ಅಕ್ಕಿಪೇಟೆ ಮಾರ್ಕೆಟಲ್ಲಿ ಬೆಂಕಿ: 40 ಅಂಗಡಿ ಭಸ್ಮ

KannadaprabhaNewsNetwork |  
Published : Nov 23, 2026, 04:00 AM IST
ಕ್ಯಾಪ್ಷನ22ಕೆಡಿವಿಜಿ31, 32 ಹೊಸಪೇಟೆ ತಾ. ಮರಿಯಮ್ಮನಹಳ್ಳಿಯಲ್ಲಿ ನಾಣಿಕೇರಿ ಯುವ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ  ನಾಣಿಕೇರಿ ವಸಂತ ವೈಭವ ಕಾರ್ಯಕ್ರಮದಲ್ಲಿ  ಸಚಿವ ಕೆ.ಎಸ್.ಬಸವಂತಪ್ಪ ಭಾಗವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ನಗರದ ಅಕ್ಕಿಪೇಟೆ ಮಾರ್ಕೆಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 40 ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಾಲಿಕೆಯಿಂದ ನಿರ್ಮಿಸಲಾಗಿದ್ದ ಸುಮಾರು 100 ವರ್ಷಗಳ ಹಳೆಯದಾದ ಹಣ್ಣು-ತರಕಾರಿ ಮಾರುಕಟ್ಟೆಯಲ್ಲಿ ಬೆಳಗ್ಗೆ 11:30ರ ಸುಮಾರಿಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಅಕ್ಕಿಪೇಟೆ ಮಾರ್ಕೆಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 40 ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಾಲಿಕೆಯಿಂದ ನಿರ್ಮಿಸಲಾಗಿದ್ದ ಸುಮಾರು 100 ವರ್ಷಗಳ ಹಳೆಯದಾದ ಹಣ್ಣು-ತರಕಾರಿ ಮಾರುಕಟ್ಟೆಯಲ್ಲಿ ಬೆಳಗ್ಗೆ 11:30ರ ಸುಮಾರಿಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದುರಸ್ತಿ ಹಂತದಲ್ಲಿದ್ದ ಮರದ ಕಟ್ಟಡವಾಗಿದ್ದ ಮಾರ್ಕೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಒಳಗಿದ್ದ 4-5 ಗ್ಯಾಸ್ ಸಿಲಿಂಡರ್‌ಗಳು ಹಾಗೂ ಪಟಾಕಿ ಸಾಮಗ್ರಿಗಳು ಸ್ಫೋಟಗೊಂಡ ಪರಿಣಾಮ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಮನೆಗಳು ಮತ್ತು ಗೋಡೌನ್‌ಗಳಿಗೂ ವ್ಯಾಪಿಸಿತು.

5 ಗಂಟೆ ಕಾರ್ಯಾಚರಣೆ:

ವಿಷಯ ತಿಳಿದು 4 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿದ 25ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿ ಸುಮಾರು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಳಗ್ಗೆ 12 ಗಂಟೆಯ ಸುಮಾರಿಗೆ ಅಗ್ನಿ ಅವಘಡದ ಬಗ್ಗೆ ಮಾಹಿತಿ ಬಂದಿತು ಸಂಜೆ 5.30ರವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆಯುವೆ-ಮೋಹನ್‌:

ಈ ಬಗ್ಗೆ ಸಂಸದ ಪಿ.ಸಿ ಮೋಹನ್ ಪ್ರತಿಕ್ರಿಯಿಸಿ, ಇದು ಸುಮಾರು 80 ವರ್ಷಕ್ಕೂ ಹೆಚ್ಚು ಹಳೆಯದಾದ ಮಾರ್ಕೆಟ್. ತುಂಬಾ ಜನ ಇಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಕೆಲವರು ಇಲ್ಲಿಯೇ ಮನೆ ಮಾಡಿಕೊಂಡು ವಾಸವಿದ್ದಾರೆ. ಎಲ್ಲ ಅಂಗಡಿಗಳೂ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಆದರೇ ಯಾವುದೇ ಪ್ರಾಣಹಾನಿಯಾಗಿಲ್ಲ. ಅಕ್ಕಪಕ್ಕದ ಮನೆ ಹಾಗೂ ಕಟ್ಟಡಗಳಿಗೆ ಹಾನಿಯಾಗಿದೆ. ಹಾನಿಯ ಬಗ್ಗೆ ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದು ಪರಿಹಾರಕ್ಕೆ ಮನವಿ ಮಾಡುತ್ತೇನೆ. ಇಲ್ಲಿ ಹೊಸ ಮಾರ್ಕೆಟ್ ಕಟ್ಟಡ ನಿರ್ಮಾಣ ಆಗಬೇಕಿತ್ತು ಅದು ಸಹ ಆಗಿಲ್ಲ. ಸಿಲಿಂಡರ್‌ಗಳು ಸಹ ಸ್ಫೋಟವಾಗಿ ಬಹಳ ಹಾನಿಯಾಗಿದೆ ಎಂದು ತಿಳಿಸಿದರು.

