ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದನ್ನು ಖಂಡಿಸಿ ತಾಲೂಕು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಕೃಷ್ಣರಾಜ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕಾಲ್ನಡಿಗೆಯ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ವಿ.ಎಸ್. ನವೀನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಶಿವಮೊಗ್ಗ ನಗರದಲ್ಲಿ ಸಿ.ಇ.ಟಿ ಪರೀಕ್ಷೆ ಪ್ರವೇಶ ಸಂದರ್ಭದಲ್ಲಿ ವಿದ್ಯಾರ್ಥಿಗೆ ಜನಿವಾರ ತುಂಡರಿಸಿರುವ ವಿಚಾರ ಮತ್ತು ಬೀದರ್ ಜಿಲ್ಲೆಯಲ್ಲೂ ಕೂಡ ವಿದ್ಯಾರ್ಥಿಗೆ ಜನಿವಾರ ತೆಗೆದು ಬರಬೇಕೆಂದು ತಾಕಿತ್ತು ಮಾಡಿದ್ದು, ಇದರಿಂದ ಬ್ರಾಹ್ಮಣ ಸಮುದಾಯದ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಂದಿದ್ದು ರಾಜ್ಯ ಸರ್ಕಾರದ ಅಧಿಕಾರಿಗಳ ನಡೆ ಖಂಡಿಸಿ ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿ ತಾಲೂಕು ಬ್ರಾಹ್ಮಣ ಸಂಘದಿಂದ ಸಮುದಾಯದವರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಸಂಘದ ಕಾರ್ಯದರ್ಶಿ ಎ.ಎಸ್. ವೆಂಕಟರಮಣ ಮಾತನಾಡಿ, ಗುರುವಾರದಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮತ್ತು ಬೀದರ್ ಜಿಲ್ಲೆಯ ಸಿ.ಇ.ಟಿ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದ್ದು, ಬ್ರಾಹ್ಮಣ ಜನಾಂಗದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದಂತಹ ಸಂದರ್ಭದಲ್ಲಿ, ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಪರಿಶೀಲಿಸಿ ಪರೀಕ್ಷಾ ಕೊಠಡಿಗೆ ಕಳುಹಿಸಿ ಕೊಡುವಂತಹ ಪ್ರಕ್ರಿಯೆ ಜಾರಿಯಲ್ಲಿದ್ದು, ಈ ವಿದ್ಯಾರ್ಥಿಗಳನ್ನೂ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ ಸೂಚಿಸಿದ್ದಾರೆ.ಜನಿವಾರವು ನಮ್ಮ ಧಾರ್ಮಿಕ ಸಂಕೇತವಾಗಿದ್ದು ಅದನ್ನು ಯಾವುದೇ ಕಾರಣಕ್ಕೂ ತೆಗೆಯವಂತಿಲ್ಲ ಅಥವಾ ವಿಸರ್ಜಿಸುವಂತಿಲ್ಲ. ಜನಿವಾರ ಎನ್ನುವುದು ಬ್ರಾಹ್ಮಣರ ಅಸ್ಮಿತೆ, ಬ್ರಾಹ್ಮಣರ ಕುಟುಂಬದ ಪ್ರತಿಯೊಬ್ಬ ಗಂಡು ಮಗುವಿಗೆ ೮ ವರ್ಷದಲ್ಲಿ ಬ್ರಹೋಪದೇಶ ಮಾಡಿ ಗುರುಹಿರಿಯರು ಸಮಾಜವನ್ನು ರಕ್ಷಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವಂತೆ ಗಾಯತ್ರಿ ಮಂತ್ರದ ಮೂಲಕ ಉಪದೇಶ ಮಾಡಿರುತ್ತಾರೆ. ಈ ಕಾರಣದಿಂದಾಗಿ ಸದರಿ ವಿದ್ಯಾರ್ಥಿಗಳು ಅಧಿಕಾರಿಗಳು ನೀಡಿದ ಆದೇಶವನ್ನು ನಿರಾಕರಿಸಿರುತ್ತಾರೆ. ಪ್ರವೇಶಾತಿ ಪತ್ರದಲ್ಲಿನ ಸೂಚನಾಂಕಣದಲ್ಲಿ ಧರಿಸಬಾರದೆಂಬ ನಿಯಮವೇನೂ ಇರುವುದಿಲ್ಲ. ಆದರೂ ಅಧಿಕಾರಿಗಳು ಜನಿವಾರ ಉದ್ಧಟತನದಿಂದ ವರ್ತಿಸಿ, ವಿದ್ಯಾರ್ಥಿಗಳ ಮನವಿಯನ್ನು ತಿರಸ್ಕರಿಸಿ, ಬಲವಂತವಾಗಿ ಜನಿವಾರವನ್ನು ತಾವೇ ಕತ್ತರಿಸಿ ಕಸದ ಬುಟ್ಟಿಗೆ ಹಾಕಿರುತ್ತಾರೆ ಎಂದು ಕಿಡಿಕಾರಿದರು.
