ವಸಂತಕುಮಾರ್ ಕತಗಾಲ
ಪಶ್ಚಿಮ ಘಟ್ಟದ ಸಂರಕ್ಷಣೆ, ಸಂವರ್ಧನೆಯಲ್ಲಿ 40 ವರ್ಷಗಳಿಂದ ತೊಡಗಿಕೊಂಡಿರುವ ಅನಂತ ಹೆಗಡೆ ಅಶೀಸರ ನೇತೃತ್ವದ ವೃಕ್ಷ ಲಕ್ಷ ಆಂದೋಲನ ಈ ಯೋಜನೆ ಜಾರಿಗೊಳಿಸಲು ಕಾಯಿದೆಗಳ ಉಲ್ಲಂಘನೆ ಮಾಡಿರುವುದು, ಶರಾವತಿ ಕಣಿವೆಯಲ್ಲಿ ಆಗಲಿರುವ ಅವಾಂತರಗಳ ಬಗ್ಗೆ ಗಮನ ಸೆಳೆದಿದೆ. ಜೊತೆಗೆ ಸೆ.16ರಂದು ಶಿವಮೊಗ್ಗ ಹಾಗೂ 18ರಂದು ಗೇರಸೊಪ್ಪದಲ್ಲಿ ನಡೆಯಲಿರುವ ಸಾರ್ವಜನಿಕ ಅಹವಾಲು ಸಭೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದೆ. ಆಂದೋಲನ ನೀಡಿರುವ ವಿವರ ಇಲ್ಲಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ (ಭೂಗತ) ಯೋಜನೆಯ ಪರಿಸರ ಪರಿಣಾಮ ವರದಿ ಸಂಪೂರ್ಣ ತಪ್ಪು ಹಾಗೂ ಯೋಜನಾ ಪರವಾದ ವರದಿ ಆಗಿದೆ. ಸುಳ್ಳಿನ ಸರಮಾಲೆಯಾಗಿದೆ. ಈ ಮುಖ್ಯ ಕಾರಣದಿಂದ ಶರಾವತಿ ಭೂಗತ ಯೋಜನೆಯ ಪರಿಸರ ವರದಿ ರದ್ದು ಮಾಡಬೇಕು ಎಂದು ಆಂದೋಲನ ಆಗ್ರಹಿಸಿದೆ.ಅರಣ್ಯ, ಪರಿಸರ, ಜೀವವೈವಿಧ್ಯ ಮತ್ತು ವನ್ಯಜೀವಿ ಕಾಯಿದೆಗಳ ಪಾಲನೆ ಮತ್ತು ಉಲ್ಲಂಘನೆ ವಿಷಯದಲ್ಲಿ ಸರ್ಕಾರದ ಬೃಹತ್ ಅಭಿವೃದ್ಧಿ ಯೋಜನೆಗಳು ಹೊರತಾಗಿವೆಯೇ? ಈ ಯೋಜನೆ ವಿಷಯದಲ್ಲಿ ಕೆಪಿಸಿಗೆ ಅರಣ್ಯ ವನ್ಯಜೀವಿ ಪರವಾನಗಿ ಸಿಗಲು ಕಾಯಿದೆಗಳನ್ನು ಸಡಿಲಗೊಳಿಸಲು ಅವಕಾಶ ಇದೆಯೇ ಎಂಬುದನ್ನು ಸರ್ಕಾರ ಬಹಿರಂಗಗೊಳಿಸಬೇಕು. ಅರಣ್ಯ ಇಲಾಖೆಯ ವಿಭಾಗ ಮಟ್ಟದ ಅರಣ್ಯ ಅಧಿಕಾರಿಗಳು ಶರಾವತಿ ಯೋಜನೆಗೆ ಅನುಮತಿ ನೀಡಬಾರದು ಎಂದು