದ ಭಕ್ತರು ಇದ್ದರು.