ಹೊಸಪೇಟೆ: ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆ ವಾಪಸಿಗೆ ಆಗ್ರಹಿಸಿ ಬುಧವಾರ ಸಿಐಟಿಯು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮುಖಂಡ ಭಾಸ್ಕರ್‌ರೆಡ್ಡಿ ಮಾತನಾಡಿ, ಈಗಿರುವ ೨೯ ಕಾರ್ಮಿಕ ಕಾನೂನುಗಳನ್ನು ಬದಲಿಸಿ ೨೦೧೯ರಲ್ಲಿ ಸಂಸತ್ತಿನಲ್ಲಿ ನಾಲ್ಕು ಕಾರ್ಮಿಕ ಸಂಹಿತೆ ಹೊಸ ಕಾನೂನನ್ನು ಮಾಡಲಾಗಿದೆ. ಈ ನಾಲ್ಕು ಕಾರ್ಮಿಕ ಸಂಹಿತೆ ಜಾರಿಗೆ ಪ್ರಯತ್ನಿಸುತ್ತಿದ್ದು, ಹಿಂಬಾಗಲಿನಿಂದ ರಾಜ್ಯ ಸರ್ಕಾರಗಳ ಮುಖಾಂತರ ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಪ್ರತಿ ರಾಜ್ಯಗಳಿಗೆ ಉನ್ನತ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿದೆ. ಕರ್ನಾಟಕ ಸರ್ಕಾರ ಇದನ್ನು ಜಾರಿಗೊಳಿಸಲು ಉತ್ಸುಕತೆ ತೋರಿಸಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖಂಡರಾದ ಮರಡಿ ಜಂಬಯ್ಯನಾಯಕ, ಕೆ. ನಾಗರತ್ನಮ್ಮ, ಯಲ್ಲಲಿಂಗ, ಕೆ.ಎಂ. ಸ್ವಪ್ನಾ, ಎಲ್. ಮಂಜುನಾಥ, ಕೆ.ಎಂ. ಸಂತೋಷ್, ಇ. ಮಂಜುನಾಥ, ವಿ. ಸ್ವಾಮಿ, ಶಂಕುತಲಮ್ಮ, ಪವನ್ ಕುಮಾರ್ ಇತರರಿದ್ದರು.
ಪ್ರತಿಭಟನೆ ಮೊಟಕುಗೊಳಿಸಿ ಸ್ಥಳ ಖಾಲಿ ಮಾಡುವಂತೆ ಪೊಲೀಸರು ಒತ್ತಾಯಿಸಿದರು. ಇದಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪೊಲೀಸ್ ಠಾಣೆಯತ್ತ ತೆರಳಿದರು.ಹೂವಿನಹಡಗಲಿಯಲ್ಲಿ ಪ್ರತಿಭಟನೆ:ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾನಾ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೂವಿನಹಡಗಲಿ ಪಟ್ಟಣದ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಫೆಡರೇಷನ್ ತಾಲೂಕು ಅಧ್ಯಕ್ಷೆ ಜಿ. ಜಯಲಕ್ಷ್ಮಿ ಮಾತನಾಡಿ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ₹25 ರಿಂದ ₹36 ಸಾವಿರ ವರೆಗೆ ವೇತನ ಹೆಚ್ಚಳ ಮಾಡುವ ಜತೆಗೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವಿವಿಧ ರಂಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಸಂಘಟಿತ ವಲಯಗಳ ಕಾರ್ಮಿಕರಿಗೆ, ಜೀವನ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.ಎಐಎಸ್ಎಫ್ ಸಂಚಾಲಕ ಬಸವರಾಜ ಸಂಶಿ, ಎನ್. ಮಂಜುಳಾ ಮಾತನಾಡಿದರು. ಸವಿತಾ ಹರವಿ ಇತರರು ತಹಸೀಲ್ದಾರ್ ಜಿ. ಸಂತೋಷಕುಮಾರ್ ಮತ್ತು ಸಿಡಿಪಿಒ ರಾಮನಗೌಡ ಅವರಿಗೆ ಮನವಿ ಸಲ್ಲಿಸಿದರು.