ಪೈಗಂಬರ್ ಅವಹೇಳನ ಖಂಡಿಸಿ ಗಂಗಾವತಿಯಲ್ಲಿ ಬೃಹತ್‌ ಪ್ರತಿಭಟನೆ

KannadaprabhaNewsNetwork | Published : Oct 19, 2024 12:17 AM

ಸಾರಾಂಶ

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಇಸ್ಲಾಮ್ ಧರ್ಮದ ಪ್ರವಾದಿ ಮಹ್ಮದ್ ಪೈಗಂಬರ ಅವರಿಗೆ ಅವಹೇಳನ ಮಾಡಿರುವುದನ್ನು ಖಂಡಿಸಿ, ಜಮಿಅತುಲ್ ಉಲಮಾ ಸಂಘಟನೆ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಗಂಗಾವತಿ: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಇಸ್ಲಾಮ್ ಧರ್ಮದ ಪ್ರವಾದಿ ಮಹ್ಮದ್ ಪೈಗಂಬರ ಅವರಿಗೆ ಅವಹೇಳನ ಮಾಡಿರುವುದನ್ನು ಖಂಡಿಸಿ, ಜಮಿಅತುಲ್ ಉಲಮಾ ಸಂಘಟನೆ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಉತ್ತರ ಪ್ರದೇಶದಲ್ಲಿ ಯತಿ ನರಸಿಂಗಾನಂದ ಸರಸ್ವತಿ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡುವಾಗ ಇಸ್ಲಾಮ್ ಧರ್ಮದ ಪ್ರವಾದಿಗಳಾದ ಮೊಹ್ಮದ್ ಪೈಗಂಬರ್ ಅವರ ಬಗ್ಗೆ ಹಾಗೂ ಪವಿತ್ರ ಕುರ್ ಆನ್ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ಸಮುಸ್ತ ಮುಸ್ಲಿಂ ಬಾಂಧವರ ಮನಸ್ಸಿಗೆ ಧಕ್ಕೆ ಉಂಟು ಮಾಡಿದ್ದಾರೆ. ರಾವಣನ ದಹನ ಮಾಡುವ ಹಿಂದೂಗಳು ಸಾಮಾಜಿಕ ಪಿಶಾಚಿಯಾದ ಮೊಹ್ಮದ್ ಪೈಗಂಬರ್ ಅವರ ಪುತ್ಥಳಿ ದಹನ ಮಾಡಬೇಕೆಂದು ಕರೆ ನೀಡಿ, ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲಾತಾಣದಲ್ಲಿ ಬಿತ್ತರಿಸಿ, ಸಮಗ್ರತೆಗೆ ಧಕ್ಕೆ ತರುವ ಅಪರಾಧವೆಸಗಿದ್ದಾರೆ ಎಂದು ಪ್ರತಿಭಟನಕಾರರು ಅಕ್ರೋಶ ವ್ಯಕ್ತಪಡಿಸಿದರು.

ಉತ್ತರ ಭಾರತದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿದ್ದು, ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೇಶದ ಶಾಂತಿ, ಸೌಹಾರ್ದತೆ, ಸಾರ್ವಭೌಮತ್ವ ಬಯಸುವ ಮುಸ್ಲಿಂ ಸಮುದಾಯವರು ದೇಶದ ಏಕತೆಗೆ ಶ್ರಮಿಸುತ್ತಿದ್ದಾರೆ. ಎಲ್ಲ ಧರ್ಮಗಳ ಪ್ರವಾದಿಗಳ ಮತ್ತು ಶರಣರ, ಸ್ವಾತಂತ್ರ್ಯಕ್ಕಾಗಿ ಮಡಿದಂಥವರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದರೆ ಕನಿಷ್ಠ 10 ವರ್ಷಗಳ ಶಿಕ್ಷೆಗೆ ಹಾಗೂ ಜೀವಾವಧಿ ಶಿಕ್ಷೆಗೂ ಒಳಪಡಿಸುವಂತಹ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ಅಧ್ಯಕ್ಷ ಮೌಲಾಸಾಬ್, ಅಕ್ತರ್ ಅನ್ಸಾರಿ, ಎಸ್.ಬಿ. ಖಾದ್ರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ, ಕಮಲ್ ಮುಸ್ತಾಫ್ ಪಾಷಾ, ಮೌಲಾ ಅಬ್ದುಲ್ ಹುಸೇನ್, ವಕೀಲ ಗೌಸ್ ಪೀರ್, ನಜೀರ್ ಹುಸೇನ್, ಎಂ.ಡಿ. ಫಯಾಜ್, ಇಮ್ರಾನ್, ಇಮ್ತಿಯಾಜ್, ಅಸಿಫ್ ಅಹ್ಮದ್, ಕೆ. ಸನ್ನಿಕ್ ಪಾಷಾ ಭಾಗವಹಿಸಿದ್ದರು.

Share this article