ಕುಡಿಯುವ ನೀರಿಗಾಗಿ ಮುನಿರಾಬಾದ್‌ನಲ್ಲಿ ರೈತರಿಂದ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Jul 21, 2026, 02:00 AM IST
Farmers

ಸಾರಾಂಶ

ತುಂಗಭದ್ರಾ ಜಲಾಶಯದ ನದಿಪಾತ್ರದ ನಗರಗಳು ಹಾಗೂ ಗ್ರಾಮದ ಜನರ ಜನರಿಗೆ ಕುಡಿಯುವ ನೀರು ಹರಿಸುವಂತೆ ಆಗ್ರಹಿಸಿ ನದಿಪಾತ್ರದ 1000ಕ್ಕೂ ಅಧಿಕ ರೈತರು ಸೋಮವಾರ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿಯ ಮುಂದೆ ಭಾರಿ ಪ್ರತಿಭಟನೆ ನಡೆಸಿದರು.

ಮುನಿರಾಬಾದ್: ತುಂಗಭದ್ರಾ ಜಲಾಶಯದ ನದಿಪಾತ್ರದ ನಗರಗಳು ಹಾಗೂ ಗ್ರಾಮದ ಜನರ ಜನರಿಗೆ ಕುಡಿಯುವ ನೀರು ಹರಿಸುವಂತೆ ಆಗ್ರಹಿಸಿ ನದಿಪಾತ್ರದ 1000ಕ್ಕೂ ಅಧಿಕ ರೈತರು ಸೋಮವಾರ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿಯ ಮುಂದೆ ಭಾರಿ ಪ್ರತಿಭಟನೆ ನಡೆಸಿದರು.

ರೈತರಿಂದಲೇ ಜಗತ್ತು ಜೀವಂತವಾಗಿದೆ

ಈ ಸಂದರ್ಭದಲ್ಲಿ ರೈತ ಮುಖಂಡ ವೀರೇಶ್ ಮಾತನಾಡಿ, ರೈತರಿಂದಲೇ ಜಗತ್ತು ಜೀವಂತವಾಗಿದೆ. ರೈತರು ಬೆಳೆದ ಅನ್ನವನ್ನು ತಿಂದು ಜಗತ್ತಿನ ಜನರು ಬದುಕುತ್ತಿದ್ದಾರೆ. ಈಗ ರೈತರಿಗೆ ಸಂಕಷ್ಟ ಬಂದಿದೆ. 15 ದಿನಗಳಿಂದ ತುಂಗಭದ್ರಾ ನದಿ ಪಾತ್ರದಲ್ಲಿ ನೀರು ಬತ್ತಿ ಹೋಗಿದೆ. ಮೀನುಗಳು ಸತ್ತು ದುರ್ವಾಸನೆ ಬರುತ್ತಿದೆ. ನೀರಿನ ಕೊರತೆಯಿಂದ ಮೊಸಳೆಗಳು ನದಿದಂಡೆಯಲ್ಲಿರುವ ಗ್ರಾಮಗಳಿಗೆ ನುಗ್ಗುತ್ತಿವೆ. ಜನರು ನದಿ ಕಲುಷಿತ ನೀರು ಕುಡಿದು ಸಾಂಕ್ರಾಮಿಕ ರೋಗ ಹಾಗೂ ಚರ್ಮ ರೋಗಕ್ಕೆ ತುತ್ತಾಗುತ್ತಿದ್ದಾರೆ. ಪರಿಸ್ಥಿತಿಯು ಇಷ್ಟೊಂದು ಗಂಭೀರವಾಗಿ ಇರಬೇಕಾದರೆ ನೀರಾವರಿ ಇಲಾಖೆ ಅಧಿಕಾರಿಗಳು ಒಮ್ಮೆಯೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಅವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದರು.

