ಧಾರವಾಡ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ-೨೦೨೫ ಖಂಡಿಸಿ ಅಂಜುಮನ್ ಎ-ಇಸ್ಲಾಂ ಸಂಸ್ಥೆ, ಮುಸ್ಲಿಂ ಸಮುದಾಯ ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದಿಂದ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅಂಜುಮನ್ ಎ-ಇಸ್ಲಾಂ ಸಂಸ್ಥೆಯ ನೇತೃತ್ವದಲ್ಲಿ ಅಂಜುಮನ್ ಆವರಣದಿಂದ ಡಿಸಿ ಕಚೇರಿ ವರೆಗೂ ಮೌನ ಪ್ರತಿಭಟನೆ ನಡೆಸಲಾಯಿತು. ಇದಕ್ಕೂ ಮುನ್ನ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಸಲ್ಲಿಸಿದ ಬಳಿಕ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಮೌಲ್ವಿಗಳು ಸೇರಿದಂತೆ ಮುಸ್ಲಿಂ ಸಮಾಜದವರು ಸಮಾವೇಶಗೊಂಡರು. ಆ ಬಳಿಕ ಅಲ್ಲಿಂದ ಜ್ಯುಬಿಲಿ ವೃತ್ತ, ಕೋರ್ಟ್ ಸರ್ಕಲ್ ಮಾರ್ಗವಾಗಿ ಡಿಸಿ ಕಚೇರಿ ವರೆಗೂ ಬೃಹತ್ ಮೌನ ಪ್ರತಿಭಟನೆ ನಡೆಸಲಾಯಿತು. ಡಿಸಿ ಕಚೇರಿಯ ಎದುರು ಪ್ರತಿಭಟನೆ ನಡೆಸುವ ವೇಳೆ ಜೋರಾದ ಮಳೆ ಸುರಿದರೂ ಮಳೆಯಲ್ಲಿಯೇ ಪ್ರತಿಭಟನಾ ಧರಣಿ ಕೈಗೊಂಡಿದಲ್ಲದೇ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತರುವ ಮತ್ತು ಧಾರ್ಮಿಕ ಮತ್ತು ದತ್ತಿ ಆಸ್ತಿಗಳನ್ನು ನಿರ್ವಹಿಸುವ ಮುಸ್ಲಿಂ ಸಮುದಾಯಗಳ ಹಕ್ಕುಗಳನ್ನು ಉಲ್ಲಂಘಿಸುವ ನಿಬಂಧನೆಗಳನ್ನು ಒಳಗೊಂಡಿದೆ. ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ವಕ್ಫ್ ಭೂಮಿಯನ್ನು ವಶಪಡಿಸಿಕೊಳ್ಳಲು ಮಾಲೀಕತ್ವವನ್ನು ನಿರ್ಧರಿಸಲು ಜಿಲ್ಲಾಧಿಕಾರಿಗೆ ಅವಕಾಶ, ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮೇತರರಿಗೆ ಅವಕಾಶ ಅಸಹನೀಯ ಮತ್ತು ಸಮುದಾಯಕ್ಕೆ ಸ್ವೀಕಾರಾರ್ಹವಲ್ಲ. ಈ ಬದಲಾವಣೆಗಳು ಸಂವಿಧಾನಕ್ಕೂ ವಿರುದ್ಧವಾಗಿದ್ದು, ಸಂವಿಧಾನದಲ್ಲಿ ನೀಡಲಾದ ಹಕ್ಕುಗಳು ಮತ್ತು ಪ್ರಮುಖ ಧಾರ್ಮಿಕ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಸ್ಥೆಗಳ ಅವನತಿಗೆ ಕಾರಣವಾಗಬಹುದು. ಅಂತಹ ತಿದ್ದುಪಡಿಗಳನ್ನು ಜಾರಿಗೊಳಿಸಿದರೆ ಸಮುದಾಯ ಮತ್ತು ರಾಜ್ಯದ ನಡುವಿನ ನಂಬಿಕೆ ಮತ್ತು ಸಾಮರಸ್ಯಕ್ಕೆ ದೀರ್ಘಾವಧಿಯ ಹಾನಿ ಉಂಟಾಗುತ್ತದೆ ಎಂದು ದೂರಲಾಯಿತು.
