ಮಂಗಳೂರು: ಮಾತಾ ಅಮೃತಾನಂದಮಯಿ ಕೋಟ್ಯಂತರ ಜನರಿಗೆ ಸಾಮಾಜಿಕ, ಶೈಕ್ಷಣಿಕ ಉದ್ದೇಶಗಳಿಗಾಗಿ ನೆರವನ್ನು ನೀಡಿದ್ದು, ಅಮ್ಮನವರು ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀನ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ವಿವಿಧ ರಾಜ್ಯಗಳಲ್ಲಿ 7 ಕ್ಯಾಂಪಸ್‌ಗಳು, ಅಮೃತ ವಿದ್ಯಾಲಯಗಳು ಮತ್ತು 75 ಕ್ಕೂ ಹೆಚ್ಚು ಸಂಸ್ಥೆಗಳ ಮೂಲಕ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಮೆಡಿಕಲ್ ಕಾಲೇಜಿನಲ್ಲಿ ಪ್ರತಿ ವರ್ಷ 8 ಲಕ್ಷ ಹೊರ ರೋಗಿಗಳಿಗೆ ಹಾಗೂ 50 ಸಾವಿರ ಒಳರೋಗಿಗಳಿಗೆ ಚಿಕಿತ್ಸೆ, ದೆಹಲಿಯ ಎನ್‌ಸಿಆರ್‌ನಲ್ಲಿ 2,600 ಹಾಸಿಗೆಗಳ ಅತಿ ದೊಡ್ಡ ಆಸ್ಪತ್ರೆಯ ನಿರ್ಮಾಣ, ಜಾರ್ಖಂಡ್‌ನ 169 ಬಡ ಮಕ್ಕಳಿಗೆ ಉಚಿತವಾಗಿ ಓಪನ್ ಹಾರ್ಟ್ ಸರ್ಜರಿ, ಬಡವರಿಗಾಗಿ ಸುಮಾರು 47 ಸಾವಿರ ಮನೆಗಳ ನಿರ್ಮಾಣ, 1 ಕೋಟಿಗೂ ಹೆಚ್ಚು ಜನರಿಗೆ ಅನ್ನದಾನ, 2,800 ಗ್ರಾಮಗಳ ಅಭಿವೃದ್ಧಿ, ಛತ್ತೀಸ್‌ಗಢದ ಆದಿವಾಸಿ ಗ್ರಾಮಗಳು ಸೇರಿದಂತೆ ಸುಮಾರು 1 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿದ ಕೀರ್ತಿ ಅಮ್ಮನದು ಎಂದರು.ಮಾತಾ ಅಮೃತಾನಂದಮಯಿ ದೇವಿ ಸಾಮಾನ್ಯ ಬಡ ಮೀನುಗಾರರ ಕುಟುಂಬದಲ್ಲಿ ಜನಿಸಿ, ಬಡತನದ ಕಾರಣದಿಂದಾಗಿ ಮನೆಗೆಲಸ ಮಾಡಲು ಶಾಲೆಯನ್ನು ಬಿಟ್ಟು, ಅವರು ಜಗತ್ತಿಗೆ ಜ್ಞಾನವನ್ನು ನೀಡುವ ‘ಜ್ಞಾನೇಶ್ವರಿ’ಯಾಗಿ ಬೆಳೆದಿದ್ದಾರೆ. ಆಧ್ಯಾತ್ಮಿಕದ ಜೊತೆಗೆ ಆಧುನಿಕವಾಗಿಯೂ ಜನತೆಗೆ ಶಕ್ತಿ ತುಂಬಿದ್ದಾರೆ. ಜಾತಿ, ಮತ, ಭೇದವಿಲ್ಲದೆ ಶ್ರೀಮಂತರಿಂದ ಹಿಡಿದು ಬಡವರವರೆಗೆ ಎಲ್ಲರನ್ನೂ ನಿರ್ಮಲವಾದ ಪ್ರೀತಿಯಿಂದ ಆಲಂಗಿಸಿಕೊಂಡು, ಜಗತ್ತಿನಾದ್ಯಂತ ಸುಮಾರು 4 ಕೋಟಿ ಜನರನ್ನು ಆಲಂಗಿಸಿ ಅವರಲ್ಲಿ ಭಕ್ತಿ ಮತ್ತು ಚೈತನ್ಯವನ್ನು ತುಂಬಿದ ಶಕ್ತಿ ಅಮ್ಮನ ರೋಮಾಂಚಕಾರಿ ಜೀವನ. ವ್ಯಕ್ತಿತ್ವ ದೊಡ್ಡದಾಗಿದ್ದರೆ, ವ್ಯಕ್ತಿ ಎಲ್ಲಿಂದ ಎಲ್ಲಿಗೂ ಬೆಳೆಯಬಹುದು ಎಂದರು.
ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಮಾನವ ಕುಲವನ್ನು ಬದಲಾವಣೆ ಮಾಡಲು ಹಣದಿಂದ ಸಾಧ್ಯವಿಲ್ಲ. ಅಮ್ಮನಂಥವರ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆಗಳಿಂದ ಸಾಧ್ಯ ಎಂದರು.ಮಾತಾ ಅಮೃತಾನಂದಮಯಿ ದೇವಿ ಮಾತನಾಡಿ, ನಮ್ಮ ಕರ್ಮ ಒಳ್ಳೆಯದಾಗಿದ್ದರೆ, ನಮ್ಮ ಬದುಕು ಉತ್ತಮವಾಗಲಿದೆ. ಕೋವಿಡ್ ನಮಗೆ ಅನೇಕ ಪಾಠಗಳನ್ನು ಕಲಿಸಿದೆ, ಕಲಿಸಲು ಪ್ರಯತ್ನಿಸಿದೆ. ಪ್ರಕೃತಿ ಕೂಡ ನಮಗೆ ಅನೇಕ ಪಾಠಗಳನ್ನು ಕಲಿಸುತ್ತಿದೆ. ಸಹಕಾರ, ಸಹಬಾಳ್ವೆ, ಸಂಪರ್ಕ ನಮ್ಮಲ್ಲಿದ್ದರೆ ಅದುವೇ ಜೀವನ ಪಾಠ ಎಂದರು.
ಸಮಿತಿಯ ಪ್ರವೀಣ್ ಸ್ವಾಗತಿಸಿದರು. ರಾಮನಾಥ ವಂದಿಸಿದರು. ಅಶೋಕ್ ಶೆಣೈ ಹಾಗೂ ನಂದಿನಿ ಶೆಣೈ ನಿರೂಪಿಸಿದರು.
ಅಮ್ಮನ ಅಪ್ಪುಗೆಯ ಅನುಗ್ರಹ