ಮೇ.8ರಂದು ಬಿಡದಿ ಟೌನ್ ಶಿಪ್ ಭೂಸ್ವಾಧೀನ ವಿರೋಧಿಸಿ ಬೃಹತ್ ಪಾದಯಾತ್ರೆ: ಕೆ.ರಾಮಯ್ಯ

KannadaprabhaNewsNetwork |  
Published : May 02, 2025, 12:12 AM IST
1ಕೆಆರ್ ಎಂಎನ್ 1.ಜೆಪಿಜಿಬೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರ ಭೂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅರಳಾಳಸಂದ್ರ ಕೆ. ರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಸೌಜನ್ಯಕ್ಕಾದರೂ ರೈತರ ಸಭೆ ಕರೆದು ಚರ್ಚೆ ನಡೆಸಿಲ್ಲ. ನಮ್ಮಲ್ಲಿಯೇ ಬಲಾಢ್ಯರಾಗಿರುವ ಕೆಲ ರೈತರು ಅವರೊಂದಿಗೆ ಕೈಜೋಡಿಸಿ ಉಳಿದ ಬಡ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ರಾಮನಗರ

ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಗಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭೂ ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ, ಮೇ 8ರಂದು ಬೈರಮಂಗಲದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಿ ಮುತ್ತಿಗೆ ಹಾಕಲಾಗುವುದು ಎಂದು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರ ಭೂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅರಳಾಳಸಂದ್ರ ಕೆ. ರಾಮಯ್ಯ ಎಚ್ಚರಿಕೆ ನೀಡಿದರು.

ಬಿಡದಿ ಹೋಬಳಿ ಹೊಸೂರು ಗ್ರಾಮದ ಮದ್ದೂರಮ್ಮ ದೇವಾಲಯದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿ ಬ್ಯಾನರ್ ಅಡಿಯಲ್ಲಿ ನಡೆಯಲಿರುವ ಬೃಹತ್ ಪಾದಯಾತ್ರೆಯಲ್ಲಿ ಸಹಸ್ರಾರು ರೈತರು ಭಾಗಿಯಾಗುವರು. ಕಾಂಗ್ರೆಸ್ , ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಬಾಹ್ಯ ಬೆಂಬಲ ನೀಡಿದಲ್ಲಿ ಪಡೆಯುತ್ತೇವೆ. ಆ ಪಕ್ಷದ ಚಿಹ್ನೆಗಳನ್ನು ಬಳಸುವುದಿಲ್ಲ. ರಾಜಕೀಯ ನಾಯಕರು ಹಸಿರು ಶಾಲು ಹಾಕಿಕೊಂಡು ಹೋರಾಟಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದರು.

ರೈತರ ಒಪ್ಪಿಗೆ ಪಡೆಯದೆ ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಂಸದ ಡಾ.ಸಿ.ಎನ್. ಮಂಜುನಾಥ್ ರವರು ಟೌನ್ ಶಿಪ್ ಗಾಗಿ ಭೂ ಸ್ವಾಧೀನ ಮಾಡಿಕೊಳ್ಳದಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಎಲ್ಲರೂ ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಊರು ಬಿಡುವುದಿಲ್ಲ, ಭೂಮಿ ಕೊಡುವುದಿಲ್ಲ:

ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಸೌಜನ್ಯಕ್ಕಾದರೂ ರೈತರ ಸಭೆ ಕರೆದು ಚರ್ಚೆ ನಡೆಸಿಲ್ಲ. ನಮ್ಮಲ್ಲಿಯೇ ಬಲಾಢ್ಯರಾಗಿರುವ ಕೆಲ ರೈತರು ಅವರೊಂದಿಗೆ ಕೈಜೋಡಿಸಿ ಉಳಿದ ಬಡ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಶೇ.80ರಷ್ಟು ರೈತರು ಒಪ್ಪಿಗೆ ಸೂಚಿಸಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ಇಲ್ಲಿರುವ 24 ಹಳ್ಳಿಗಳಲ್ಲಿ ಯಾವ ರೈತರನ್ನು ಕರೆದು ಉಪಮುಖ್ಯಮಂತ್ರಿಗಳು ಮಾತನಾಡಿದ್ದಾರೆಂದು ಸಾಕ್ಷ್ಯ ಸಮೇತ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಭೂಮಿ ತಾಯಿಯನ್ನು ನಂಬಿ ನಾವು ಬದುಕು ನಡೆಸುತ್ತಿದ್ದೇವೆ. ಅದನ್ನೇ ಕಿತ್ತುಕೊಂಡರೆ ನಾವು ಇದ್ದೂ ಸತ್ತಂತೆ. ಈ ಭೂಮಿಯಲ್ಲಿ ನಮ್ಮ ಪೂರ್ವಜರ ಗೋರಿಗಳಿದ್ದು, ಅದರೊಂದಿಗೆ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಆ ಗೋರಿಗಳ ಮೇಲೆ ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡಬೇಕಾಗುತ್ತದೆ. ಇದಕ್ಕೆ ನಾವು ಅವಕಾಶ ನೀಡದೆ ಊರು ಬಿಡುವುದಿಲ್ಲ, ಭೂಮಿ ಕೊಡುವುದಿಲ್ಲ ಹೋರಾಟ ನಡೆಸುತ್ತೇವೆ ಎಂದು ಕೆ.ರಾಮಯ್ಯ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರದ್ದು ತುಘಲಕ್ ಆಡಳಿತ:

ಸಮಿತಿ ಮುಖಂಡ ಮಂಡಲಹಳ್ಳಿ ನಾಗರಾಜು ಮಾತನಾಡಿ, ರೈತರು ಹೋರಾಟ ಸಮಿತಿ ರಚನೆ ಮಾಡಿಕೊಂಡಿರುವುದನ್ನು ನೋಡಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭ್ರಮನಿರಸನಗೊಂಡಿದ್ದಾರೆ. ಎಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗುತ್ತದೆಯೋ ಎಂಬ ಭಯ ಅವರಿಗೆ ಕಾಡುತ್ತಿದೆ. ಆದ್ದರಿಂದಲೇ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು.

