ಹುಬ್ಬಳ್ಳಿ:
ದೇಶದ ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅರ್ಥಕ್ರಾಂತಿ ರಾಷ್ಟ್ರೀಯ ಸಾಕ್ಷರತಾ ಮಂಚ, ಪೂನಾ ರಾಷ್ಟ್ರೀಯ ಹಿರಿಯ ನಾಗರಿಕರ ಜೀವನಗೌರವ ಅಭಿಯಾನ ಹಾಗೂ ರಾಜ್ಯ ಹಿರಿಯ ನಾಗರಿಕರ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಇಲ್ಲಿನ ನೆಹರು ಮೈದಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡಿತು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಒಟ್ಟು 20 ಕೋಟಿ ಹಿರಿಯ ನಾಗರಿಕರಿದ್ದು, ರಾಜ್ಯದಲ್ಲಿ ಒಟ್ಟು 85 ಲಕ್ಷ ಜನ ಇದ್ದಾರೆ. ಬಹುತೇಕ ಹಿರಿಯ ನಾಗರಿಕರು ಆರ್ಥಿಕವಾಗಿ ದುರ್ಬಲರಾಗಿದ್ದು, ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅನೇಕರು ಕುಟುಂಬ ಸದಸ್ಯರನ್ನು ಕಳೆದುಕೊಂಡು ಮತ್ತು ನಿರ್ಲಕ್ಷ್ಯಕ್ಕೆ ಒಳಪಟ್ಟು ಅನಾಥರಾಗಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ಘೋಷಿಸಬೇಕು. ಆರ್ಥಿಕವಾಗಿ ದುರ್ಬಲರಾಗಿರುವ ಎಲ್ಲ ಹಿರಿಯ ನಾಗರಿಕರಿಗೆ ಮಾಸಿಕ ₹10 ಸಾವಿರ ಗೌರವಧನ ನೀಡಬೇಕು. ರಾಷ್ಟ್ರದ ಜನಸಂಖ್ಯೆಯ ಶೇ. 15ರಷ್ಟು ಹಿರಿಯ ನಾಗರಿಕರಿಗೆ ಸೌಲಭ್ಯ ಕಲ್ಪಿಸಲು ಹಾಗೂ ರಕ್ಷಣೆ ಒದಗಿಸಲು ಪ್ರತ್ಯೇಕ ಸಚಿವಾಲಯ ಮತ್ತು ಬಜೆಟ್ ಮಂಡಿಸಬೇಕು. ತಡೆ ಹಿಡಿದ ಹಿರಿಯ ನಾಗರಿಕರ ರೈಲ್ವೆ ರಿಯಾಯಿತಿ ತಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಿದರು.ವೃದ್ಧಾಪ್ಯ ವೇತನವನ್ನು ₹5 ಸಾವಿರಕ್ಕೆ ಹೆಚ್ಚಿಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು ₹10 ಸಾವಿರ ವೃದ್ಧಾಪ್ಯ ವೇತನ ನೀಡುವುದು, ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಬೇಕು. ನಿವೃತ್ತ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ 2ನೇ ಹಂತವನ್ನು ಸಂಪೂರ್ಣ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ನಂತರ ತಹಸೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ, ಉಪಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಧರಣೇಂದ್ರ ಜವಳಿ, ಬಣ್ಣಂಜೆ, ಡಿ.ಸಿ. ಪಾಟೀಲ, ಬಿ.ಎ. ವಸ್ತ್ರದ, ಸಿ.ಎಂ. ವರ್ಣೇಕರ, ಎಂ.ಪಿ. ಕುಂಬಾರ ಸೇರಿದಂತೆ ಹಲವರಿದ್ದರು.