ಈ ಮಸೂದೆಗಳನ್ನು ಅಂಗೀಕರಿಸುವುದರಿಂದ ಸಮಾಜವು ಸಂಬಂಧಗಳನ್ನು ಮರೆತು ಬಣಗಳು ಮತ್ತು ಗುಂಪುಗಳಾಗಿ ವಿಭಜನೆಯಾಗುತ್ತದೆ. ನ್ಯಾಯ, ಸಾಂವಿಧಾನಿಕ ಮೌಲ್ಯಗಳು ಮತ್ತು ಕೋಮು ಸೌಹಾರ್ದದ ಹಿತದೃಷ್ಟಿಯಿಂದ, ಮಸೂದೆಯನ್ನು ತಕ್ಷಣವೇ ಹಿಂಪಡೆಯಲು ಮತ್ತು ರದ್ದುಪಡಿಸುವಂತೆ ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ ಇಸ್ಮಾಯಿಲ್ ತಮಟಗಾರ, ಉಪಾಧ್ಯಕ್ಷ ಬಶೀರಅಹ್ಮದ ಜಹಾಂಗೀರದಾರ, ಪದಾಧಿಕಾರಿಗಳಾದ ಎಸ್.ಎಸ್. ಸರಗೀರೋ, ಮಹಮ್ಮದಶಫಿ ಕಳ್ಳಿಮನಿ, ಮಹಮ್ಮದರಫೀಕ ಶಿರಹಟ್ಟಿ ಸೇರಿದಂತೆ ಮೌಲ್ವಿಗಳು, ಮುಸ್ಲಿಂ ಸಮಾಜದವರು ಪಾಲ್ಗೊಂಡಿದ್ದರು.
ಪ್ರತಿಭಟನೆ-ಬಂಧನಇದಕ್ಕೂ ಮುನ್ನ ಬೆಳಗ್ಗೆ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ-೨೦೨೫ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ಕೈಗೊಂಡು, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇದಾದ ಬಳಿಕ ಕೋರ್ಟ್ ವೃತ್ತದಲ್ಲಿ ಪ್ರತಿಭಟನೆ ಕೈಗೊಂಡಿದಲ್ಲದೇ ಕೆಲ ಹೊತ್ತು ರಸ್ತೆ ಬಂದ್ ಮಾಡಿ ಆಕ್ರೋಶ ಹೊರ ಹಾಕಲಾಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ ಶಾ ವಿರುದ್ಧ ಘೋಷಣೆ ಕೂಗಿದಲ್ಲದೇ ಅವರ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಲು ಮುಂದಾದರು. ಆದರೆ, ಪೊಲೀಸರು ಇದಕ್ಕೆ ಅವಕಾಶ ಕೊಡದೇ ಪ್ರತಿಕೃತಿಯನ್ನು ಎಳೆದೊಯ್ದರು. ಆಗ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ತಳ್ಳಾಟ, ಮಾತಿನ ಚಕಮಕಿಗೂ ಕಾರಣವಾಯಿತು. ಕೊನೆಗೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದು, ಆ ಬಳಿಕ ಬಿಡುಗಡೆ ಮಾಡುವ ಮೂಲಕ ಪ್ರತಿಭಟನೆಗೆ ಅಂತ್ಯ ಹಾಡಿದರು.ಯೂಥ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ರಾಜ್ಯ ಕಾರ್ಯದರ್ಶಿ ಫಿರೋಜ್ ಪಠಾಣ, ಮುಸ್ತಾಕ ನಿಪ್ಪಾಣಿ, ಆಸೀಫ್ ಸನದಿ, ಸಲೀಮ್ ಸಂಗನಮುಲ್ಲಾ, ಸದ್ದಾಂ ಮುಲ್ಲಾ ಇದ್ದರು.