ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಕಬ್ಬು ಬೆಳೆಗಾರರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಹೋರಾಟಕ್ಕೆ ಮಹಾಲಿಂಗಪುರದಲ್ಲಿಯೂ ರೈತರು ಒಗ್ಗಟ್ಟಿನ ಬೆಂಬಲ ವ್ಯಕ್ತಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ, ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವ ಮೂಲಕ ಬೆಳೆಗಾರರ ಬದುಕಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದಿದ್ದರೆ ಕೃಷಿ ಕ್ಷೇತ್ರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಕಬ್ಬು ಬೆಳೆಯಲು ಬೀಜ, ಗೊಬ್ಬರ, ಔಷಧ, ಕಾರ್ಮಿಕರ ಕೂಲಿ, ನೀರಾವರಿ ಹಾಗೂ ಸಾಗಣೆ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿವೆ. ಆದರೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕಬ್ಬಿನ ಬೆಲೆ ನಿಗದಿಯಾಗದಿರುವುದು ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ೨೦೨೫-೨೬ನೇ ಸಾಲಿನಲ್ಲಿ ಕಟಾವು ಮಾಡಿರುವ ಕಬ್ಬಿಗೆ ಸಂಬಂಧಿಸಿದ ಬಾಕಿ ಹಣದ ಎರಡನೇ ಕಂತಿನ ಪ್ರತಿ ಟನ್ಗೆ ₹೩೦೦ ಮೊತ್ತವನ್ನು ತುರ್ತಾಗಿ ಪಾವತಿಸಬೇಕು. ೨೦೨೬-೨೭ನೇ ಸಾಲಿನ ಕಬ್ಬು ಕಟಾವು ಹಂಗಾಮಿಗೆ ಪ್ರತಿ ಟನ್ಗೆ ₹೫,೫೦೦ ಬೆಲೆ ಘೋಷಿಸಬೇಕು. ರೈತರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕೆ.ಜಿ.ಗೆ ₹೬೦ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ರೈತರು ಮುಂದಿಟ್ಟರು. ಪುರಸಭೆ ವ್ಯವಸ್ಥಾಪಕ ಎಸ್.ಎನ್.ಪಾಟೀಲ ಅವರಿಗೆ ರೈತರ ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು, ಸಂಬಂಧಿಸಿದ ಇಲಾಖೆಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಒತ್ತಾಯಿಸಲಾಯಿತು.ಈ ಸಂದರ್ಭದಲ್ಲಿ ಲಕ್ಷ್ಮಣ ಬ್ಯಾಳಿ, ಹೊನ್ನಪ್ಪ ಬಿರಡಿ, ಭೀಮಶಿ ಕರಿಗೌಡರ, ಯಲ್ಲಪ್ಪ ಮೂಸಿ, ಚನ್ನಪ್ಪ ಇಟ್ನಾಳ, ಹಣಮಂತ ಪೂಜಾರಿ, ಲಕ್ಷ್ಮಣ ನಾಯಕ, ಲಕ್ಕಪ್ಪ ಢವಳೇಶ್ವರ, ಶ್ರೀಕಾಂತ ಪಾಟೀಲ, ಸತ್ಯಪ್ಪ ನೇಸೂರ, ಅಕ್ಷಯ ಕರಡಿ, ಪ್ರಕಾಶ ಮುಗಳಕೋಡ, ಪ್ರಕಾಶ ಕವಟಿ, ಬಸಪ್ಪ ಮುಗಳಕೋಡ, ಆನಂದ ಶಿರಗುಪ್ಪಿ, ಪ್ರಕಾಶ ಮರೆಗುದ್ದಿ ಸೇರಿದಂತೆ ಅನೇಕ ಗ್ರಾಮಗಳ ರೈತ ಮುಖಂಡರು ಭಾಗವಹಿಸಿದ್ದರು