ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಚಹಾ ಔಟ್‌ಲೆಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಚಹಾ ಔಟ್‌ಲೆಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಸ್ಪಷ್ಟಪಡಿಸಿದರು.
ಗ್ರಾಮೀಣ ಮಹಿಳೆಯರು ಕೈಯಿಂದ ತಯಾರಿಸಿದ ಡೋರ್ ಮ್ಯಾಟ್ ಹಾಗೂ ಪ್ರದರ್ಶನ ಪ್ರೇಮ್‌ಗಳನ್ನು ಮಾಲ್ಗುಡಿ ಅಮೃತ್ ಚಹಾ ಕೆಫೆಯ 89 ಔಟ್‌ಲೆಟ್‌ಗಳಲ್ಲಿ ಮಾರಾಟ ಮಾಡುವ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ(ಕೆಪೆಕ್)ದ ಕಚೇರಿ ಮುಂದೆ ಮಂಗಳವಾರ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಕೆಪೆಕ್‌ನ ಫಲಾನುಭವಿಯಾದ ಶ್ರೀಸಾನ್ವಿ ಬ್ರೀವ್ಡ್ ಆರೋಮಾ ಕಂಪನಿಯ ಮಾಲ್ಗುಡಿ ಅಮೃತ್ ಚಹಾದ 89 ಶಾಖೆಗಳಲ್ಲಿ ಗ್ರಾಮೀಣ ಮಹಿಳೆಯರು ಕೈಯಿಂದ ತಯಾರಿಸಿದ ಡೋರ್ ಮ್ಯಾಟ್ ಮತ್ತು ಪ್ರೇಮ್‌ಗಳ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಇದರಿಂದಾಗಿ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಹೆಚ್ಚಲಿದ್ದು, ಗುಣಮಟ್ಟದ ಉತ್ಪನ್ನಗಳೂ ಗ್ರಾಹಕರಿಗೆ ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ಮಹಿಳೆಯರಿಗೆ ಉದ್ಯೋಗ:
ನಿಗಮವು ಸರ್ಕಾರಿ ಉದ್ಯಮವಾಗಿದ್ದು, 1985 ರಿಂದ ತೆಂಗಿನ ನಾರಿನಿಂದ ತಯಾರಿಸಿದ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಗ್ರಾಮೀಣ ಭಾಗದ ಮಹಿಳೆಯರಿಗೆ ಅಧಿಕ ಉದ್ಯೋಗಾವಕಾಶ ಕಲ್ಪಿಸುತ್ತಿದೆ. ನಿಗಮವು 35 ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುತ್ತಿದೆ. ಜನ ನಾರಿನ ವಸ್ತುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಮಾರಾಟಕ್ಕೆ ಸಹಯೋಗ:
ನಿಗಮದ ಉತ್ಪನ್ನಗಳ ಮಾರಾಟ ಹೆಚ್ಚಿಸಲು ವೆಬ್‌ಸೈಟ್ ಸಿದ್ಧಪಡಿಸಿ ಖಾಸಗಿಯವರೊಂದಿಗೆ ಮಾರಾಟಕ್ಕೆ ಸಹಯೋಗ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಆಶಯದಂತೆ, ಸಣ್ಣ ಕೈಗಾರಿಕಾ ಸಚಿವರ ಮಾರ್ಗದರ್ಶನದಲ್ಲಿ ನಿಗಮದ ಅಧ್ಯಕ್ಷ ನಟರಾಜ್ ಜಾನಕಿರಾಮ್ ಮುಂದಾಳತ್ವದಲ್ಲಿ ಹಸ್ತಚಾಲಿತ ಮ್ಯಾಟ್ ಪ್ರೇಮ್ ಬಳಸಿ ಗ್ರಾಮೀಣ ಭಾಗದಲ್ಲಿ ಸುಮಾರು 700 ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಶಾಸಕ ಎಚ್.ವಿಶ್ವನಾಥ್ ಮಾತನಾಡಿ, ತೆಂಗಿನ ನಾರಿನ ಅಭಿವೃದ್ಧಿ ನಿಗಮವು ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಉತ್ತಮ ದಿನಬಳಕೆ ವಸ್ತುಗಳನ್ನು ತಯಾರಿಸುತ್ತಿದೆ. ಗ್ರಾಮೀಣ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಕೆಪೆಕ್ ಬಹಳಷ್ಟು ಶ್ರಮಿಸುತ್ತಿದೆ. ಮಹಿಳೆಯರು ಮತ್ತು ಯುವ ಜನರು ಇಂಥ ಉದ್ಯೋಗಗಳಲ್ಲಿ ತೊಡಗಿಕೊಳ್ಳುವುದರಿಂದ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು ಎಂದು ಸಲಹೆ ನೀಡಿದರು.
ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಅಧ್ಯಕ್ಷ ನಟರಾಜ್ ಜಾನಕಿರಾಮ್, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಡಾ। ಬಿ.ಸಿ.ಮುದ್ದು ಗಂಗಾಧರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.