ಉಪಮುಖ್ಯಮಂತ್ರಿಗಳು ಕನಕಪುರ ರೈತರಿಗೆ ಚಿನ್ನದ ಬೆಲೆ ಬರುತ್ತದೆ, ಭೂಮಿ ಮಾರಾಟ ಮಾಡಬೇಡಿ ಅನ್ನುತ್ತಾರೆ. ಆದರೆ, ನಮ್ಮ ಸಮ್ಮತಿ ಪಡೆಯದೆಯೇ ಬಲವಂತವಾಗಿ ಭೂಮಿ ಕಸಿದುಕೊಳ್ಳಲು ಮುಂದಾಗಿದ್ದಾರೆ. ಬೇಕಾದರೆ ಕನಕಪುರ ಭಾಗದಲ್ಲಿಯೇ ಟೌನ್ ಶಿಪ್ ನಿರ್ಮಾಣ ಮಾಡಿ, ಆ ಭಾಗದ ರೈತರನ್ನು ಉದ್ಧಾರ ಮಾಡಿಕೊಳ್ಳಲಿ ಎಂದು ಹರಿಹಾಯ್ದರು.

ಎರಡು ರಾಷ್ಟ್ರೀಯ ಹೆದ್ದಾರಿ ಹಾಗೂ ಎರಡು ಕೈಗಾರಿಕಾ ಪ್ರದೇಶಗಳ ನಡುವೆ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಭೂಮಿ ಇದೆ. ಬಿಡದಿ ಮತ್ತು ಹಾರೋಹಳ್ಳಿವರೆಗೆ ಮೆಟ್ರೋ ಸಂಪರ್ಕ ವಿಸ್ತರಣೆಯಾಗಲಿದೆ. ನೀವು ಟೌನ್ ಶಿಪ್ ನಿರ್ಮಾಣ ಮಾಡದಿದ್ದರೂ ನಮ್ಮ ಭೂಮಿಗೆ ಚಿನ್ನದ ಬೆಲೆ ಬರುತ್ತದೆ. ಮುಂದಿನ ಐದು ವರ್ಷಗಳಲ್ಲಿ ಭೂಮಿ ಕೋಟ್ಯಂತರ ರುಪಾಯಿ ಬೆಲೆ ಬಾಳುತ್ತದೆ. ನಿಮ್ಮಿಂದ ರೈತರು ಉದ್ಧಾರ ಆಗಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.

ಉಪಮುಖ್ಯಮಂತ್ರಿ, ಶಾಸಕರು ಹಾಗೂ ಪ್ರಾಧಿಕಾರ ಅಧ್ಯಕ್ಷರಿಗೆ ರೈತರನ್ನು ಕರೆದು ಮಾತನಾಡುವ ಶಕ್ತಿ ಇಲ್ಲ. ರೈತರನ್ನು ಗುಲಾಮರೆಂದು ಭಾವಿಸಿದ್ದಾರೆ. ಶಾಸಕರು ಉಪಮುಖ್ಯಮಂತ್ರಿಗಳನ್ನು ಓಲೈಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನೀವು ಏನೇ ಮಾಡಿದರೂ ರೈತರ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ನಿಮಗಿಂತ ಹತ್ತು ಪಟ್ಟು ತಾಕತ್ತು ರೈತರಲ್ಲಿದ್ದು, ಅದು ಹೇಗಿರಲಿದೆ ಎಂದು ತೋರಿಸುತ್ತೇವೆ ಎಂದು ನಾಗರಾಜು ಎಚ್ಚರಿಸಿದರು.

ಸಮಿತಿ ಮುಖಂಡ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ದಂಧೆ ಮಾಡಲು ಟೌನ್ ಶಿಪ್ ಯೋಜನೆ ಜಾರಿಗೆ ತಂದಿದ್ದಾರೆ. ಅವರು ನಿಜವಾಗಿಯೂ ರೈತರಿಗೆ ಒಳ್ಳೆಯದನ್ನು ಮಾಡಬೇಕೆಂದುಕೊಂಡಿದ್ದರೆ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟು ಎಲ್ಲೋ ಜೋನ್ ಅಂತ ಘೋಷಣೆ ಮಾಡಿಸಲಿ. 2 ಸಾವಿರ ಎಕರೆ ದರಕಾಸ್ತು ಭೂಮಿಗೆ ಹಕ್ಕು ಪತ್ರ ನೀಡಿದ್ದು, ಅ‍ವುಗಳಿಗೆ ಖಾತೆ ಮಾಡಿಕೊಟ್ಟರೆ ಉಪಕಾರವಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚನ್ನಕೇಶವರೆಡ್ಡಿ, ಹರೀಶ್ ಗೌಡ, ಶ್ರೀಧರ್ , ರಾಧಾಕೃಷ್ಣ, ಹೇಮಂತ್ ಕುಮಾರ್ , ರೇವಣ್ಣ, ಅಶ್ವತ್ಥ್ ಅರಳಾಳಸಂದ್ರ, ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''