ಎಸ್‌ಐಆರ್‌ ರದ್ದುಗೊಳಿಸಲು ಒತ್ತಾಯ, ಹುಬ್ಬಳ್ಳಿಯಲ್ಲಿ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : May 18, 2026, 02:15 AM IST
ಎಸ್‌ಐಆರ್‌ ರದ್ದುಗೊಳಿಸಲು ಒತ್ತಾಯಿಸಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದಿಂದ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದ ವರೆಗೆ ವಿವಿಧ ಸಂಘಟನೆಗಳ ಮುಖಂಡರಿಂದ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.) ರದ್ದುಪಡಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಭಾನುವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಜಾಥಾ ನಡೆಸಿದರು.

ಹುಬ್ಬಳ್ಳಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.) ರದ್ದುಪಡಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಭಾನುವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಜಾಥಾ ನಡೆಸಿದರು.

ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು, ಸಂವಿಧಾ‌ನ ಪ್ರಜಾಪ್ರಭುತ್ವ, ಜನವಿರೋಧಿ ಎಸ್ಐಆರ್ ರದ್ದುಪಡಿಸಬೇಕು ಎಂದು ಘೋಷಣೆ ಕೂಗಿದರು. ಚೆನ್ನಮ್ಮ‌ ವೃತ್ತದಿಂದ ಆರಂಭವಾದ ಜಾಥಾ ಮೇ ಸಾಹಿತ್ಯ ಮೇಳವನ್ನು ಆಯೋಜಿಸಿರುವ ಆರ್.ಎನ್. ಶೆಟ್ಟಿ‌ ಕಲ್ಯಾಣ ಮಂಟಪದ ವರೆಗೆ ನಡೆಯಿತು.

ಜಾಥಾಕ್ಕೆ ಚಾಲನೆ ನೀಡಿದ ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, ದೇಶದಲ್ಲಿ ಮುಸ್ಲಿಮರನ್ನು ಮಾತ್ರ ಮತದಾನದಿಂದ‌ ದೂರ ಇಡುತ್ತಿಲ್ಲ. ಮಹಿಳೆಯರು, ದಲಿತರು, ಬಡವರು, ಅಲ್ಪಸಂಖ್ಯಾತರನ್ನು ಹೊರಗಿಡಲಾಗುತ್ತಿದೆ. ಎಡಪಂಥೀಯ ವಿಚಾರಧಾರೆ ಇರುವವರನ್ನು ಹೊರಗಿಡುವ ಹುನ್ನಾರ ಇದರ ಹಿಂದೆ ಅಡಗಿದೆ. ಎಸ್ಐಆರ್ ರದ್ದುಪಡಿಸುವ ವರೆಗೂ ಹೋರಾಟ ಮಾಡಲಾಗುವುದು ಎಂದರು.

