ಸಾಮೂಹಿಕ ವಿವಾಹ ಭಾಗ್ಯವಂತರ ಮದುವೆ: ಕಾಶೀ ಶ್ರೀಗಳು

KannadaprabhaNewsNetwork | Published : Dec 12, 2024 12:33 AM

ಸಾರಾಂಶ

ಇಂಡಿ ಶ್ರೀ ಶಾಂತೇಶ್ವರ ದೇವರ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕಾಶೀ ಜಗದ್ಗುರುಗಳು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ. ಅದೊಂದು ಭಾಗ್ಯವಂತರ ಮದುವೆ. ವಿವಾಹ ಪವಿತ್ರವಾದ ಸಂಸ್ಕಾರ. ಭವಿಷ್ಯದ ಉದ್ಧಾರಕ್ಕಾಗಿ ಮನುಷ್ಯ ಸಮಾಜದಲ್ಲಿ ರೂಪಿಸಿಕೊಂಡು ಬಂದಿರುವ ವಿವಾಹ ಸಂಸ್ಕಾರವಾಗಿದೆ. ಸಾಮೂಹಿಕ ವಿವಾಹದಲ್ಲಿ ಮಹಾಸ್ವಾಮೀಜಿ ಅವರ ಸಮ್ಮುಖದಲ್ಲಿ ನವ ಜೀವನಕ್ಕೆ ಕಾಲಿಡುತ್ತಿರುವ ನವಜೋಡಿಗಳು ಭಾಗ್ಯವಂತರು ಎಂದು ಕಾಶಿಪೀಠದ ಸಿಂಹಾಸನದ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

ನಗರದ ಶ್ರೀ ಶಾಂತೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸರಳ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭಕ್ತಿ, ಗುರುಭಕ್ತಿ, ದೈವ ಭಕ್ತಿಗೆ ಪ್ರಸಿದ್ಧವಾದದ್ದು ಇಂಡಿ ತಾಲೂಕು. ಪಂಚಪೀಠಾಧೀಶರನ್ನು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿದ ನಗರ ಇಂಡಿ. ಶಾಂತೇಶ್ವರ ಜಾತ್ರೆ ಕೇವಲ ಧಾರ್ಮಿಕ ಸಮಾರಂಭ ಆಗಬಾರದು ಎಂಬ ಉದ್ದೇಶದಿಂದ ಸರ್ವಧರ್ಮದ ಸಮಭಾವದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡು ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಕೆಲವರು ತಮ್ಮ ಸಮುದಾಯದ ಸಾಮೂಹಿಕ ವಿವಾಹ ಸಮಾರಂಭಗಳನ್ನು ಮಾಡುತ್ತಾರೆ. ವೀರಶೈವ ಧರ್ಮದಲ್ಲಿ ಎಲ್ಲರೂ ನನ್ನವರು ಎಂದು ತಿಳಿದುಕೊಳ್ಳುವುದಾಗಿದೆ. ವೀರಶೈವ ವೈಶಿಷ್ಟ್ಯ ಎಂದರೆ, ಕೇವಲ ನಮ್ಮ ಸಮಾಜ ಎಂದು ಇಟ್ಟುಕೊಳ್ಳದೆ, ಎಲ್ಲರೂ ನಮ್ಮವರೇ ಎಂದು ತಿಳಿಯುವುದು. ಜಗತ್ತಿನ ಎಲ್ಲ ಜೀವಿಗಳು ಸುಖವಾಗಿರಬೇಕು ಎಂದು ಬಯಸಿದ್ದು ಸನಾತನ ವೀರಶೈವ ಧರ್ಮ ಎಂದು ಹೇಳಿದರು.

ಧರ್ಮದಿಂದಲೇ ಮುಕ್ತಿ ಎಂಬ ಘೋಷಣೆಯೊಂದಿಗೆ ವೀರಶೈವ ಧರ್ಮ ಎಲ್ಲರನ್ನು ಪ್ರೀತಿಸುವಂತೆ ಮಾಡುತ್ತದೆ. ಶ್ರೀ ಶಾಂತೇಶ್ವರ ದೇವಸ್ಥಾನದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಅವರು ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬಹುದಿತ್ತು. ಆದರೆ ಅವರು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿರುವ ಎಲ್ಲ ವಧುವರರು ನನ್ನ ಮಕ್ಕಳಂತೆ ತಿಳಿದು ಅವರು ತಮ್ಮ ಮಗಳ ಮದುವೆಯನ್ನು ಸಾಮೂಹಿಕ ವಿವಾಹದಲ್ಲಿ ನಡೆಸಿಕೊಟ್ಟಿದ್ದು ಮಾದರಿ ಕಾರ್ಯ ಎಂದು ಶ್ಲಾಘಿಸಿದರು.

