ಬಂಡಳ್ಳಿ ಕ್ಲಸ್ಟರ್‌ನಲ್ಲಿ ಅತಿಥಿ ಶಿಕ್ಷಕರ ನೇಮಕಾತಿ: ನಿಯಮ ತೂರಿಕೆ

KannadaprabhaNewsNetwork |  
Published : Jul 16, 2026, 02:15 AM IST
ನಿಯಮ ಉಲ್ಲಂಘನೆ | Kannada Prabha

ಸಾರಾಂಶ

ಬಂಡಳ್ಳಿ ಕ್ಲಸ್ಟರ್‌ ಕೇಂದ್ರ ವ್ಯಾಪ್ತಿಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಜವಾಬ್ದಾರಿ ಹೊತ್ತ ಸಂಪನ್ಮೂಲ ಶಿಕ್ಷಕರು, ಮುಖ್ಯ ಶಿಕ್ಷಕರು ನಿಯಮ ಉಲ್ಲಂಘಿಸಿ ಅಗತ್ಯವಿಲ್ಲದ ಕೆಲ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಗತ್ಯಕ್ಕಿಂತ ಹೆಚ್ಚು ಶಿಕ್ಷಕರನ್ನು ನಿಯೋಜಿಸಿ ಅಕ್ರಮ । ಮಕ್ಕಳ ಸಂಖ್ಯೆ ಮರೆಮಾಚಿ ಕಾಯಂ ಶಿಕ್ಷಕರಿಂದ ಪಕ್ಷಪಾತ । ಶೀಘ್ರ ಶೋಕಾಸ್‌ ನೋಟಿಸ್‌

ಎನ್. ನಾಗೇಂದ್ರ ಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಬಂಡಳ್ಳಿ ಕ್ಲಸ್ಟರ್‌ ಕೇಂದ್ರ ವ್ಯಾಪ್ತಿಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಜವಾಬ್ದಾರಿ ಹೊತ್ತ ಸಂಪನ್ಮೂಲ ಶಿಕ್ಷಕರು, ಮುಖ್ಯ ಶಿಕ್ಷಕರು ನಿಯಮ ಉಲ್ಲಂಘಿಸಿ ಅಗತ್ಯವಿಲ್ಲದ ಕೆಲ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಹನೂರು ಶೈಕ್ಷಣಿಕ ವಲಯದ ಬಂಡಳ್ಳಿ ಕೇಂದ್ರಕ್ಕೆ ಒಳಪಡುವ ಶಾಲೆಗಳಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಎಷ್ಟು ಅತಿಥಿ ಶಿಕ್ಷಕರ ಅಗತ್ಯವಿದೆ. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಾಯಂ ಶಿಕ್ಷಕರ ಸಂಖ್ಯೆ ಎಷ್ಟಿದೆ ಎಂಬುದರ ಕುರಿತು, ಅಗತ್ಯ ಅತಿಥಿ ಶಿಕ್ಷಕರ ಸಂಖ್ಯೆ ಎಷ್ಟು ಎಂಬುದನ್ನು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಆಯಾ ಕೇಂದ್ರದ ಜವಾಬ್ದಾರಿ ಹೊತ್ತ ಸಿಆರ್‌ಪಿ, ಇಸಿಓಗಳು ನೀಡಬೇಕು. ಇಲ್ಲಿನ ಲೋಪದಿಂದಾಗಿ ಸಾಕಷ್ಟು ಎಡವಟ್ಟುಗಳು ನಡೆದಿವೆ ಎಂದು ಹೇಳಲಾಗುತ್ತಿದೆ.ಉದಾಹರಣೆಗೆ ಹಲಗಾಪುರ ಸರ್ಕಾರಿ ಶಾಲೆಯಲ್ಲಿ ಅಂದಾಜು 11ರಿಂದ 12 ಮಕ್ಕಳಿದ್ದು, ಸರ್ಕಾರದಿಂದ ನೇಮಕಗೊಂಡ ಕಾಯಂ ಶಿಕ್ಷಕಿ ವಿದ್ಯಾ ಎಂಬುವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲಿ ಮಕ್ಕಳ ಸಂಖ್ಯೆಯನ್ನು ಮರೆಮಾಚಿ ಇಬ್ಬರು ಅತಿಥಿ ಶಿಕ್ಷಕರನ್ನು (ದೀಪ-ಶ್ವೇತಾ) ನಿಯಮ ಉಲ್ಲಂಘಿಸಿ ನೇಮಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿಯಮಾನುಸಾರ ಇಲ್ಲಿಗೆ ಒಬ್ಬರೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕಿತ್ತು.ಅದೇ ರೀತಿಯಲ್ಲಿ ನಾಗನತ್ತ ಸರ್ಕಾರಿ ಶಾಲೆಯಲ್ಲಿ ಪೂರ್ಣಿಮಾ ಮತ್ತು ಜ್ಯೋತಿ ಎಂಬ ಕಾಯಂ ಶಿಕ್ಷಕರಿದ್ದು, 19 ವಿದ್ಯಾರ್ಥಿಗಳಿದ್ದಾರೆ. ಆದರೆ ಇಲ್ಲಿಗೆ ಅತಿಥಿ ಶಿಕ್ಷಕರ ಅಗತ್ಯವೇ ಇರಲಿಲ್ಲ. ಆದರೂ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾ ಎಂಬ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.

