ಕನ್ನಡಪ್ರಭ ವಾರ್ತೆ ಶಿರಾ
ಭಾನುವಾರ ನಗರದ ಸೇವಾ ಸದನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಾಸಕ ಟಿ.ಬಿ. ಜಯಚಂದ್ರ ಅವರು ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಶಿರಾ ತಾಲೂಕಿಗೆ ನೀರು ಹರಿಸುವ ವಿಚಾರದಲ್ಲಿ ಜನರಿಗೆ ಸುಳ್ಳು ಭರವಸೆ ನೀಡುತ್ತಾ ದಿಕ್ಕು ತಪ್ಪಿಸುವ ರಾಜಕಾರಣ ಮಾಡುತ್ತಿದ್ದಾರೆ. ಅವರ ಮಾತು ನಂಬಿಕೊಂಡು ಹೋದರೆ ಇನ್ನೂ ಹತ್ತು ವರ್ಷ ಕಳೆದರೂ ಶಿರಾ ತಾಲೂಕಿಗೆ ನೀರು ಬರುವುದಿಲ್ಲ ಎಂದು ಅವರು ಆರೋಪಿಸಿದರು.ಹಿರಿಯೂರು ತಾಲೂಕಿಗೆ ಈಗಾಗಲೇ ಭದ್ರಾ ಯೋಜನೆಯಿಂದ ೭ ಟಿಎಂಸಿ ನೀರು ಹರಿಸಲಾಗುತ್ತಿದೆ. ಆದರೆ ಶಿರಾ ತಾಲೂಕಿಗೆ ಅಪ್ಪರ್ ಭದ್ರಾ ಯೋಜನೆಯಡಿ ೨.೫ ಟಿಎಂಸಿ ಹೆಚ್ಚುವರಿ ನೀರು ತರುತ್ತೇವೆ ಎಂದು ಭರವಸೆ ನೀಡಿದ್ದರೂ ಇದುವರೆಗೂ ನೀರು ಹರಿದಿಲ್ಲ. ಕಾಂಗ್ರೆಸ್ ಸರಕಾರ ನೀಡಿದ ಭರವಸೆಗಳು ಕೇವಲ ಘೋಷಣೆಗಳಾಗಿಯೇ ಉಳಿದಿವೆ. ಶಿರಾ ತಾಲೂಕಿನ ರೈತರು ನೀರು ಬರುತ್ತದೆ ಎಂಬ ಭರವಸೆಯೊಂದಿಗೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಡಿಕೆ ತೋಟಗಳನ್ನು ಬೆಳೆಸಿದ್ದಾರೆ. ತ್ರಿವೇಣಿ ಸಂಗಮದ ಕನಸು ತೋರಿಸಿ ಶಾಸಕ ಟಿ.ಬಿ.ಜಯಚಂದ್ರ ಅವರು ರೈತರನ್ನು ನಂಬಿಸಿದ್ದಾರೆ. ಆದರೆ ಇಂದಿಗೂ ನೀರಿನ ನಿರೀಕ್ಷೆಯಲ್ಲಿಯೇ ರೈತರು ದಿನ ಕಳೆಯುವಂತಾಗಿದೆ. ಯೋಜನೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರವನ್ನೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿರಾ ಜನತೆಗೆ ಇಲ್ಲಿಯವರೆಗೂ ಜಯಚಂದ್ರ ನೀಡಿದ ಭರವಸೆಗಳಾದ ಸ್ಟೇಡಿಯಂ ಕಾಮಗಾರಿ ಪೂರ್ಣಗೊಂಡಿಲ್ಲ, ವಧಾಗಾರ ಉದ್ಘಾಟನೆಯಾಗಿಲ್ಲ. ಥೀಮ್ ಪಾರ್ಕ್ ಅನುಷ್ಠಾನಗೊಂಡಿಲ್ಲ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಗುಂಪು ಮನೆ ಯೋಜನೆಗಳು ಇನ್ನೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಈ ಯೋಜನೆಗಳಿಗಾಗಿ ಬಿಡುಗಡೆಯಾದ ಹಣ ಎಷ್ಟು? ಎಂಬುದನ್ನು ಶಾಸಕರು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಕಾರ್ಯದರ್ಶಿ ಕುಮಾರ್ ಮಾಸ್ಟರ್, ರೈತ ಮೋರ್ಚಾ ಅಧ್ಯಕ್ಷ ಮದ್ದೆವಳ್ಳಿ ರಾಮಕೃಷ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಹನುಮಂತನಾಯ್ಕ, ಬೊಪ್ಪರಾಯಪ್ಪ, ಪುರುಷೋತ್ತಮ್, ಮುನಿರಾಜು, ಬಾಬಣ್ಣ, ನಾಗರಾಜ್ ಗೌಡ, ಶಿವರಾಜು, ನಾಗಣ್ಣ, ಮೂಗನಹಳ್ಳಿ ರಾಮು, ಪದ್ಮಾ ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.