ಸನಾತನ ಧರ್ಮ ಅಸ್ತಿತ್ವಕ್ಕೆ ಮಠ ಮಾನ್ಯಗಳು ಮುಖ್ಯ: ಭಾರತೀ ಶೆಟ್ಟಿ

KannadaprabhaNewsNetwork |  
Published : Apr 07, 2026, 02:45 AM IST
 | Kannada Prabha

ಸಾರಾಂಶ

ಈ ಜಗತ್ತಿನಲ್ಲಿ ಸನಾತನ ಧರ್ಮ ಉಳಿಯಬೇಕಾದರೆ ಮಠ ಮಾನ್ಯಗಳು ಇರಬೇಕೆಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಈ ಜಗತ್ತಿನಲ್ಲಿ ಸನಾತನ ಧರ್ಮ ಉಳಿಯಬೇಕಾದರೆ ಮಠ ಮಾನ್ಯಗಳು ಇರಬೇಕೆಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.

ತಾಲೂಕಿನ ಶನಿವಾರಸಂತೆ ಸಮೀಪದ ಆಲೂರು ಸಿದ್ದಾಪುರ ಬಳಿಯ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ೧೪ನೇ ವರ್ಷದ ಶ್ರೀ ಗುರುಸಿದ್ಧವೀರೇಶ್ವರ ಮಹಾ ರಥೋತ್ಸವದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸನಾತನ ಧರ್ಮ ಸದಾ ಅಸ್ತಿತ್ವದಲ್ಲಿರುವ ಜೀವನ ಮಾರ್ಗ. ಇದು ಹಿಂದೂ ಧರ್ಮದ ಮೂಲಭೂತ ಮತ್ತು ಪ್ರಾಚೀನ ಹೆಸರಾಗಿದ್ದು, ಯಾವುದೇ ನಿರ್ದಿಷ್ಟ ಆರಂಭ ಅಥವಾ ಅಂತ್ಯವಿಲ್ಲದ, ನೈಸರ್ಗಿಕ ಕಾನೂನುಗಳು, ಕರ್ಮ, ಜ್ಞಾನ ಮತ್ತು ಭಕ್ತಿಯ ಮೇಲೆ ಆಧರಿತವಾದ ಸಾರ್ವತ್ರಿಕ ತತ್ವಗಳನ್ನು ಒಳಗೊಂಡಿದೆ. ಪ್ರಸ್ತುತ ಸಂದರ್ಭದಲ್ಲಿ ಮಠ ಮಾನ್ಯಗಳು ಧಾರ್ಮಿಕ ಚಿಂತನೆಯ ಜೊತೆಗೆ ಸಮಾಜಮುಖಿ ಚಿಂತನೆ ಹಾಗೂ ಶಿಕ್ಷಣ ಸಂಸ್ಥೆಗಳನ್ನ ಕಟ್ಟಿ ಬೆಳಸುತ್ತಿರುವುದು ಅತ್ಯಂತ ಸಂತಸದ ವಿಷಯ. ಆ ನಿಟ್ಟಿನಲ್ಲಿ ಮಠ ಮಾನ್ಯಗಳು ಆಧ್ಯಾತ್ಮಕ ಕೇಂದ್ರಗಳಷ್ಟೆ ಅಲ್ಲ ಅವು ನೆಮ್ಮದಿಯ ತಾಣಗಳು ಕೂಡ ಆಗಿವೆ ಎಂದು ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಅಭಿಪ್ರಾಯಪಟ್ಟರು.

ಕೋಲಾರ ಜಿಲ್ಲಾ ನ್ಯಾಯಾಧೀಶರಾದ ಜಯಶ್ರೀ ಮಾತನಾಡಿ, ಬೆಳ್ಳಿ, ಬಂಗಾರ, ಹಣ, ಆಸ್ತಿ ಇದಾವುದೂ ನಿಜವಾದ ಸಂಪತ್ತಲ್ಲ. ನಮಗೆ ಎಲ್ಲವನ್ನೂ ದಯ ಪಾಲಿಸಿರುವ ಭಗವಂತನ ಸ್ಮರಣೆಯೇ ನಿಜವಾದ ಸಂಪತ್ತು. ಭಗವಂತನ ಸ್ಮರಣೆಯಿಂದ ಯಾವಾಗ ವಿಮುಖರಾಗುತ್ತೇವೆಯೋ ಅಂದೇ ಆಪತ್ತು ಎಂದರು.ಮಡಿಕೇರಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಮಠ-ಮಾನ್ಯಗಳು ಸಮಾಜದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳಾಗಿ ಉಳಿಯಬೇಕು ಎಂಬುದು ಅನೇಕರ ಅಭಿಪ್ರಾಯವಾಗಿದೆ. ಇವು ಶಾಂತಿ ನೆಲೆಸುವ ತಾಣಗಳಾಗಿದ್ದು, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಮೂಲ ಮಠ-ಮಾನ್ಯಗಳು, ಧರ್ಮಗುರುಗಳು ಯಥಾನುಸಾರ ಉಪದೇಶ ನೀಡಿ ನೈತಿಕ-ಮಾನವೀಯ ಮೌಲ್ಯಗಳನ್ನು ಕಟ್ಟಿ ಕೊಡುತ್ತಿದ್ದಾರೆ. ಧಾರ್ಮಿಕ ಜಾಗೃತಿ ಹೆಚ್ಚುತ್ತಿರುವಾಗ ಸಂಬಂಧಗಳು ಹದಗೆಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದರು.

