ಮದ್ದೂರು ನಗರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಕೆ.ಎಂ.ಉದಯ್

KannadaprabhaNewsNetwork |  
Published : Dec 14, 2025, 02:45 AM IST
13ಕೆಎಂಎನ್ ಡಿ21 | Kannada Prabha

ಸಾರಾಂಶ

ನಾಳೆ ದೆಹಲಿಯಲ್ಲಿ ಓಟ್ ಚೋರಿ ಬಗ್ಗೆ ಸಭೆ ನಡೆಯುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಸೇರಿದಂತೆ ಸಚಿವರು ಹಾಗೂ ಶಾಸಕರು ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ವಿಶೇಷತೆ ಏನು ಇಲ್ಲ. ಮುಖ್ಯಮಂತ್ರಿ ವಿಚಾರ ಬಗ್ಗೆಯೂ ಹೈಕಮಾಂಡ್ ಬಳಿ ತೆರಳಿ ಚರ್ಚೆಯೂ ನಡೆಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ನಗರವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.

ನಗರಸಭೆ ಕಚೇರಿಯ ನವೀಕರಣ ಹಾಗೂ ಹೆಚ್ಚುವರಿ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗೆ 2.20 ಕೋಟಿ ರು. ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ, ಮದ್ದೂರು ಪುರಸಭೆಯನ್ನು ಈಗಾಗಲೇ ರಾಜ್ಯ ಸರ್ಕಾರ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದೆ. ಹೀಗಾಗಿ ನಗರದ ಜೊತೆಗೆ 4 ಗ್ರಾಪಂಗಳು ಸಹ ಸೇರ್ಪಡೆಗೊಂಡಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿದೆ. ಹೀಗಾಗಿ ಹಳೇ ಕಟ್ಟಡವನ್ನು ನವೀಕರಣ ಹಾಗೂ ಹೆಚ್ಚುವರಿ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಗಿದೆ ಎಂದು ತಿಳಿಸಿದರು.

ನಗರಸಭೆ ಕಚೇರಿ ಪಕ್ಕದ ತೋಟಗಾರಿಕೆ ಇಲಾಖೆ ಜಾಗದಲ್ಲಿ ನೂತನವಾಗಿ ನಗರಸಭೆ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ. ಪೌರಾಡಳಿತ ಸಚಿವರಿಗೆ 10 ಕೋಟಿ ರು. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಕೆಲ ದಿನಗಳಲ್ಲೇ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ನಗರದ ಪೇಟೆ ಬೀದಿ ಅಗಲೀಕರಣಕ್ಕೂ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದೆ. ಅದಕ್ಕೂ ಮುನ್ನ ಹಳೇ ಬಸ್ ನಿಲ್ದಾಣದ ಬಳಿ ಹೂ, ಹಣ್ಣು ಹಾಗೂ ತರಕಾರಿ ಮಾರುಕಟ್ಟೆ ಸಂಕೀರ್ಣ, ಶಿವಪುರದಲ್ಲಿ ಮೀನು, ಕೋಳಿ ಹಾಗೂ ಮಾಂಸ ಮಾರುಕಟ್ಟೆ ಸಂಕೀರ್ಣ ಹಾಗೂ ನಗರದ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಅಧಿವೇಶನ ಮುಗಿದ ಬಳಿಕ ಸಚಿವರು, ಅಧಿಕಾರಿಗಳ ಸಭೆ ನಡೆಸಿ, ಅಗತ್ಯವಿರುವ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡಲಾಗುವುದಾಗಿ ಭರವಸೆ ನೀಡಿದ್ದಾರೆ ಎಂದರು.

ನಗರಸಭೆ ಪ್ರತಿ ವಾರ್ಡ್‌ನಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪ ಮತ್ತು ನೀರಿನ ಸಮಸ್ಯೆ ಸುಧಾರಣೆ, ಮುಂದಿನ ದಿನಗಳಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಹಂತ ಹಂತವಾಗಿ ವಿಸ್ತರಣೆ ಮಾಡಿ ಅತ್ಯಾಧುನಿಕ ಮಾದರಿಯಲ್ಲಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ವೇಳೆ ನಗರಸಭೆ ಪೌರಾಯುಕ್ತೆ ರಾಧಿಕಾ, ಮಾಜಿ ಅಧ್ಯಕ್ಷೆ ಕೋಕಿಲ ಅರುಣ್, ಸದಸ್ಯರಾದ ಸಚ್ಚಿನ್, ಸರ್ವಮಂಗಳ, ವನಿತಾ, ಮುಖಂಡರಾದ ಕೆ.ಎಂ.ರವಿ, ಅರುಣ್ ಕುಮಾರ್, ಎಂ.ಡಿ.ಮಹಾಲಿಂಗಯ್ಯ, ಸತೀಶ್, ಸಿದ್ದರಾಜು, ಕುಮಾರ್, ವ್ಯವಸ್ಥಾಪಕ ಶ್ರೀಧರ್, ಮುಖಂಡರು ಹಾಗೂ ಸಿಬ್ಬಂದಿ ಇದ್ದರು.

------------

ಡಿ.ಕೆ.ಶಿವಕುಮಾರ್ ಸದ್ಯದಲ್ಲೇ ಮುಖ್ಯಮಂತ್ರಿ: ಕೆ.ಎಂ.ಉದಯ್

ಮದ್ದೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದ್ಯದಲ್ಲೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಭವಿಷ್ಯ ನುಡಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ದೆಹಲಿಯಲ್ಲಿ ಓಟ್ ಚೋರಿ ಬಗ್ಗೆ ಸಭೆ ನಡೆಯುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಸೇರಿದಂತೆ ಸಚಿವರು ಹಾಗೂ ಶಾಸಕರು ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ವಿಶೇಷತೆ ಏನು ಇಲ್ಲ. ಮುಖ್ಯಮಂತ್ರಿ ವಿಚಾರ ಬಗ್ಗೆಯೂ ಹೈಕಮಾಂಡ್ ಬಳಿ ತೆರಳಿ ಚರ್ಚೆಯೂ ನಡೆಸುತ್ತಿಲ್ಲ. ನಾನು ನಾಳೆ ದೆಹಲಿಗೆ ತೆರಳುತ್ತಿಲ್ಲ. ಆದರೆ, ಮುಖ್ಯಮಂತ್ರಿ ಬದಲಾವಣೆ ಸದ್ಯದಲ್ಲೇ ಆಗಲಿದೆ. ಡಿಕೆಶಿ ಸಿಎಂ ಆಗಲಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