ನಂಜೆಒಡೆಯರದೊಡ್ಡಿ ಸರ್ಕಾರಿ ಶಾಲೆಯಲ್ಲಿ 7ರಿಂದ 8 ಮಕ್ಕಳಿದ್ದಾರೆ. ಇಲ್ಲಿ ಇಬ್ಬರು ಕಾಯಂ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿರುವವರಲ್ಲಿ ಒಬ್ಬರು ಬೇರೆಡೆಗೆ ವರ್ಗಾವಣೆಯಾಗಬೇಕಿದೆ. ಆದರೆ ಸಂಬಂಧಪಟ್ಟ ಸಂಪನ್ಮೂಲ ಶಿಕ್ಷಕರು ಇಲಾಖೆಯ ಗಮನಕ್ಕೆ ತಾರದೆ ವಿವಾದ ಉಂಟಾಗಿತ್ತು ಎನ್ನಲಾಗಿದೆ.ಅಣಗಳ್ಳಿದೊಡ್ಡಿ ಸರ್ಕಾರಿ ಶಾಲೆಯಲ್ಲಿ ಇಬ್ಬರೇ ಮಕ್ಕಳಿದ್ದು, ಇಲ್ಲಿ ಒಬ್ಬರು ಕಾಯಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ನಿಯಮಾನುಸಾರ ಇಲ್ಲಿನ ಕಾಯಂ ಶಿಕ್ಷಕರನ್ನು ಬೇರೆಡೆಗೆ ಕಳುಹಿಸಿ, ಇಲ್ಲಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಬೇಕು. ಆದರೆ ಇಲ್ಲಿಗೆ ನಿಯಮ ಗಾಳಿಗೆ ತೂರಲಾಗಿದೆ ಎಂಬ ಆರೋಪಿವಿದೆ.

---

ನಿರ್ವಹಣೆಯಿಲ್ಲದೇ ಪಾಳುಬಿದ್ದಿದೆ ಕ್ಲಸ್ಟರ್‌ ಕೇಂದ್ರ:

ಶಿಕ್ಷಕರ ಮಾರ್ಗದರ್ಶನ ಸಭೆ, ಮಕ್ಕಳ ಶೈಕ್ಷಣಿಕ ಅಭ್ಯುದಯಕ್ಕೆ ಸಭೆ, ಸಮಾರಂಭ ನಡೆಸುವ ಈ ಕಟ್ಟಡ 3 ವರ್ಷಗಳಿಂದ ಸರಿಯಾದ ನಿರ್ವಹಣೆಯಿಲ್ಲದೇ ದುಸ್ಥಿತಿಗೆ ತಲುಪಿದೆ. ಇವುಗಳ ನಿರ್ವಹಣೆಗೆಂದು ಪ್ರತಿ ವರ್ಷ ಸಾವಿರಾರು ರು.ಗಳ ಅನುದಾನ ಬರುತ್ತಿದ್ದರೂ ಸಹ ಸಂಪನ್ಮೂಲ ಶಿಕ್ಷಕರು ಸದ್ಬಳಕೆ ಮಾಡಿಕೊಳ್ಳದೆ, ಕನಿಷ್ಠ ಸ್ವಚ್ಛತೆಯೂ ಇಲ್ಲದೇ ಅವಸಾನಕ್ಕೆ ತಲುಪಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

---ಬಂಡಳ್ಳಿ ಕ್ಲಸ್ಟರ್‌ ಕೇಂದ್ರ ನಿರ್ವಹಣೆ ಏಕೆ ಮಾಡಲಿಲ್ಲ. ನೀಡಿದ ಅನುದಾನ ಎಲ್ಲಿಗೆ ಹೋಯಿತು ಎಂಬುದರ ಕುರಿತು ಸಂಬಂಧಿಸಿದ ಸಿಆರ್‌ಪಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವೆ. ಈ ವ್ಯಾಪ್ತಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಶಿಕ್ಷಕರ ನೇಮಕಾತಿ ಆಗಿದ್ದರೆ ಅಂಥವರ ವಿರುದ್ಧ ಪರಿಶೀಲಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.- ಚಂದ್ರಪಾಟೀಲ್, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಯನ ನಿಲ್ಲಿಸಿದ ದಕ್ಷಿಣದ ಕೋಗಿಲೆ: ಕೆ.ಟಿ.ಹನುಮಂತು
ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಜೆಡಿಎಸ್ ಬೆಂಬಲಿತ 9 ಮಂದಿ ಆಯ್ಕೆ