ವರದಿ ನೀಡಿದ್ದನ್ನು ಮೇಲ್ಮಟ್ಟದಲ್ಲಿ ಬದಲಾಯಿಸಲಾಗಿದೆ ಎಂಬ ಸಂಗತಿ ಬಹಿರಂಗವಾಗಿದೆ. ಕೇಂದ್ರ ಅರಣ್ಯ ಮಂತ್ರಾಲಯದ ದಕ್ಷಿಣ ಭಾರತ ಕಚೇರಿಯ ಅರಣ್ಯ ಅಧಿಕಾರಿಗಳ ಸ್ಥಳ ಭೇಟಿ ವರದಿಯು ಶರಾವತಿ ಭೂಗತ ಯೋಜನೆಗೆ ತಕರಾರು ತೆಗೆದಿತ್ತು. ಅಂಥ ನಿಷ್ಪಕ್ಷಪಾತ ವರದಿಯನ್ನು ಗಾಳಿಗೆ ತೂರಿ ಉನ್ನತ ಮಟ್ಟದಲ್ಲಿ ಅರಣ್ಯ-ವನ್ಯಜೀವಿ ಪರಿಸರ ಅನುಮತಿ ನೀಡಲಾಗಿದೆ ಎಂಬ ಸಂಗತಿ ರಾಷ್ಟ್ರದ ಸಂರಕ್ಷಣಾ ಕಾನೂನುಗಳಿಗೆ ಮಸಿ ಬಳಿದಂತೆ ಆಗಿದೆ ಎಂದು ಆಂದೋಲನ ತಿಳಿಸಿದೆ.
ವನ್ಯಜೀವಿಗಳಿಗೆ, ವನವಾಸಿಗಳಿಗೆ, ಕೋಟಿ ವೃಕ್ಷ ಬಳ್ಳಿಗಳಿಗೆ ಧ್ವನಿ ಇಲ್ಲ. ಅಸಹಾಯಕರಿಗೆ, ಮಾತು ಬಾರದವರಿಗೆ ಸಹಾಯ ಹಸ್ತ, ಜೀವ ನೀಡಬೇಕಾದವರೇ ಮುಂದೆ ನಿಂತು ನಿಸರ್ಗವನ್ನೇ ಧ್ವಂಸ ಮಾಡಲು ಮುಂದಾಗುವದನ್ನು ಪ್ರಜ್ಞಾವಂತರು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಗೇರುಸೊಪ್ಪದಲ್ಲಿ ಬೇಸಿಗೆಯಲ್ಲಿ ಅತಿಕಡಿಮೆ ನೀರುಲಭ್ಯವಾಗುತ್ತದೆ. ಈ ಯೋಜನೆ ಜಾರಿಯಿಂದ ಶರಾವತಿ ನದಿಗೆ ಸಿಹಿನೀರು ಸಿಗುವುದಿಲ್ಲ ಎಂಬ ವಿಜ್ಞಾನಿಗಳ ಅಭಿಪ್ರಾಯವನ್ನು ಪರಿಸರ ಇಲಾಖೆ, ಸಿ.ಆರ್.ಜೆಡ್ ಪ್ರಾಧಿಕಾರ ಪರಿಗಣಿಸಿಲ್ಲ. ಈ ಮುಖ್ಯ ಅಂಶ ಪರಿಸರ ಪರಿಣಾಮ ವರದಿಯಲ್ಲಿ ಎದ್ದು ಕಾಣಬೇಕಿತ್ತು. ಕೆಪಿಸಿ ಭೂಗತ ಜಲವಿದ್ಯುತ್ ಯೋಜನೆಯಿಂದ ಒಂದು ಲಕ್ಷ ರೈತರು-ಮೀನುಗಾರರು ಬೆಳೆ-ಬೆಳೆಯಲಾರದ, ಮೀನು ಕ್ಷಾಮ ಎದುರಿಸುವ ಉಪ್ಪು ನೀರು ಕುಡಿಯುವ ಪರಿಸ್ಥಿತಿಗೆ ಬರುತ್ತಾರೆ.