ಹಿಂದೂ ಸಂಸ್ಕೃತಿಯಲ್ಲಿ ಅಗ್ನಿಸಾಕ್ಷಿಯಾಗಿ ವಿವಾಹ ಮಾಡುವ ಪದ್ಧತಿ ಇದೆ. ಆದರೆ ಸನಾತನ ವೀರಶೈವ ಧರ್ಮದಲ್ಲಿ ಕೇವಲ ಒಂದು ಅಗ್ನಿಸಾಕ್ಷಿ ಬೇಡ. ಪಂಚಭೂತಗಳ ಅಧಿಪತಿಗಳಾಗಿರುವ ಪಂಚಾಚಾರ್ಯರ ಸಾಕ್ಷಿಯಾಗಿ ವಿವಾಹ ಮಾಡುವುದು ಶ್ರೇಷ್ಠ ಎಂದು ತಿಳಿದುಕೊಂಡು ಬಂದಿರುವ ಪರಂಪರೆಯಾಗಿದೆ ಎಂದು ವಿವರಿಸಿದರು.

ಶ್ರೀ ಶಾಂತೇಶ್ವರ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, 2000ನೇ ಸಾಲಿನಲ್ಲಿ ವಿಜೃಂಭಣೆಯಿಂದ ಶ್ರೀ ಶಾಂತೇಶ್ವರ ಜಾತ್ರೆ ಮಾಡಿದಂತೆ ಮುಂದಿನ ವರ್ಷದ ಜಾತ್ರೆಯನ್ನು ಅದೇ ಮಾದರಿಯಲ್ಲಿ ವಿಜೃಂಭಣೆಯಿಂದ ಜಾತ್ರೆ ಮಾಡಲಾಗುತ್ತದೆ. ಮುಂದಿನ ವರ್ಷದ ಜಾತ್ರೆಯೊಳಗಾಗಿ ಶ್ರೀ ಶಾಂತೇಶ್ವರ ದೇವರಿಗೆ ಬಂಗಾರದ ಕಿರೀಟ ತಯಾರಿಸಿ ಜಾತ್ರೆ ದಿನದಂದು ಬಂಗಾರದ ಕಿರೀಟ ಧಾರಣೆ ಮಾಡಲಾಗುತ್ತದೆ ಎಂದರು.

ಶಿರಶ್ಯಾಡದ ಅಭಿನವ ಮುರಘೇಂದ್ರ ಶಿವಾಚಾರ್ಯರು, ಗೊಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಅಭಿನವ ರಾಚೋಟೇಶ್ವರ ಶ್ರೀಗಳು, ಹೊಟಗಿ ಮಠದ ಶ್ರೀಗಳು ಮೊದಲಾದವರು ಆಶೀರ್ವಚನ ನೀಡಿದರು.

ಈ ವೇಳೆ ವಿರೂಪಾಕ್ಷಯ್ಯ ಹಿರೇಮಠ, ಜಾವೀದ ಮೋಮಿನ, ಅನೀಲಗೌಡ ಬಿರಾದಾರ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಸುಧೀರ ಕರಕಟ್ಟಿ, ಉಮೇಶ ದೇಗಿನಾಳ, ಶ್ರೀಕಾಂತ ಕುಡಿಗನೂರ, ಬಿ.ಕೆ.ಮಸಳಿ, ಟ್ರಸ್ಟ್‌ ಕಮಿಟಿ ಉಪಾಧ್ಯಕ್ಷ ಹೊಟಗಿ, ಶಾಂತೇಶ್ವರ ಬ್ಯಾಂಕಿನ ವ್ಯವಸ್ಥಾಪಕ ಶಂಕರಗೌಡ ಪಾಟೀಲ, ಬತ್ತುಸಾಹುಕಾರ ಹಾವಳಗಿ, ರಮೇಶ ಗುತ್ತೆದಾರ, ಚನ್ನುಗೌಡ ಪಾಟೀಲ, ಎಂ.ಆರ್‌.ಪಾಟೀಲ, ಭೀಮರಾಯಗೌಡ ಮದರಖಂಡಿ, ವಿಜು ಮಾನೆ, ಶಂಕರಗೌಡ ಬಿರಾದಾರ ಪಾಲ್ಗೊಂಡಿದ್ದರು. ಈ ವೇಳೆ 12 ಜನ ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು. ಧನರಾಜ ಮುಜಗೊಂಡ, ಬಸವರಾಜ ಗೊರನಾಳ ನಿರೂಪಿಸಿದರು.

Share this article