ರೈತ ಮುಖಂಡ ಗೌಡ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರು ಕುಡಿಯುವ ನೀರಿಗಾಗಿ ಪ್ರತಿಭಟನೆ ಮಾಡುವ ದುಃಸ್ಥಿತಿ ಬಂದಿದೆ. ತುಂಗಭದ್ರಾ ನದಿ ಪಾತ್ರದ ಕಂಪ್ಲಿ ನಗರದಿಂದ ಹಿಡಿದು ಸೂಗೂರು, ಸಿರುಗುಪ್ಪ, ಹಾಗೂ ಮಂತ್ರಾಲಯದ ವರೆಗೆ ತುಂಗಭದ್ರಾ ನದಿ ಬತ್ತಿ ಹೋಗಿದೆ. ಕುಡಿಯುವ ನೀರಿಗಾಗಿ ನದಿ ಅವಲಂಬಿತ ಗ್ರಾಮದ ಜನರ ಸ್ಥಿತಿ ಶೋಚನೀಯವಾಗಿದೆ ಎಂದರು.

15 ದಿನಗಳ ಹಿಂದೆ ರೈತರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ

ತುಂಗಭದ್ರಾ ನದಿಯಲ್ಲಿ ನೀರು ಹರಿಸುವಂತೆ 15 ದಿನಗಳ ಹಿಂದೆ ರೈತರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಅಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆಯ ನೂತನ ಮುಖ್ಯ ಅಭಿಯಂತರ ಮನೋಜ್ ಕುಮಾರ್ ಮಾತನಾಡಿ, ತುಂಗಭದ್ರಾ ಜಲಾಶಯದ 75 ವರ್ಷದ ಇತಿಹಾಸದಲ್ಲಿ ಪ್ರಸಕ್ತ ಸಾಲಿನಲ್ಲಿ ಬರಗಾಲ ಅತ್ಯಂತ ಭೀಕರವಾಗಿದೆ. ನಾವು ಜುಲೈ ತಿಂಗಳಲ್ಲಿ 55 ಟಿಎಂಸಿ ಅಷ್ಟು ನೀರು ಸಂಗ್ರಹವಾಗಬಹುದು ಎಂದು ಅಂದಾಜಿಸಿದ್ದೆವು. ಆದರೆ 5 ಟಿಎಂಸಿ ನೀರು ಮಾತ್ರ ಬಂತು. ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಜಲಾಶಯದಲ್ಲಿ 25 ಟಿಎಂಸಿಯಷ್ಟು ನೀರು ಮಾತ್ರ ಶೇಖರಣೆಯಾಗಿದೆ.

 ಈ ನೀರನ್ನು ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರ ರಾಜ್ಯಗಳು ಅನುಪಾತದಲ್ಲಿ ಹಂಚಿಕೊಳ್ಳಬೇಕು ಎಂಬ ನಿಯಮ ಇದೆ. ಈಗ ಜಲಾಶಯದಲ್ಲಿರುವ ನೀರನ್ನು ಬಿಡುವ ಅಧಿಕಾರ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಇಲ್ಲ. ಈ ಅಧಿಕಾರ ಕಲಬುರಗಿಯ ವಿಭಾಗೀಯ ಆಯುಕ್ತರಿಗೆ ಮಾತ್ರ ಇದೆ. ಹೀಗಾಗಿ ಕಲಬುರಗಿ ವಿಭಾಗೀಯ ಆಯುಕ್ತರಿಗೆ ವರದಿ ಕಳುಹಿಸುವುದಾಗಿ ಹೇಳಿದರು.

ಅಧೀಕ್ಷಕ ಅಭಿಯಂತರ ಮಲ್ಲಿಗವಾಡ್, ಕಾರ್ಯಪಾಲಕ ಅಭಿಯಂತರ ನಾಗನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರ ಬಸಪ್ಪ ಜಾನಕರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೋದಿ ದುರ್ಬಲ, ದುಷ್ಟರಕ್ಷಕ ಪ್ರಧಾನಿ: ಸಿದ್ದು ಕಿಡಿ
ಅನುಮತಿ ಬಳಿಕ ಶರಾವತಿ ಪಂಪ್ಡ್‌ ಸ್ಟೋರೇಜ್‌ ಶುರು : ಡಿಕೆ