ಸಮೃದ್ಧಿ ಸಿರಿ ಪ್ರೀಷಿಯಸ್ ಮೆಟಲ್‌ನಿಂದ ಭಾರಿ ಹಣ ವಂಚನೆ

KannadaprabhaNewsNetwork |  
Published : Oct 09, 2026, 01:45 AM IST
8ಎಚ್ಎಸ್ಎನ್4 : ಮುಚ್ಚಿರುವ ಸಮೃದ್ಧಿ ಸಿರಿ ಪ್ರೀಷಿಯಸ್ ಮೆಟಲ್ ಪ್ರೈ.ಲಿ. ಸಂಸ್ಥೆಯ ಮುಂದೆ ಕೆಆರ್‌ಎಸ್‌ ಕಾರ್ಯಕರ್ತರೊಂದಿಗೆ ವಂಚನೆಗೊಳಗಾದವರ ಮೌನ ಪ್ರತಿಭಟನೆ.  ಒಳ ಚಿತ್ರದಲ್ಲಿ ಸಂಸ್ಥೆಯ ಮಾಲೀಕನೆಂದು ಹೇಳಲಾದ ಶ್ರೀನಿವಾಸ್‌ ಚಿತ್ರ. | Kannada Prabha

ಸಾರಾಂಶ

ಕೆಆರ್‌ಎಸ್ ಪಕ್ಷದ ಕಾನೂನು ಸಲಹೆಗಾರ ವಕೀಲ ಮಂಜುನಾಥ್ ಮಾತನಾಡಿ, ಚಿನ್ನದ ವ್ಯವಹಾರದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಹಾಗೂ ಚಿನ್ನ ಪಡೆದುಕೊಂಡ ಬಳಿಕ ಸಂಸ್ಥೆಯ ಕಚೇರಿ ಮುಚ್ಚಲಾಗಿದೆ. ಸಂಬಂಧಪಟ್ಟವರು ಸಂಪರ್ಕಕ್ಕೆ ಸಿಗದಂತಾಗಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ವಂಚನೆಗೊಳಗಾಗಿರುವ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಉತ್ತರ ಬಡಾವಣೆಯಲ್ಲಿ ಚಿನ್ನ ಖರೀದಿ, ಮಾರಾಟ ಹಾಗೂ ವಿನಿಮಯದ ಮೂಲಕ ವ್ಯವಹಾರ ನಡೆಸುತ್ತಿದ್ದ ಸಮೃದ್ಧಿ ಸಿರಿ ಪ್ರೀಷಿಯಸ್ ಮೆಟಲ್ ಪ್ರೈ.ಲಿ. ಸಂಸ್ಥೆಯ ವಿರುದ್ಧ ಸಾರ್ವಜನಿಕರಿಂದ ಕೋಟ್ಯಂತರ ರುಪಾಯಿ ಹಾಗೂ ಚಿನ್ನ ಪಡೆದು ವಂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣದ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಸಂತ್ರಸ್ತರ ಜೊತೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಆಗ್ರಹಿಸಿದೆ.

ಸಂಸ್ಥೆಯ ಕಚೇರಿ ಮುಚ್ಚಿರುವ ಹಿನ್ನೆಲೆಯಲ್ಲಿ ಕಚೇರಿ ಎದುರು ವಂಚನೆಗೊಳಗಾಗಿರುವುದಾಗಿ ಹೇಳಿಕೊಂಡಿರುವ ಸಂತ್ರಸ್ತರೊಂದಿಗೆ ಕೆಆರ್‌ಎಸ್ ಮುಖಂಡರು ಮೌನ ಪ್ರತಿಭಟನೆ ನಡೆಸಿ, ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕೆಆರ್‌ಎಸ್ ಪಕ್ಷದ ಕಾನೂನು ಸಲಹೆಗಾರ ವಕೀಲ ಮಂಜುನಾಥ್ ಮಾತನಾಡಿ, ಚಿನ್ನದ ವ್ಯವಹಾರದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಹಾಗೂ ಚಿನ್ನ ಪಡೆದುಕೊಂಡ ಬಳಿಕ ಸಂಸ್ಥೆಯ ಕಚೇರಿ ಮುಚ್ಚಲಾಗಿದೆ. ಸಂಬಂಧಪಟ್ಟವರು ಸಂಪರ್ಕಕ್ಕೆ ಸಿಗದಂತಾಗಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ವಂಚನೆಗೊಳಗಾಗಿರುವ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.