ರೈತರ ಮೇಲಿನ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Aug 06, 2026, 02:30 AM IST
ಶಿರ್ಷಿಕೆ-೫ಕೆ.ಎಂ.ಎಲ್‌.ಆರ್.೧-ಮಾಲೂರಿನ ಮಿನಿವಿಧಾನ ಸೌಧದ ಶಾಸಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಹಾಗೂ ದೇವರಾಜ ಅರಸು ಜಯಂತಿ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. | Kannada Prabha

ಸಾರಾಂಶ

ರೈತರ ಜಮೀನುಗಳಿಗೆ ಪ್ರವೇಶಿಸಿ ಪವರ್ ಲೈನ್ ಅಳವಡಿಸುವ ಸಂದರ್ಭದಲ್ಲಿ ರೈತರೊಂದಿಗೆ ಸಂಘರ್ಷ ಉಂಟಾಗಿರುವುದು ಖಂಡನೀಯ

ಕುಷ್ಟಗಿ: ತಾಲೂಕಿನ ಗುಮಗೇರಾ ಗ್ರಾಮದಲ್ಲಿ ರೈತರ ಜಮೀನುಗಳಿಗೆ ವಿದ್ಯುತ್ ಲೈನ್ ಅಳವಡಿಸುವ ಸಂದರ್ಭದಲ್ಲಿ ನಡೆದ ಹಲ್ಲೆ ಘಟನೆ ಖಂಡಿಸಿ ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಪಟ್ಟಣದ ಮಲ್ಲಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ಮೆರವಣಿಗೆಯುದ್ದಕ್ಕೂ ಕಂಪನಿ, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಗುಮಗೇರಾ ಘಟನೆಯಲ್ಲಿ ರೈತರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಟೋರಂಟೋ ಪವರ್ಲೈನ್ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಂಪನಿ ಲೈಸೆನ್ಸ್ ರದ್ದುಗೊಳಿಸಲು ಆಗ್ರಹ: ರೈತರ ಜಮೀನುಗಳಿಗೆ ಪ್ರವೇಶಿಸಿ ಪವರ್ ಲೈನ್ ಅಳವಡಿಸುವ ಸಂದರ್ಭದಲ್ಲಿ ರೈತರೊಂದಿಗೆ ಸಂಘರ್ಷ ಉಂಟಾಗಿರುವುದು ಖಂಡನೀಯ. ರೈತರ ಹಕ್ಕು ಹಾಗೂ ಜಮೀನಿನ ವಿಚಾರದಲ್ಲಿ ಕಾನೂನು ಪಾಲಿಸದೇ ವರ್ತಿಸುವ ಸಂಸ್ಥೆಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರೈತರ ಮೇಲೆ ಹಲ್ಲೆ ನಡೆಸಿದ ಸಿಬ್ಬಂದಿ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ಟೋರೆಂಟೋ ಪವರ್‌ ಕಂಪನಿಯ ಲೈಸೆನ್ಸ್ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತರಿಗೆ ನ್ಯಾಯ ಕಲ್ಪಿಸಲು ಆಗ್ರಹ: ಗುಮಗೇರಾ ಗ್ರಾಮದಲ್ಲಿ ನಡೆದ ಘಟನೆಯಿಂದ ಹಲ್ಲೆಗೊಳಗಾದ ರೈತರಿಗೆ ಸೂಕ್ತ ನ್ಯಾಯ ಒದಗಿಸಬೇಕು. ರೈತರ ಜಮೀನುಗಳಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆ ಅನುಷ್ಠಾನಗೊಳಿಸುವ ಮುನ್ನ ಭೂಮಾಲೀಕರಿಗೆ ಕಾನೂನು ಬದ್ಧ ಪರಿಹಾರ ಹಾಗೂ ಅಗತ್ಯ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ನೀರಾವರಿ ಅನುಷ್ಠಾನಗೊಳಿಸಿ: ಕೃಷ್ಣ ಬಿ.