ಯಾವುದೇ ಪ್ರಾಣಪಾಯ ಆಗಿಲ್ಲ-ದಿನೇಶ್‌:

ಶಾಸಕ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಸುಮಾರು 40 ಕುಟುಂಬಗಳು ಇಲ್ಲಿ ವಾಸವಿದ್ದಾವೆ. ಒಂದಷ್ಟು ಕಟ್ಟಿಗೆ, ಹಳೆ ವಸ್ತುಗಳನ್ನು ಇಲ್ಲಿ ಶೇಖರಣೆ ಮಾಡಲಾಗಿತ್ತು. ಹಳೆ ಮಾರ್ಕೆಟ್ ಕಟ್ಟಡ ಆಗಿರುವುದರಿಂದ ಶೇಖರಿಸಲಾಗಿತ್ತು. ಒಂದಷ್ಟು ಜನ ಇಲ್ಲಿನ ಕಟ್ಟಡವನ್ನು ಮನೆ ರೀತಿ ಮಾಡಿಕೊಂಡು ವಾಸ ಇದ್ದರು. ಅಂಗಡಿಗಳಲ್ಲಿ ವ್ಯಾಪಾರ ಸಹ ನಡಯುತ್ತಿತ್ತು. ಹೇಗೆ ಬೆಂಕಿ ಹೊತ್ತಿಕೊಂಡಿದೆ ಗೊತ್ತಿಲ್ಲ. ಪಟಾಕಿ ಕೂಡ ಇತ್ತು ಅಂತಾ ಹೇಳುತ್ತಿದ್ದಾರೆ ಆದರೆ ಅದರ ಬಗ್ಗೆ ಮಾಹಿತಿ ಇಲ್ಲ. ಒಳಗಡೆ ತುಂಬಾ ಹಾನಿಯಾಗಿದೆ. ವಾಸಿಸುತ್ತಿದ್ದವರ ವಸ್ತುಗಳೆಲ್ಲಾ ಸುಟ್ಟು ಹೋಗಿವೆ. ಜಿಬಿಎ ಜತೆ ಮಾತಾಡಿ ತಾತ್ಕಾಲಿಕ ವ್ಯವಸ್ಥೆ ಮಾಡಿಸಲಾಗುತ್ತದೆ. ಯಾರಿಗೂ ಯಾವುದೇ ಪ್ರಾಣಪಾಯ ಆಗಿಲ್ಲ. ಸಣ್ಣದಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದಂತೆ ಎಲ್ಲರೂ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.

--

ಬೆಂಕಿಯ ಜ್ವಾಲೆ ಪಕ್ಕದಲ್ಲಿರುವ ನಮ್ಮ ಕಟ್ಟಡಕ್ಕೂ ಆವರಿಸಿ ಅಪಾರ ಪ್ರಮಾಣದ ನಷ್ಟವಾಗಿದೆ. ಇದು ಮದ್ಯ ಮತ್ತು ಗಾಂಜಾ ಸೇವಿಸುವವರ ಅಡ್ಡೆಯಾಗಿತ್ತು. ಪಟಾಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಅದು ಸ್ಫೋಟವಾಗಿ ನಂತರ 4-5 ಸಿಲಿಂಡರ್‌ಗಳು ಸ್ಫೋಟವಾಗಿದೆ.

-ಸಂಧ್ಯಾ, ಸ್ಥಳೀಯ ನಿವಾಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐವರ ಪೈಕಿ ಓರ್ವ ಮಾತ್ರ ಅಕ್ರಮ ಬಾಂಗ್ಲಾದ ಪ್ರಜೆ: ಡಿಸಿಪಿ ಸ್ಪಷ್ಟನೆ
ಡಿಕೆ ಸೂಚನೆ ಬೆನ್ನಲ್ಲೇ 150 ರೌಡಿ ಮನೆ ಮೇಲೆ ದಾಳಿ