ಕೊಪ್ಪಳ: ಚುನಾವಣೆಗಳು ಜನತಂತ್ರ ಉತ್ಸವಗಳಾಗಿದ್ದು, ಈ ಉತ್ಸವದಲ್ಲಿ ಎಲ್ಲರೂ ಭಾಗವಹಿಸಿ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕೊಪ್ಪಳ ನಗರಸಭೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ "ನಮ್ಮ ರಾಷ್ಟ್ರವನ್ನು ಮುನ್ನಡೆಸಲು ಒಂದಾಗೋಣ, ಮತ ಚಲಾಯಿಸೋಣ, ಪ್ರಜಾಪ್ರಭುತ್ವದ ಗೆಲುವಿಗಾಗಿ ವಾಕ್‌ಥಾನ್, ನಾನು ಖಚಿತ ಮತದಾನ ಮಾಡುವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಪ್ರತಿಯೊಬ್ಬರೂ ವಿವೇಚನೆಯಿಂದ ಮತ ಚಲಾಯಿಸಬೇಕು. ಮತದಾನ ಪ್ರಕ್ರಿಯೆಯಿಂದ ಯಾರು ಸಹ ದೂರ ಉಳಿಯಬಾರದು. ಯಾರೇ ಇರಲಿ ಎಲ್ಲರ ಮತಕ್ಕೂ ಒಂದೇ ಮೌಲ್ಯ ಇರುತ್ತದೆ. ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲರೂ ಶ್ರಮಿಸಬೇಕು. ನೊ ಯುವರ್ ಕ್ಯಾಂಡಿಯೆಟ್ಸ್ ಆಪ್ (KYC) ಮೂಲಕ ಚುನಾವಣೆಯಲ್ಲಿರುವ ಅಭ್ಯರ್ಥಿಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು ಎಂದು ಹೇಳಿದರು.
ಪ್ರತಿಜ್ಞಾ ವಿಧಿ ಸ್ವೀಕಾರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ರತ್ನಂ ಪಾಂಡೆ ಅವರು ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಮತದಾನ ಅರಿವು ಮೂಡಿಸಲು ಸಿದ್ಧ-ಸ್ವೀಪ್ ಐಕಾನ್ಸ್: ಯಾವುದೇ ಅರ್ಹ ಮತದಾರರ ಮತದಾನದಿಂದ ಹೊರಗುಳಿಯಬಾರದು. ಈ ಹಿನ್ನೆಲೆ ಜಿಲ್ಲೆಯಲ್ಲಿ ಮತದಾನ ಅರಿವು ಮೂಡಿಸಲು ಶ್ರಮಿಸುವುದಾಗಿ ಜಿಲ್ಲಾ ಸ್ವೀಪ್ ಐಕಾನ್ಸ್ ಡಾ. ಶಿವಕುಮಾರ್ ಮಾಲಿಪಾಟೀಲ್, ಪೂರ್ಣಿಮಾ, ರಮ್ಯಾ ಹಾಗೂ ಮಹೆಬೂಬ್ ಕಿಲ್ಲೆದಾರ್ ತಿಳಿಸಿದರು.
ಸಹಿ ಸಂಗ್ರಹ: ನಾವು ಖಚಿತ ಮತದಾನ ಮಾಡುತ್ತೇವೆ ಎಂಬ ಸಹಿ ಸಂಗ್ರಹ ಬೋರ್ಡ್‌ನಲ್ಲಿ ಡಿಸಿ, ಸಿಇಒ, ಎಸ್‌ಪಿ ಹಗಾೂ ಅಧಿಕಾರಿಗಳು ಸಹಿ ಮಾಡಿ, ಈ ಅಭಿಯಾನಕ್ಕೆ ಕೈಜೋಡಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕೊಪ್ಪಳ ತಹಸೀಲ್ದಾರ್ ವಿಠ್ಠಲ ಚೌಗಲಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮತ್ತು ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು, ಕಾಲೇಜು ಉಪನ್ಯಾಸಕರು, ಚಿತ್ರಕಲಾ, ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು.