ಶಾಸಕ ಸಿದ್ದು ಪಾಟೀಲ್ ವಿರುದ್ಧ ಬಹೃತ್ ಪ್ರತಿಭಟನೆ

KannadaprabhaNewsNetwork | Updated : Feb 02 2024, 01:03 AM IST

ಸಾರಾಂಶ

9 ತಿಂಗಳಲ್ಲೆ ಅಕ್ರಮ, ಮೋಸ, ಜೀವ ಬೇದರಿಕೆಯಂತಹ ಪ್ರಕರಣಗಳು ಹೆಚ್ಚು. ಹುಮನಾಬಾದ್‌ನಲ್ಲಿ ವಿಷಕಾರಿ ಕಾರ್ಖಾನೆಗಳ ವಿರುದ್ಧ ಸಾರ್ವಜನಿಕ ಹಿತರಕ್ಷಣಾ ಒಕ್ಕೂಟ ಹೋರಾಟ ಸಮಿತಿಯಿಂದ ಕಾರ್ಖಾನೆ ಹಠಾವೋ ಹುಮನಾಬಾದ ಬಚಾವೋ ಘೋಷವಾಕ್ಯದೊಂದಿಗೆ ಬೃಹತ್ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಕೇವಲ ಒಂಬತ್ತು ತಿಂಗಳ ಕಾಲಾವಧಿಯಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ ಅವರ ಅಕ್ರಮ ಧಂದೆ, ಅಧಿಕಾರದ ದುರುಪಯೋಗ, ಮೋಸ ಮತ್ತು ಜೀವ ಬೆದರಿಕೆಯಂತಹ ಪ್ರಕರಣವನ್ನು ಕ್ಷೇತ್ರದಲ್ಲಿ ಹುಟ್ಟಿಕೊಳ್ಳುತ್ತಿರುವುದನ್ನು ಬಯಲಿಗೆಳೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಸಾರ್ವಜನಿಕ ಹಿತರಕ್ಷಣಾ ಒಕ್ಕೂಟ ಹೋರಾಟ ಸಮಿತಿಯಿಂದ ಕಾರ್ಖಾನೆ ಹಠಾವೋ ಹುಮನಾಬಾದ ಬಚಾವೋ ಘೋಷವಾಕ್ಯದೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪಟ್ಟಣದ ಹೊರವಲಯದ ಹುಮನಾಬಾದ್‌ ಕೈಗಾರಿಕಾ ಪ್ರದೇಶದ ಶಕ್ತಿ ದಾಲ್ ಮಿಲ್ ಮುಂಭಾಗದಿಂದ ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ನೇತೃತ್ವದಲ್ಲಿ ಗಡವಂತಿ, ಮೋಳಕೇರಾ, ಬಸಂತಪೂರ, ಮಾಣಿಕನಗರ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿ, . ಸಹಾಯಕ ಆಯುಕ್ತರು, ಬಸವಕಲ್ಯಾಣ, ರಾಜ್ಯಪಾಲರು, ವಿಧಾನಸಭಾ ಸಭಾಪತಿ ಯು.ಟಿ.ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಮತ್ತು ಪರಿಸರ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ.ಬಿ. ಖಂಡ್ರೆಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ ಅಂಜುಮ್ ತಬಸುಮ್ ಅವರಿಗೆ ಸಲ್ಲಿಸಲಾಯಿತು.

ಹುಮನಾಬಾದ ತಾಲೂಕಿನ ಮಾಣಿಕನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗಡವಂತಿ ಗ್ರಾಮದ ಸರ್ವೆ ಸಂಖ್ಯೆಗಳಲ್ಲಿ ಬೃಹತ್ ಪ್ರಮಾಣದ ಕೈಗಾರಿಕಾ ರಾಸಾಯನಿಕ ಕಾರ್ಖಾನೆಗಳು ತಲೆ ಎತ್ತಿವೆ. ಈ ಕೈಗಾರಿಕೆಗಳು ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ, ಕೆಲಸ ನಿರ್ವಹಿಸುತ್ತಿವೆ ಕೆಲವು ದಿನಗಳ ಹಿಂದೆ ಪ್ರಸನ್ನ ಫ್ರಿ ಪ್ರೊಸೆಸಿಂಗ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಹಕ್ಕೊತ್ತಾಯಗಳು: ಕಾರ್ಖಾನೆಗಳಿಂದ ಸುಟ್ಟಿದ ಕಲ್ಲಿದ್ದಲನ್ನು ಹೊಲಗಳಲ್ಲಿ ಅಕ್ರಮವಾಗಿ ಶೇಖರಣೆ ಮಾಡಿಕೊಂಡು ಮಾರಾಟ ಮಾಡುತ್ತಿದ್ದು, ಚುನಾವಣಾ ಪೂರ್ವದಲ್ಲಿ ಆಶ್ವಾಸನೆ ನೀಡಿದಂತೆ ಕಾರ್ಖಾನೆಗಳನ್ನು ಮುಚ್ಚುವಂತೆ ಒತ್ತಾಯಿಸಿದರು.

ಕೈಗಾರಿಕಾ ಕಾರ್ಖಾನೆಗಳಿಗೆ ಸರ್ಕಾರದ ಕೆರೆಯಲ್ಲಿರುವ ಬಾವಿಯಿಂದ ಸರ್ಕಾರದ ಅನುಮತಿ ಇಲ್ಲದೆ ಅನಧಿಕೃತವಾಗಿ ಅಮೃತ ಎಂಬ ವ್ಯಕ್ತಿಯ ಹೆಸರಿನ ಮೂಲಕ 28 ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡಿ ಅಕ್ರಮ ನಡೆಸಲಾಗುತ್ತಿದೆ. ಕೂಡಲೆ ಈ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕು. ಅಮೃತ್ ಎಂಬುವವನನ್ನು ಬಂಧಿಸಿ, ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.

ಅಮಾಯಕ ಮತ್ತು ಮುಗ್ಧ ಜನರಿಗೆ ಜೀವ ಬೆದರಿಕೆ ಹಾಕುತ್ತಿರುವ ಶಾಸಕರ ಸಹೋದರರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಹೋರಾಟದ ಮೂಲಕ ಮನವಿಯಲ್ಲಿ ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಮಾಜಿ ಜಿ.ಪಂ ಸದಸ್ಯ ವೀರಣ್ಣಾ ಪಾಟೀಲ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಹಮದ್ ಮೈನೊದ್ದಿನ್ ಅಪ್ಪರ್‌ಮಿಯ್ಯಾ, ಓಂಕಾರ ತುಂಬಾ, ಸೈಯದ್ ಯಾಸಿನ್ ಕಾರ್ಖಾನೆಗಳ ಹಾಗೂ ಶಾಸಕರ ವಿರುದ್ಧ ಗುಡುಗಿದರು. ಉಮೇಶ ಜಂಬಗಿ, ರಮೇಶ ಡಾಕುಳಗಿ, ಭಾರತಬಾಯಿ ಶೇರಿಕಾರ, ಸುಮಿತ್ರಾ ಪರೀಟ್, ಶಿವರಾಜ ಚಿತ್ತಕೂಟೆ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

Share this article