೧೧ ಲಕ್ಷ ಕಳೆದುಕೊಂಡಿರುವುದಾಗಿ ನವೀನ್ ಆರೋಪಹಣ ಕಳೆದುಕೊಂಡ ಸಂತ್ರಸ್ತ ನವೀನ್ ಮಾತನಾಡಿ, ಸಂಸ್ಥೆಯ ಮಾಲೀಕರೆಂದು ಹೇಳಲಾಗುತ್ತಿರುವ ಎಚ್.ಕೆ. ಶ್ರೀನಿವಾಸ್ ಅವರೊಂದಿಗೆ ಕಳೆದ ಸುಮಾರು ಐದು ವರ್ಷಗಳಿಂದ ಗ್ರಾಹಕರಾಗಿ ವ್ಯವಹಾರ ನಡೆಸುತ್ತಿದ್ದೆ. ಚಿನ್ನ ಇಡುವುದು ಸೇರಿದಂತೆ ಹಲವು ವ್ಯವಹಾರಗಳ ಮೂಲಕ ಪರಿಚಯವಾಗಿತ್ತು. ಕಳೆದ ಜೂನ್ ೧೦ರಂದು ಶ್ರೀನಿವಾಸ್ ಅವರು ಕರೆ ಮಾಡಿ, ಸಂಬಂಧಿಕರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ಚಿನ್ನವನ್ನು ಮಾರಾಟ ಮಾಡಿಸಿ ಹಣ ವಾಪಸ್ ನೀಡಬೇಕಾಗಿದೆ ಎಂದು ಹೇಳಿ ಹಣದ ನೆರವು ಕೇಳಿದ್ದರು. ತುರ್ತು ಅವಶ್ಯಕತೆ ಇದೆ ಎಂದು ನಂಬಿಸಿ ಹಣವನ್ನು ಕೇಳಿದ ಹಿನ್ನೆಲೆಯಲ್ಲಿ ೧೧ ಲಕ್ಷ ನಗದು ನೀಡಿದ್ದೆ. ಈ ಹಣವನ್ನು ನನ್ನ ಮಗಳ ಮದುವೆ ಹಾಗೂ ತಂದೆಯ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಕೂಡಿಟ್ಟಿದ್ದೆ. ಹಣ ನೀಡಿದ ಬಳಿಕ ಸಂಸ್ಥೆಯ ಕಚೇರಿ ಮುಚ್ಚಿರುವುದು ಗಮನಕ್ಕೆ ಬಂದಿದ್ದು, ನಂತರ ಶ್ರೀನಿವಾಸ್ ಅವರು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಈ ಕುರಿತು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದರೂ ಇದುವರೆಗೆ ಸೂಕ್ತ ನ್ಯಾಯ ದೊರೆತಿಲ್ಲ. ನನ್ನ ಕುಟುಂಬದ ಅಗತ್ಯಕ್ಕಾಗಿ ಕೂಡಿಟ್ಟಿದ್ದ ಹಣ ಕಳೆದುಕೊಂಡಿರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣವನ್ನು ಪರಿಶೀಲಿಸಿ ನನ್ನ ೧೧ ಲಕ್ಷ ಹಣವನ್ನು ವಾಪಸ್ ಕೊಡಿಸುವಂತೆ ನವೀನ್ ಮನವಿ ಮಾಡಿದರು. ಆರೋಪಿತ ಸಂಸ್ಥೆಯ ಮೂಲಕ ತಮ್ಮಂತೆಯೇ ಇನ್ನೂ ಹಲವರು ಹಣ ಹಾಗೂ ಚಿನ್ನ ಕಳೆದುಕೊಂಡಿರುವ ಸಾಧ್ಯತೆಯಿದ್ದು, ಕೋಟ್ಯಂತರ ರುಪಾಯಿ ಮೊತ್ತದ ವ್ಯವಹಾರ ನಡೆದಿರುವ ಮಾಹಿತಿ ಇದೆ ಎಂದು ಸಂತ್ರಸ್ತರು ಆರೋಪಿಸಿದರು. ಆದರೆ ವಂಚನೆಗೊಳಗಾದ ಕೆಲವರು ಪೊಲೀಸ್ ಠಾಣೆ ಅಥವಾ ಮಾಧ್ಯಮಗಳ ಮುಂದೆ ಬಂದು ದೂರು ನೀಡಲು ಹಿಂಜರಿಯುತ್ತಿದ್ದಾರೆ. ವಂಚನೆಗೊಳಗಾಗಿರುವವರು ಧೈರ್ಯವಾಗಿ ಮುಂದೆ ಬಂದು ತಮ್ಮ ಬಳಿ ಇರುವ ದಾಖಲೆಗಳು, ಹಣ ಪಾವತಿ ವಿವರಗಳು ಹಾಗೂ ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಪೊಲೀಸರಿಗೆ ದೂರು ನೀಡಬೇಕು. ಎಲ್ಲರೂ ದೂರು ನೀಡಿದರೆ ಪ್ರಕರಣದ ಸಂಪೂರ್ಣ ಸ್ವರೂಪ ತನಿಖೆಯಿಂದ ಹೊರಬರಲಿದೆ ಎಂದು ಹೇಳಿದರು.