ಸ್ಕೀಮ್ ಏತ ನೀರಾವರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ತಾಲೂಕಿನಲ್ಲಿ ಕೆರೆ ತುಂಬಿಸಲು ತಕ್ಷಣ ಕ್ರಮ ಕೈಗೊಂಡು ರೈತರ ಕೃಷಿಗೆ ಅನುಕೂಲ ಕಲ್ಪಿಸಬೇಕು. ರೈತರ ಮೇಲಿರುವ ಸಾಲದ ಹೊರೆ ಕಡಿಮೆ ಮಾಡಲು ಐದು ಲಕ್ಷ ರೈತರ ಸಾಲ ಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಂಗನವಾಡಿ ಪೌಷ್ಟಿಕ ಆಹಾರ ಲೂಟಿ ತಡೆಯಿರಿ: ಅಂಗನವಾಡಿ ಕೇಂದ್ರಗಳಿಗೆ ಮಕ್ಕಳಿಗೆ ಹಾಗೂ ಫಲಾನುಭವಿಗಳಿಗೆ ವಿತರಿಸಲು ಬರುತ್ತಿರುವ ಪೌಷ್ಟಿಕ ಆಹಾರದಲ್ಲಿ ನಡೆಯುತ್ತಿದೆ ಎನ್ನಲಾದ ಅವ್ಯವಹಾರ ಮತ್ತು ಲೂಟಿ ತಡೆಯಬೇಕು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಿ:ಕುಷ್ಟಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕೂಡಲೇ ಸರಿಪಡಿಸಬೇಕು. ಗ್ರಾಮೀಣ ಭಾಗದಿಂದ ಚಿಕಿತ್ಸೆಗೆ ಬರುವ ಬಡ ಜನರಿಗೆ ಸೂಕ್ತ ವೈದ್ಯಕೀಯ ಸೇವೆ ದೊರೆಯುವಂತೆ ಅಗತ್ಯ ವೈದ್ಯರು, ಸಿಬ್ಬಂದಿ, ಔಷಧ ಹಾಗೂ ಮೂಲಸೌಕರ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ: ತಾಲೂಕಿನ ರೈತರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರೂ ಶಾಸಕರು, ಮಾಜಿ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ರೈತರ ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಮಸ್ಯೆ ರಾಜಕೀಯ ಭೇದಭಾವವಿಲ್ಲದೆ ಪರಿಹರಿಸಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘದ ರಾಜ್ಯಾಧ್ಯಕ್ಷ ದೊಡ್ಡ ಭರಮಣ್ಣ ಸಿಂಗ್ರಿ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ದೋಟಿಹಾಳ, ಪ್ರಧಾನ ಕಾರ್ಯದರ್ಶಿ ಹನಮೇಶ ಶಾಖಾಪುರ, ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು, ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನಪ್ಪ ತಳವಾರ, ರೈತ ಮುಖಂಡ ಆರ್.ಕೆ. ದೇಸಾಯಿ, ನಜೀರಸಾಬ್‌ ಮೂಲಿಮನಿ, ಶರಣಪ್ಪ ಮೇಗೂರು, ಶಿವಶರಣಗೌಡ ಪಾಟೀಲ, ಶರೀಫಸಾಬ್ ಕುಷ್ಟಗಿ, ಹುಚ್ಚೇಶ ವೈಜಾಪುರ, ಕಳಕಪ್ಪ ಹಡಪದ, ಮುತ್ತು ಬಿಜಕಲ್ಲ, ಹನುಮಂತ ನೆರೆಬೆಂಚಿ, ಹನುಮಗೌಡ ಹಿರೇಮನಿ, ದೇವರಾಜ ಹಜಾಳದ, ಮಾರುತಿ ಜರಗಡ್ಡಿ, ಅಯ್ಯಪ್ಪ ಚೂರಿ, ಚಂದ್ರು ತಳಗೇರಿ, ಬಸವರಾಜ ಬಡಿಗೇರ ಸೇರಿದಂತೆ ಸಂಘಟನೆಯ ಹಲವು ಪ್ರಮುಖರು ಹಾಗೂ ರೈತರು ಪಾಲ್ಗೊಂಡಿದ್ದರು.

ಪ್ರತಿಭಟನೆಯ ನಂತರ ಗ್ರೇಡ್ 2 ತಹಸೀಲ್ದಾರ ರಜನಿಕಾಂತಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಪಿಎಸೈ ಹನಮಂತಪ್ಪ ತಳವಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ, ಬೆಳೆ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ವರದಿ: ನರೇಂದ್ರಸ್ವಾಮಿ
ರ್‍ಯಾಗಿಂಗ್‌ ನಿಯಂತ್ರಣಕ್ಕೆ ಸರ್ಕಾರ ವಿಫಲ: ಡಾ.ಭರತ್‌ ಶೆಟ್ಟಿ ಟೀಕೆ