ಮನೆಹಳ್ಳಿ ಮಠಾಧ್ಯಕ್ಷ ಶ್ರೀ ಮಹಾಂತಶಿವಲಿಂಗ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕ್ಷೇತ್ರಕ್ಕೆ ಸಹಕಾರ ನೀಡಿದ ಗಣ್ಯರಿಗೆ ಸನ್ಮಾನ ನಡೆಯಿತು. ವೇದಿಕೆಯಲ್ಲಿ ಅರಮೇರಿ ಕಳಂಚೇರಿ ಮಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲು ಮಠಾಧ್ಯಕ್ಷರಾದ ಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ, ಕೆಸತೂರು ಮಠಾಧ್ಯಕ್ಷ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ, ಜಿಪಂ ಉಪ ಕಾರ್‍ಯದರ್ಶಿ ಚಂದ್ರಶೇಖರ್, ಹಿರಿಯ ಸಾಹಿತಿ ಮೋಹನ್‌ ಪಾಳೇಗಾರ್, ಬೆಮ್ಮತ್ತಿ ಸುರೇಶ್, ಶಕ್ತಿ ದಿನಪತ್ರಿಕೆ ಮುಖ್ಯ ಸಂಪಾದಕ ಅನಂತಶಯನ, ಚಲನಚಿತ್ರ ನಟ ಧರ್ಮ, ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಕೊಡಗು ವಿಶ್ವ ವಿಧ್ಯಾಲಯದ ಕನ್ನಡ ಉಪನ್ಯಾಸಕ ಜಮೀರ್ ಅಹಮದ್ ಇದ್ದರು.

ನಿರ್ವಹಣೆಯನ್ನು ಎಸ್. ಮಹೇಶ್ ವಹಿಸಿದ್ದರು.ಶಿಕ್ಷಕ ಬಸವರಾಜ್ ಕಾರ್‍ಯಕ್ರಮ ನಿರೂಪಿಸಿದರು.

ಸಾಂಸೃತಿಕ ವೇದಿಕೆಯಲ್ಲಿ ಭಕ್ತಿ ಗೀತೆಗಳು, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಕೊಳಲು ವಾದನ ಕಾರ್ಯಕ್ರಮ ನಡೆಯಿತು.

ಪ್ರತಿ ವರ್ಷದಂತೆ ಏಪ್ರಿಲ್ ತಿಂಗಳ ಹುಣ್ಣಿಮೆಯ ೨ನೇ ದಿನ ನಡೆಯುವ ೩ ದಿನಗಳ ದಾರ್ಮಿಕ ಆಚರಣೆಯಲ್ಲಿ ಸೂರ್ಯ ಚಂದ್ರ ಮಂಡಲೋತ್ಸವ, ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವ, ಶ್ರೀ ವೀರಭದ್ರ ಸ್ವಾಮಿಯ ಕೊಂಡೋತ್ಸವಗಳು ನಡೆದು, ಶನಿವಾರ ತಡರಾತಿ ಶ್ರದ್ಧಾ ಭಕ್ತಿಯಿಂದ ೧೪ನೇ ವರ್ಷದ ಶ್ರೀ ಗುರುಸಿದ್ಧವೀರೇಶ್ವರ ಮಹಾರಥೋತ್ಸವದಲ್ಲಿ ಫಲ ಪುಷ್ಪಗಳಿಂದ ಅಲಂಕೃತ ರಥದಲ್ಲಿ ಶ್ರೀ ಸ್ವಾಮಿಯ ಪೀಟವನ್ನಿರಿಸಿ ಉತ್ಸವ ನಡೆಯಿತು.

ಕ್ಷೇತ್ರನಾಥ ಶ್ರೀ ವೀರಭದ್ರೇಶ್ವರ, ಶ್ರೀ ತಪೋವನೇಶ್ವರಿ, ಚಲುವರಾಯಸ್ವಾಮಿಯ ಉತ್ಸವ ಮೂರ್ತಿಗಳೊಂದಿಗೆ ಯಶಳೂರಿನ ನಂದಿದ್ವಜ, ವೀರಗಾಸೆ , ದುಗ್ಗಳ ಹೊತ್ತ ಮಹಿಳೆಯರು ಉತ್ಸವಕ್ಕೆ ಮೆರುಗು ತಂದರು, ಶ್ರೀ ವೃಷಭಲಿಂಗೇಶ್ವರಸ್ವಾಮಿಯವರ ಸನ್ನಿದಾನದಲ್ಲಿ ಮಹಾ ಮಂಗಳಾರತಿ ನಡೆಯಿತು. ವರ್ಣರಂಜಿತ ಪಟಾಕಿಗಳನ್ನು ಸಿಡಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10ರಂದು ಕಾರ್ಕಳದಲ್ಲಿ ‘ನಮನ’ ಚಿತ್ರಕಲಾ ಪ್ರದರ್ಶನ
‘ಸೂಪರ್ 36’, ‘ಸ್ಟೇಟ್ ಟಾಪರ್ಸ್ ’ ಬೃಹತ್ ಯೋಜನೆ