ಹುಬ್ಬಳ್ಳಿ: ಸಿಇಟಿ ಪರೀಕ್ಷೆಯಲ್ಲಿ ಜನಿವಾರ್ ಕಳಚಿದ್ದನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ತೀವ್ರವಾಗಿ ಖಂಡಿಸಲಾಯಿತು.
ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮುಖಂಡರು, ಬಳಿಕ ಸಂಗೊಳ್ಳಿ ರಾಯಣ್ಣ ಸರ್ಕಲ್‌ಗೆ ಆಗಮಿಸಿದ ಪ್ರತಿಭಟನಾ ಮೆರವಣಿಗೆಯೂ ಅಲ್ಲಿ ಸಮಾವೇಶಗೊಂಡಿತು.ಅಲ್ಲಿ ರಸ್ತೆ ಮೇಲೆ ಕುಳಿತು ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಜನಿವಾರವನ್ನು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕೈಗೆ ಕಪ್ಪು ಬಟ್ಟೆ ಧರಿಸಿ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಕತ್ತರಿಸಿರುವುದು ಅಕ್ಷಮ್ಯ. ಜನಿವಾರ ಕತ್ತರಿಸಿರುವುದನ್ನು ಬ್ರಾಹ್ಮಣ ಸಮಾಜದ ಮಹಾಸಭಾವೂ ತೀವ್ರವಾಗಿ ಖಂಡಿಸುತ್ತದೆ. ಶೋಷಣೆಗೆ ಒಳಗಾದ ವಿದ್ಯಾರ್ಥಿಗಳಿಗೆ ಸೂಕ್ತ ಕಾಲೇಜಿನಲ್ಲಿ ಪ್ರವೇಶ ಕೊಡುವುದರೊಂದಿಗೆ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಜನಿವಾರವನ್ನು ಪ್ರದರ್ಶಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ದೇಶದ ಅಮಾಯಕ ಹಿಂದೂ ಪ್ರವಾಸಿಗರನ್ನು ಹೀನಾಯವಾಗಿ ಕೊಲೆ ಮಾಡಿದ್ದು, ತೀವ್ರ ಖಂಡನೀಯ. ಶಾಂತಿಪ್ರಿಯ ಭಾರತದಲ್ಲಿ ಭಯೋತ್ಪಾದಕರ ಅಟ್ಟಹಾಸ ಎಲ್ಲೆ ಮೀರುತ್ತಿದೆ. ಭಯೋತ್ಪಾದಕರನ್ನು ಹತ್ತಿಕ್ಕಲು,ಹಲವಾರು ಪ್ರಯತ್ನ ಮಾಡುತ್ತಿದ್ದರೂ ಇನ್ನು ಕೂಡಾ ಅವರ ಹಾವಳಿ ನಿಲ್ಲದಿರುವುದು ಖಂಡನೀಯ. ಭಯೋತ್ಪಾದಕ ಕೃತ್ಯ ಎಸಗುವವರನ್ನು ಸದೆಬಡೆಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡ ಜಯತೀರ್ಥ ಕಟ್ಟಿ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುವ ಜತೆಗೆ ಪಾಕಿಸ್ತಾನಕ್ಕೆ ತಕ್ಕಶಾಸ್ತ್ರಿ ಮಾಡಬೇಕೆಂದು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಿ ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಈ ವೇಳೆ ಮಹಾಸಭಾದ ಜಿಲ್ಲಾಧ್ಯಕ್ಷ ಲಕ್ಷ್ಮಣ ಕುಲಕರ್ಣಿ, ಎ.ಸಿ. ಗೋಪಾಲ, ರವಿ ಆಚಾರ್ಯ ಮತ್ತಿಹಳ್ಳಿ, ಹನುಮಂತಸಾ ನಿರಂಜನ, ಪಂಡಿತ ಪುಂಡಲೀಕ, ಭಾಗ್ಯಶ್ರೀ, ಹನುಮಂತಸಾ ನಿರಂಜನ, ಸತೀಶ ಶೇಜವಾಡ್ಕರ್, ದತ್ತಮೂರ್ತಿ ಕುಲಕರ್ಣಿ, ಸಂಜೀವ್ ಜೋಶಿ, ಹನುಮಂತರಾವ್ ಡಂಬಳ, ಜಯತೀರ್ಥ ಆಚಾರ್ಯ ಹುಂಡೇಕಾರ್, ನಿತ್ಯಾನಂದ ದೇಸಾಯಿ, ವಿಶ್ವಾಪ್ರೀಯ ಆಚಾರ್ಯ ಜೋಶಿ, ವಿನಾಯಕ ತಾಪಸ, ಮನೋಹರ ಪರ್ವತಿ, ಉಷಾ ಮಳಗಿ, ಶಾರದಾ ಬಂಧೀಷ್ಠಿ, ರಷ್ಮಿ ಆವರಕರ, ಪ್ರಭಾ ಸತ್ತಿಗೇರಿ, ರಾಘವೇಂದ್ರ ಧಾರವಾಡಕರ, ವಾದಿರಾಜ ಕುಲಕರ್ಣಿ, ವಿಷ್ಣುತೀರ್ಥ ತಡಸ ಪಾಲ್ಗೊಂಡಿದ್ದರು.