ಕನ್ನಡಪ್ರಭ ವಾರ್ತೆ ಮಂಡ್ಯ
ಅಹಿಂದ ಹೆಸರಿನಲ್ಲಿ ಎಸ್ಸಿ-ಎಸ್ಟಿಗಳ ಮತವನ್ನು ಸಾರಾಸಗಟಾಗಿ ಪಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಎಸ್ಸಿ,ಎಸ್ಟಿ ನೌಕರರಿಗೆ ನೇಮಕಾತಿ ಮತ್ತು ಬಡ್ತಿಯಲ್ಲಿ ದೊಡ್ಡಮಟ್ಟದ ಅನ್ಯಾಯ ಮಾಡುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆರೋಪಿಸಿದರು.ವೋಟು ಮತ್ತು ಅಧಿಕಾರಕ್ಕಾಗಿ ನಾವು ದಲಿತಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯರವರ ಕಾಂಗ್ರೆಸ್ ಸರ್ಕಾರ ರಾಜ್ಯದ ೩೧ ಜಿಲ್ಲೆಗಳಲ್ಲಿ ಕೇವಲ ಒಂದು ಜಿಲ್ಲೆಗೆ ಮಾತ್ರ ಎಸ್ಸಿ-ಎಸ್ಪಿ ಸಮಾಜಕ್ಕೆ ಸೇರಿದ ಜಿಲ್ಲಾಧಿಕಾರಿಯನ್ನು ನೇಮಕ ಮಾಡಿದೆ. ಬಿಜೆಪಿ ಅವಧಿಯಲ್ಲಿ ೧೧ ಹುದ್ದೆಗಳಲ್ಲಿ ಜಿಲ್ಲಾಧಿಕಾರಿಯಂತಹ ಮಹತ್ವದ ಹುದ್ದೆಗಳನ್ನು ನೀಡಿತ್ತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇನ್ನು ರಾಜ್ಯದ ಪದವಿ ಪೂರ್ವ ಶಿಕ್ಷಣ, ಗೃಹ, ಅರಣ್ಯ, ತೋಟಗಾರಿಕೆ, ಕೃಷಿ, ನಗರಾಭಿವೃದ್ಧಿ, ಸಾರಿಗೆ, ಡಿಪಿಎಆರ್, ಇಂಧನ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಮುಂಬಡ್ತಿಗೆ ಅರ್ಹರಾಗಿರುವ ಎಸ್ಸಿ-ಎಸ್ಪಿ ನೌಕರರಿಗೆ ಸಕಾಲದಲ್ಲಿ ಬಡ್ತಿ ನೀಡದೆ ವಂಚನೆ ಮಾಡಲಾಗುತ್ತಿದೆ ಎಂದು ಉದಾಹರಣೆ ಸಹಿತ ಆರೋಪಿಸಿದರು.ಪಿ.ಎಂ.ನರೇಂದ್ರಸ್ವಾಮಿ ರಾಜೀನಾಮೆಗೆ ಆಗ್ರಹ:
ಪದವಿ ಪೂರ್ವ ಕಾಲೇಜುಗಳ ಸುಮಾರು ೮೦ ಎಸ್ಸಿ-ಎಸ್ಟಿ ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಬಡ್ತಿ ನೀಡದೆ ಸಾಂವಿಧಾನಿಕ ಸಂಸ್ಥೆಯಾಗಿರುವ ಶಾಸಕ ನರೇಂದ್ರಸ್ವಾಮಿ ನೇತೃತ್ವದ ಸದನ ಸಮಿತಿಯ ಆದೇಶವನ್ನು ಕಡೆಗಣಿಸಿ ಎಸ್‌ಸಿ/ಎಸ್‌ಟಿ ಜನಾಂಗದ ೮೦ ಉಪನ್ಯಾಸಕರಿಗೆ ಅನ್ಯಾಯ ಮಾಡಲೆಂದೇ ಇತರರಿಗೆ ಬಡ್ತಿ ನೀಡಲಾಗಿದೆ. ಸದನ ಸಮಿತಿ ಆದೇಶವನ್ನು ಪಾಲಿಸದಿದ್ದರೆ ಸದನ ಸಮಿತಿಯನ್ನೇ ರದ್ದುಗೊಳಿಸಿ. ಇಲ್ಲವೇ, ಎಸ್ಸಿ, ಎಸ್ಟಿ ಜನಾಂಗದವರ ಹಿತರಕ್ಷಣೆ ಮಾಡಲು ವಿಫಲವಾಗಿರುವ ಶಾಸಕ ನರೇಂದ್ರಸ್ವಾಮಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದ ಸಮಾಜ ಕಲ್ಯಾಣ ಇಲಾಖೆಯ ಸ್ಪಷ್ಟ ಆದೇಶವಿದ್ದರೂ ನಗರಾಭಿವೃದ್ಧಿ ಕಾರ್ಯದರ್ಶಿ ಬಡ್ತಿ ನಿಯಮಗಳನ್ನು ಗಾಳಿಗೆ ತೂರಿ ವಂಚಿಸುತ್ತಿದ್ದಾರೆ. ಸಿದ್ದರಾಮಯ್ಯ ಆಪ್ತ ಕೆ.ಜೆ.ಜಾರ್ಜ್ ಸಚಿವರಾಗಿರುವ ಇಂಧನ ಇಲಾಖೆಯಲ್ಲಿ ೧೬೦ ಎಸ್ಸಿ-ಎಸ್ಪಿ ಸಹಾಯಕ ಎಂಜಿನಿಯರ್‌ಗಳಿಗೆ ಬಡ್ತಿ ನೀಡದೆ ವಂಚಿಸಲಾಗುತ್ತಿದೆ. ಕೃಷಿ ಇಲಾಖೆಯಲ್ಲಿ ಸುಮಾರು ೫೦ ಎಸ್ಸಿ-ಎಸ್ಪಿ ಅಧಿಕಾರಿಗಳಿಗೆ, ಡಾ.ಜಿ.ಪರಮೇಶ್ವರ್ ಗೃಹ ಮಂತ್ರಿಯಾಗಿದ್ದರೂ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ವಿವಿಧ ವೃಂದಗಳಿಗೆ ಬಡ್ತಿ ನೀಡುವಾಗ ಎಸ್ಸಿ-ಎಸ್ಟಿ ನೌಕರರಿಗೆ ಅನ್ಯಾಯವೆಸಗಲಾಗಿದೆ ಎಂದು ವಿವರಿಸಿದರು.
ಮತ್ತೊಂದು ಕಡೆ ಎಸ್ಸಿ-ಎಸ್ಪಿ ಮತ್ತು ಟಿಎಸ್‌ಪಿ ಹಣವನ್ನು ಗ್ಯಾರಂಟಿ ಮತ್ತು ಇತರೆ ಯೋಜನೆಗಳಿಗೆ ೨೫ ಸಾವಿರ ಕೋಟಿ ರು. ವರ್ಗಾವಣೆ ಮಾಡಿಕೊಂಡು ಇಡೀ ಸಮಾಜಕ್ಕೆ ಅನ್ಯಾಯ ಮಾಡಿದೆ. ತಕ್ಷಣವೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಅನ್ಯಾಯ ಸರಿಪಡಿಸದಿದ್ದರೆ, ಈ ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ಬಹುಜನ ಸಮಾಜ ಪಾರ್ಟಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಗೋಷ್ಠಿಯಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಶಿವಶಂಕರ್, ಮುಖಂಡರಾದ ನಂಜುಂಡಸ್ವಾಮಿ, ಬಸವರಾಜು, ಎಂ.ಆರ್. ವಿನಯಕುಮಾರ್ ಇದ್ದರು.