ಲೇಖಕಿ ಸವಿತಾ ಬನ್ನಾಡಿ‌ ಮಾತನಾಡಿ, ಮೃತಪಟ್ಟವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯದೆ, ಎಸ್.ಐ.ಆರ್. ಹೆಸರಿನಲ್ಲಿ ಬದುಕಿರುವವರ ಹೆಸರು ತೆಗೆಯಲಾಗುತ್ತಿದೆ. ಆ ಮೂಲಕ‌ ಮತದಾನದ ಹಕ್ಕು ನಿರಾಕರಿಸಲಾಗುತ್ತಿರುವುದು ಖಂಡನೀಯ. ಎಸ್.ಐ.ಆರ್. ನಂತರ ಬ್ಯಾಂಕ್ ಖಾತೆ ಸಹ ರದ್ದುಪಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ‌. ಈ ಪ್ರಕ್ರಿಯೆ ಮೂಲಕ ಜನರ ಹಕ್ಕುಗಳನ್ನು‌ ಕಿತ್ತುಕೊಳ್ಳಲಾಗುತ್ತಿದೆ. ಇದು ಹಿಟ್ಲರ್ ಮಾಡಿದ್ದಕ್ಕಿಂತಲೂ ಕ್ರೂರ ಕೃತ್ಯ. ಎಸ್.ಐ.ಆರ್. ರದ್ದುಪಡಿಸಬೇಕು. ಈ ಹಿಂದಿನಂತೆ ಯಾವುದೇ ಷರತ್ತುಗಳಿಲ್ಲದೆ ಮತದಾನದ ಹಕ್ಕು‌ ನೀಡಬೇಕು ಎಂದರು.ಶ್ರೀಪಾದ್ ಹೆಗಡೆ ಮಾತನಾಡಿ, ಎಸ್.ಐ.ಆರ್. ಸಂವಿಧಾನ ವಿರೋಧಿಯಾಗಿದೆ. ರಾಜಕೀಯ ಪಕ್ಷಗಳು ತಮಗೆ ಬೇಕಾದ ಮತದಾರರನ್ನು ಇಟ್ಟುಕೊಂಡು ಬೇಡವಾದವರನ್ನು ಕಿತ್ತು ಹಾಕುತ್ತಿದ್ದಾರೆ. ಇದರಿಂದ ಸಾಮಾಜಿಕವಾಗಿ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಜನರನ್ನು ಸಾಮಾಜಿಕವಾಗಿ ಒಡೆಯಲಾಗುತ್ತಿದೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನದಿಂದ ದೂರ ಉಳಿಯುತ್ತಾರೆ. ಎಲ್ಲರೂ ಮೌನ ಮುರಿದು ಇದನ್ನು ವಿರೋಧಿಸಬೇಕು ಎಂದರು.

ವಿಮರ್ಶಕ ರಂಜಾನ್ ದರ್ಗಾ ಮಾತನಾಡಿ, ಬಡವರು, ನಿರಕ್ಷರಸ್ಥರು, ಎಸ್.ಸಿ., ಎಸ್.ಟಿ., ಅಲ್ಪಸಂಖ್ಯಾತರನ್ನು ಚುನಾವಣೆಯಿಂದ ಹೊರಗಿಡುವ ಹುನ್ನಾರ ನಡೆಯುತ್ತದೆ. ಇದು ಫ್ಯಾಸಿಸ್ಟ್ ಧೋರಣೆಯಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾದರೂ ರಾಜ್ಯ ಸರ್ಕಾರ ಮೌನ‌ ವಹಿಸಿದೆ‌. ಸರ್ಕಾರವೂ ಇದಕ್ಕೆ ಬೆಂಬಲ‌ ನೀಡಬೇಕು ಎಂದರು.

ವಿಪ ಮಾಜಿ ಸದಸ್ಯ ಪ್ರೊ. ಐ.ಜಿ. ಸನದಿ, ಅಶೋಕ ಶೆಟ್ಟರ್, ಬಸವರಾಜ ಸೂಳಿಭಾವಿ, ಸಿದ್ದು ತೇಜಿ, ಗುರುನಾಥ ಉಳ್ಳಿಕಾಶಿ, ಸ್ವಾತಿ ಸುಂದರೇಶ್, ಕೆ. ಪ್ರಕಾಶ್, ನೂರ್ ಶ್ರೀಧರ್, ಮಾವಳ್ಳಿ ಶಂಕರ್, ಪ್ರಿಯಾಂಕ ಮಾವಿನಕರ, ಶಿವಸುಂದರ್, ಮೂಡ್ನಾಕೂಡು ಚಿನ್ನಸ್ವಾಮಿ, ಸುರೇಶ ಅಂಗಡಿ, ಶರೀಫ ಬಿಳೆಯಲಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಸಿದ್ದರಾಮಯ್ಯರದ್ದು ಮೂರು ವರ್ಷದ ಮಗುವಿನ ತುಂಟಾಟಿಕೆ
ಆ.2ರಂದು ಬಳ್ಳಾರಿಯಲ್ಲಿ ಸ್ಟೀಲ್ ಸಿಟಿ ರನ್; ಡಾ.ತಿಪ್ಪಾರೆಡ್ಡಿ