ಇದೇ ರೀತಿಯಲ್ಲಿ ಬೀದರ್‌ನಲ್ಲಿಯೂ ಸಹ ಘಟನೆ ನಡೆದಿದ್ದು, ಸದರಿ ವಿದ್ಯಾರ್ಥಿಯು ಜನಿವಾರ ತೆಗೆಯಲು ನಿರಾಕರಿಸಿದ್ದಕ್ಕೆ, ಪರೀಕ್ಷಾ ಕೇಂದ್ರಕ್ಕೆ ಬಿಡದ ಕಾರಣ ಪರೀಕ್ಷೆಯಿಂದ ವಂಚಿತನಾಗಿರುತ್ತಾನೆ ಮತ್ತು ಭಾರತದ ಪ್ರತಿಯೊಂದ ಜಾತಿ ಜನಾಂಗದ ಆಚರಣೆ ಸ್ವಾತಂತ್ರ್ಯತೆಗೆ ಸಮಾನ ಹಕ್ಕಿದೆ ಆದರೆ ಶಿವಮೊಗ್ಗ ಬೀದರ್ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಜನಿವಾರ ಧರಿಸಿ ಬಂದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ನೀಡಿದ ಕಿರುಕುಳ ಜನಿವಾರ ಕಸಿದಿರುವ ವಿಚಾರ ಇಡೀ ಬ್ರಾಹ್ಮಣ ಜನಾಂಗದ ಆಚರಣೆ ನಂಬಿಕೆ ಘನತೆಗೆ ಧಕ್ಕೆ ಬಂದಿದ್ದು ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮಾಜದಲ್ಲಿ ಅರ್ಚಕ ಪೌರೋಹಿತ್ಯ, ಅಡುಗೆ ವೃತ್ತಿ ಮೇಲೆ ಅವಲಂಬಿತವಾಗಿರುವ ಬ್ರಾಹ್ಮಣರಿಗೆ ಮನೆಯಿಂದ ಹೊರಬಂದರೆ ಇನ್ನೇನಾದರೂ ತೊಂದರೆ ಕಾದಿದೆಯೇ ಎನ್ನುವ ಭಯ ಕಾಡುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಶಿಕ್ಷಣ ಇಲಾಖೆ ಈ ಕೂಡಲೇ ಕಾರಣರಾದ ಸರ್ಕಾರಿ ಅಧಿಕಾರಿಗಳನ್ನ ಬಂಧಿಸಿ ಕ್ರಮಕೈಗೊಂಡು ಕೆಲಸದಿಂದ ವಜಾಗೊಳಿಸಬೇಕಿದೆ. ಸಮಾಜದಲ್ಲಿ ಶಾಂತಿ ಕದಡುವ ದುಷ್ಕೃತ್ಯಕ್ಕೆ ಕಾರಣರಾಗುವ ಕಿಡಿಗೇಡಿಗಳಿಗೆ ಇದೊಂದು ಎಚ್ಚರಿಕೆಯ ಪಾಠವಾಗಬೇಕಿದೆ ಎಂದರು. ರಾಜ್ಯ ಸರ್ಕಾರ ಒಂದು ವೇಳೆ ನಿರ್ಲಕ್ಷಿಸಿದರೆ ರಾಜ್ಯಾದ್ಯಂತ ಉಘ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ರಾಮಚಂದ್ರ, ಪುರಸಭಾ ಮಾಜಿ ಅಧ್ಯಕ್ಷೆ ಬನಶಂಕರಿ ರಘು, ಮಹಿಳಾ ಸಂಘದ ಅಧ್ಯಕ್ಷೆ ಸಂಧ್ಯಾ ಶಾಸ್ತ್ರಿ, ಲಕ್ಷ್ಮಿ ಸುಬ್ರಮಣ್ಯ, ವಿಶ್ವನಾಥ್, ಜಿ.ಆರ್. ಮೋಹನ್, ಸಿ.ಟಿ.ಕುಮಾರಸ್ವಾಮಿ, ಶ್ರೀನಿವಾಸ್, ಮಂಜು, ಹೆಬ್ಬಾರ್, ಹಿರಿಯಣ್ಣ, ದತ್ತ, ಉಪಾಧ್ಯಾಯ, ಮಂಜು, ಈಶ, ವೆಂಕಟೇಶ್, ರಘು ಶಾಸ್ತ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.