‘ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಿ’ಕೆಆರ್‌ಎಸ್ ಮುಖಂಡ ವಿ. ರಮೇಶ್ ಮಾತನಾಡಿ, ಸಂತ್ರಸ್ತರು ಪೊಲೀಸ್ ಠಾಣೆಗಳಿಗೆ ತೆರಳಿ ದೂರು ನೀಡುತ್ತಿದ್ದರೂ ಎಫ್‌ಐಆರ್‌ ದಾಖಲಿಸದೆ ಎನ್‌ಸಿಆರ್ ದಾಖಲಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಂತಹ ಗಂಭೀರ ಆರೋಪಗಳಿರುವ ಪ್ರಕರಣದಲ್ಲಿ ದೂರುಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅಪರಾಧದ ಅಂಶಗಳು ಕಂಡುಬಂದಲ್ಲಿ ಕಾನೂನು ಪ್ರಕಾರ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕರಿಂದ ಹಣ ಹಾಗೂ ಚಿನ್ನ ಪಡೆದು ವಂಚನೆ ಮಾಡಲಾಗಿದೆ ಎಂಬ ಆರೋಪವಿರುವಾಗ ಸಂತ್ರಸ್ತರಿಗೆ ಸೂಕ್ತ ಸ್ಪಂದನೆ ನೀಡುವುದು ಪೊಲೀಸರ ಕರ್ತವ್ಯ. ದೂರುದಾರರನ್ನು ಹೆದರಿಸುವ ಅಥವಾ ಒತ್ತಡಕ್ಕೆ ಒಳಪಡಿಸುವ ಬದಲು ಅವರ ಅಹವಾಲು ಆಲಿಸಿ, ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನವೀನ್, ಕಾರ್ತಿಕ್, ದರ್ಶನ್ ಸೇರಿದಂತೆ ಹಲವು ಮಂದಿ ವಂಚನೆಗೊಳಗಾಗಿರುವುದಾಗಿ ಹೇಳಿಕೊಂಡು ದೂರು ನೀಡುತ್ತಿದ್ದಾರೆ. ಅವರ ದೂರುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ಸಂಸ್ಥೆಯ ಹಣಕಾಸು ವ್ಯವಹಾರಗಳು, ಗ್ರಾಹಕರಿಂದ ಪಡೆದ ಹಣ, ಚಿನ್ನದ ವಹಿವಾಟು ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ತನಿಖೆಗೊಳಪಡಿಸಬೇಕು ಎಂದು ರಮೇಶ್ ಒತ್ತಾಯಿಸಿದರು. ಪೊಲೀಸ್ ಇಲಾಖೆ ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಪ್ರಕರಣದಲ್ಲಿ ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಕೆಆರ್‌ಎಸ್ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಕೆಆರ್‌ಎಸ್ ಮುಖಂಡರಾದ ಮಂಜೇಗೌಡ, ಪ್ರಧಾನ ಕಾರ್ಯದರ್ಶಿ ಮಧು, ಪಕ್ಷದ ಕಾರ್ಯಕರ್ತರು ಹಾಗೂ ವಂಚನೆಗೊಳಗಾಗಿರುವುದಾಗಿ ಹೇಳಿಕೊಂಡಿರುವ ಸಂತ್ರಸ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರೂಣಪತ್ತೆ ನಡೆಸುವ ಸ್ಕ್ಯಾನಿಂಗ್‌ ಸೆಂಟರ್‌ಗಳ ವಿರುದ್ಧ ಕ್ರಮ ಜರುಗಿಸಿ
ನೆಲ-ಜಲ ರಕ್ಷಣೆ, ಒತ್ತುವರಿ ತೆರವು, ಪಹಣಿ ಇಂಡೀಕರಣ ತ್ವರಿತಗೊಳಿಸಿ