ಗದಗ: ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರಗಳು ಮಾಡದೇ ಇರುವಂತಹ ಕೆಲಸವನ್ನು ನಾಡಿನ ಮಠಗಳು ಮಾಡುತ್ತಿವೆ. ಇದು ದೇಶಕ್ಕೆ ಮಾದರಿಯಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಶುಕ್ರವಾರ ನಗರದ ಆನಂದ ಆಶ್ರಮದ ಆವರಣದಲ್ಲಿ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಆನಂದಾಶ್ರಮದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಸಮಾಜದ ಏಳ್ಗೆಯ ದೃಷ್ಟಿಯಿಂದ ಈ ಕಾರ್ಯಕ್ರಮವೊಂದು ಉತ್ತಮ ಉದಾಹರಣೆಗಾಗಿದೆ. ಸ್ವಾತಂತ್ರ್ಯ ಪೂರ್ವ ದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಬಡ ಮಕ್ಕಳಿಗೆ ಶಿಕ್ಷಣ ನೀಡಿದ್ದಕ್ಕೆ ಶ್ರೀ ಮಠಕ್ಕೆ ಶಿಕ್ಷಣ ಸಚಿವನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮಕ್ಕಳ ವಿದ್ಯಾಭ್ಯಾಸ, ಶಿಕ್ಷಣಕ್ಕೆ ಯಾವುದೇ ಮಿತಿ ಇಲ್ಲ, ಬೌಂಡರಿ ಇಲ್ಲ, ಸರ್ವರನ್ನು ಬೆಳೆಸುವುದು ಇದರ ಉದ್ದೇಶವಾಗಿದೆ. ನಾನು ಶಿಕ್ಷಣ ಸಚಿವನಾದ ನಂತರ ಮಕ್ಕಳಲ್ಲಿರುವ, ಕಾಪಿ ಹೊಡೆಯುವ ಸಂಸ್ಕೃತಿ ಹೊಡೆದೊಡಿಸಲು ವೆಬ್ ಕಾಸ್ಟಿಂಗ್ ಪ್ರಾರಂಭಿಸಿ ಕಾಪಿ ನಿಲ್ಲಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಿದೆ ಎಂದರು.ಮಕ್ಕಳ ಸಾಧನೆಗೆ ಲಿಮಿಟ್ ಇಲ್ಲ, ದೇಶ ಉದ್ಧಾರವಾಗಬೇಕಾದರೆ ಶಾಲೆಯ ಗಂಟೆ ಬಾರಿಸಬೇಕು. ವಿದ್ಯಾಭ್ಯಾಸ ಇದ್ದರೆ ಮಾತ್ರ ಬೆಳವಣಿಗೆ ಆಗಲು ಸಾಧ್ಯವಾಗುತ್ತದೆ. ನಾಡಿನ ಹಲವಾರು ಮಠಗಳು ಅನ್ನದಾಸೋಹದ ಜತೆಗೆ ಶಿಕ್ಷಣ ದಾಸೋಹ ನೀಡುತ್ತಿವೆ. ನಾನು ಶಿಕ್ಷಣ ಸಚಿವನಾಗಿ ಇಲ್ಲಿಗೆ ಬಂದು ತಿಳಿದುಕೊಂಡು ಹೋಗಿ ಅದನ್ನು ಸರ್ಕಾರಿ ಶಾಲೆಯಲ್ಲಿ ಅಳವಡಿಸಲು ಪ್ರಯತ್ನಿಸುತ್ತೇನೆ ಎಂದರು.
ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಬಸವತತ್ವದ ಮೂಲಕ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಶೂದ್ರರು, ಅಸ್ಪೃಶ್ಯರು, ಬಡವರು ಉದ್ಧಾರವಾಗಿದ್ದರೆ ಅದು ಈ ಮಠಾಧೀಶರಿಂದ ಆಗಿದೆ. ವೀರಶೈವ ಲಿಂಗಾಯತ ಮಠಾಧೀಶರು ಸಮಾಜದಲ್ಲಿನ ಮೇಲು ಕೀಳು ಹೊಡೆದು ಹಾಕಿದ್ದು, ಕಾನೂನಿಂದ ಇದನ್ನು ಮಾಡಲು ಸಾಧ್ಯವಿಲ್ಲ, ಸರ್ಕಾರಗಳು ಕೇವಲ ಕಾನೂನು ಮಾಡಬಹುದು ಅಷ್ಟೇ, ಸಮಾಜ ಸುಧಾರಣೆಯಾಗಲು ಶ್ರೀ ಮಠಗಳು ಕಾರಣವಾಗಿದೆ. ಇವರೆಲ್ಲಾ ಬಸವಣ್ಣನವರ ವಾರಸುದಾರರು ಎಂದರು.ಲಿಂಗಾಯತ ಧರ್ಮ ಗುರುಗಳು ಬಸವಣ್ಣನವರು, ಲಿಂಗಾಯತ ಧರ್ಮ ನಡೆಯುತ್ತಿರುವುದು ವಚನಗಳ ಆಧಾರದಲ್ಲಿ ನಮಗೆಲ್ಲಾ ವಚನಗಳೇ ಧರ್ಮ ಗ್ರಂಥವಾಗಿದೆ. ಆ ಹಾಲಕೆರೆ ಅಜ್ಜನವರು ಇದನ್ನೆಲ್ಲಾ ಪಾಲಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೆಡಿಕಲ್ ಕಾಲೇಜು ನಿರಾಕರಿಸಿದ್ದು ಅಜ್ಜನವರು ಎಂದರು.
ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಕಟ್ಟಡವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು. ಆನಂದಾಶ್ರಮದ ನೂತನ ಕಟ್ಟಡಗಳನ್ನು ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿಯ ಸಿದ್ಧಲಿಂಗ ಶ್ರೀಗಳು ಉದ್ಘಾಟಿಸಿದರು.ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಮತ್ತಿತರರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ರೋಣ ಶಾಸಕ, ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ ಮಾತನಾಡಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದರು.
ನರೇಗಲ್ಲ ಕಾಲೇಜಿನ ಪ್ರಾಚಾರ್ಯ ವೈ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಪಿ. ಪಾಟೀಲ ಗುರೂಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಉಮೇಶಗೌಡ ಪಾಟೀಲ, ರವೀಂದ್ರನಾಥ ದೊಡ್ಡಮೇಟಿ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು. ಎ.ಎನ್. ಹುಡೇದ ನಿರೂಪಿಸಿದರು. ನಾಡಿನ ವಿವಿಧ 30ಕ್ಕೂ ಹೆಚ್ಚಿನ ಮಠಾಧೀಶರು ಪಾಲ್ಗೊಂಡಿದ್ದರು.ರಾಜ್ಯದಲ್ಲಿ ಶಿಕ್ಷಣ ನೀತಿ ಗೊಂದಲ ಇದೆ. ರಾಷ್ಟ್ರೀಯ ಶಿಕ್ಷಣ ತ್ರಿಭಾಷಾ ನೀತಿ, ರಾಜ್ಯದ ಶಿಕ್ಷಣದಲ್ಲಿ ದ್ವಿ ಭಾಷೆ ನೀತಿ, ದೇಶದಲ್ಲಿ ಒಂದೇ ಶಿಕ್ಷಣ ನೀತಿ ಇರಬೇಕು, ನಾನು ಮೋದಿ ಪರವಾಗಿ, ಸಿದ್ದರಾಮಯ್ಯ ವಿರೋಧಿ ಅಲ್ಲ, ಬಡವರ ಮಕ್ಕಳ ಪರವಾಗಿದ್ದೇನೆ, ದೇಶದ ವಿವಿಧ ರಾಜ್ಯಗಳು ಮತ್ತು ದೇಶಗಳೊಂದಿಗೆ ಹೋರಾಟ ಮಾಡುವಂತಾ ಶಿಕ್ಷಣ ಬೇಕು ಅದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತನ್ನಿ, ನಿಮ್ಮ ತಂದೆ ಬಂಗಾರಪ್ಪನವರಂತೆ ಸಾಮಾಜಿಕ ಕಳಿಕಳಿ ನಿಮಗೂ ಇರಲಿ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.